Advertisement

ಸಿಬಂದಿ ಕೊರತೆ: ಬಾಗಿಲು ಹಾಕಿದೆ ಪಡುವನ್ನೂರು ಉಪ ಆರೋಗ್ಯ ಕೇಂದ್ರ

04:34 PM Jan 13, 2018 | |

ಬಡಗನ್ನೂರು: ಬಡಗನ್ನೂರು ಗ್ರಾ.ಪಂ. ವ್ಯಾಪ್ತಿಯ ಪಡುವನ್ನೂರು ಗ್ರಾಮದಲ್ಲಿ ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ಉಪ ಆರೋಗ್ಯ ಕೇಂದ್ರವಿದ್ದು, ಒಂದು ವರ್ಷದಿಂದ ಜನರ ಬಳಕೆಗೆ ಸಿಗುತ್ತಿಲ್ಲ.

Advertisement

ಈಶ್ವರಮಂಗಲ ಆರೋಗ್ಯ ಕೇಂದ್ರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸ್ಟಾಫ್ ನರ್ಸ್‌ ಇಲ್ಲದೆ ಇರುವ ಇಬ್ಬರು ಶಕ್ತಿಮೀರಿ ಕೆಲಸ ಮಾಡುತ್ತಿದ್ದಾರೆ. ಪಡುವನ್ನೂರು ಗ್ರಾಮದ ಹಿರಿಯ ಆರೋಗ್ಯ ಸಹಾಯಕಿ ಸಕೀನಾ ಕಾರಣಾಂತರದಿಂದ ಹುದ್ದೆ ಬಿಟ್ಟು ಹೋಗಿದ್ದು, ವರ್ಷ ಕಳೆದರೂ ಭರ್ತಿಯಾಗಿಲ್ಲ. ಹೀಗಾಗಿ, ಪಡುವನ್ನೂರು ಗ್ರಾಮಸ್ಥರು 6 ಕಿ.ಮೀ. ದೂರದ ಈಶ್ವರಮಂಗಲಕ್ಕೆ ಬಾಡಿಗೆ ಆಟೋದಲ್ಲಿ ತೆರಳಿ ಚಿಕಿತ್ಸೆ ಪಡೆಯುವ ಸ್ಥಿತಿ ಇದೆ. 

ಬಡಗನ್ನೂರು ಗ್ರಾಮದ ಕಿರಿಯ ಆರೋಗ್ಯ ಸಹಾಯಕಿ ರಾಜೇಶ್ವರಿ ವಯೋ ನಿವೃತ್ತಿ ಹೊಂದಿದ್ದು, ಅವರ ಜಾಗಕ್ಕೂ
ನೇಮಕಾತಿ ನಡೆದಿಲ್ಲ. ಇನ್ನೊಂದು ತಿಂಗಳಲ್ಲಿ ನೆಟ್ಟಣಿಗೆ ಮೂಟ್ನೂರು ಗ್ರಾಮದ ಕಿರಿಯ ಆರೋಗ್ಯ ಸಹಾಯಕಿ ಉಮಾವತಿ ನಿವೃತ್ತಿ ಹೊಂದಲಿದ್ದಾರೆ. ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಹಿರಿಯ ಆರೋಗ್ಯ ಸಹಾಯಕಿ ಚಂಚಲಾಕ್ಷಿ ಒಬ್ಬರೇ ಕರ್ತವ್ಯ ನಿರ್ವಹಿಸುವುದು ಕಷ್ಟವಾಗುತ್ತಿದೆ. ಹೀಗಾಗಿ, ಪಡುವನ್ನೂರು ಗ್ರಾಮದ ಸ್ನೇಹ ಕ್ಲಿನಿಕ್‌ ಒಂದು ವರ್ಷದಿಂದ ಬಾಗಿಲು ತೆರೆದಿಲ್ಲ. ಸುತ್ತ ಕಾಡು ಬೆಳೆದು, ಮರದ ಕೊಂಬೆಗಳೂ ಕಟ್ಟಡವನ್ನು ಆವರಿಸಿವೆ.

ಮಳೆಗಾಲದ ಅವಧಿಯಲ್ಲಿ ಸಾಂಕ್ರಾಮಿಕ ರೋಗಗಳು ಹರಡುವುದರಂದ ಈಶ್ವರ ಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇನ್ನಷ್ಟು ಸಿಬಂದಿ ನೇಮಿಸಬೇಕು. ಪಡುವನ್ನೂರು ಸ್ನೇಹಾ ಕ್ಲಿನಿಕ್‌ ಉಪ ಆರೋಗ್ಯ ಕೇಂದ್ರಕ್ಕೆ ಖಾಯಂ ಆರೋಗ್ಯ ಸಹಾಯಕಿ ನೇಮಕಗೊಳಿಸಬೇಕು. ವಾರಕ್ಕೊಂದು ಸಲವಾದರೂ ವೈದ್ಯರು ತಪಾಸಣೆಗೆ ಆಗಮಿಸಿ, ಈ ಭಾಗದ ಜನರ ಸಮಸ್ಯೆಗೆ ಸ್ಪಂದಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next