ದೊಡ್ಡಬಳ್ಳಾಪುರ: ಅಕ್ಟೋಬರ್ ತಿಂಗಳ ಪಡಿತರ ಆಹಾರಧಾನ್ಯ ಬಿಡುಗಡೆಯಾಗಿದೆ. ಹಲವು ನ್ಯಾಯಬೆಲೆ ಅಂಗಡಿಗಳಲ್ಲಿ ಈಗಾಗಲೇ ದಾಸ್ತಾನು ಖಾಲಿಯಾಗಿದ್ದು, ಪಡಿತರದಾರರು ನ್ಯಾಯಬೆಲೆ ಅಂಗಡಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪಡಿತರ ವಿವರ: ಅಂತ್ಯೋದಯ ಪಡಿತರ ಚೀಟಿ ಕಾರ್ಡ್‌ದಾರರಿಗೆ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಪ್ರತಿ ಕಾರ್ಡ್‌ಗೆ ಉಚಿತವಾಗಿ 35 ಕೆ.ಜಿ. ಅಕ್ಕಿ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನಯೋಜನೆಯಡಿ ಉಚಿತವಾಗಿ ಪ್ರತಿ ಸದಸ್ಯರಿಗೆ5 ಕೆ.ಜಿಅಕ್ಕಿ ಹಾಗೂ ಪ್ರತಿ ಕಾರ್ಡ್‌ಗೆ 2 ಕೆ.ಜಿ. ಕಡಲೆ ಕಾಳು ವಿತರಿಸಲಾಗುವುದು. ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪ್ರತಿ ಸದಸ್ಯರಿಗೆ 5 ಕೆ.ಜಿ.ಅಕ್ಕಿ ಹಾಗೂ ಪ್ರತಿ ಕಾರ್ಡ್‌ಗೆ 2 ಕೆ.ಜಿ ಗೋಧಿ ಉಚಿತವಾಗಿ ವಿತರಿಸಲಾಗುವುದು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಪ್ರತಿ ಸದಸ್ಯರಿಗೆ 5 ಕೆ.ಜಿ. ಅಕ್ಕಿ ಹಾಗೂ ಪ್ರತಿ ಕಾರ್ಡ್‌ಗೆ 2ಕೆ.ಜಿಕಡಲೆಕಾಳು ಉಚಿತವಾಗಿ ವಿತರಿಸಲಾಗುವುದು. ಎಪಿಎಲ್ ಪಡಿತರ ಚೀಟಿ ಹೊಂದಿರುವ, ಒಪ್ಪಿಗೆ ನೀಡಿದ ಪಡಿತರ ಚೀಟಿಗೆ ಪ್ರತಿ ಕೆ.ಜಿ ಗೆ ರೂ.15 ರಂತೆ ಏಕ ಸದಸ್ಯರಿಗೆ 5 ಕೆ.ಜಿ. ಅಕ್ಕಿ ಹಾಗೂ 2 ಮತ್ತು ಹೆಚ್ಚಿನ ಸದಸ್ಯರಿಗೆ 10 ಕೆ.ಜಿ. ಅಕ್ಕಿ ವಿತರಿಸಲಾಗುವುದು ಎಂದು ಆಹಾರ ಇಲಾಖೆ ತಿಳಿಸಿದೆ.
ಪಡಿತರದಾರರ ಅಲೆದಾಟ: ಅ.16ರಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಟೋಬರ್ ತಿಂಗಳ ಪಡಿತರ ಧಾನ್ಯ ವಿತರಣೆ ಮಾಡಲಾಗುತ್ತಿದೆ. ಆದರೆ ಹಲವಾರು ನ್ಯಾಯಬೆಲೆ ಅಂಗಡಿಗಳು, ಹೆಚ್ಚವರಿ ಸಿಬ್ಬಂದಿ ನೇಮಿಸಿಕೊಂಡು ಪಡಿತರ ವಿತರಿಸಿ, ಬಾಗಿಲು ಮುಚ್ಚಿವೆ. ಅಂತರಾಜ್ಯ ಹಾಗೂ ಅಂತರ ಜಿಲ್ಲೆ ಪೋರ್ಟಬಿಲಿಟಿ ಜಾರಿಯಲ್ಲಿರುವುದರಿಂದ ಯಾವುದೇ ಪಡಿತರ ವರ್ಗದ ಪಡಿತರ ಚೀಟಿಗೆ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಯಾರಿಗೂ ಸಹ ರೇಷನ್ ನಿರಾಕರಿಸುವಂತಿಲ್ಲ. ಕೆಲವು ಅಂಗಡಿಗಳಲ್ಲಿ ಪೋರ್ಟಬಿಲಿಟಿ ಪಡಿತರದಾರರು ರೇಷನ್ ಪಡೆಯುವುದರಿಂದ, ಅಲ್ಲಿನ ನ್ಯಾಯಬೆಲೆ ಅಂಗಡಿಗಳಲ್ಲಿನ ಖಾಯಂ ಪಡಿತರದಾರರು ಬೇರೆ ಅಂಗಡಿಗಳಿಗೆ ಅಲೆಯಬೇಕಿದೆ. ಅಂತೆಯೇ, ಮಾಲೀಕರು ನ್ಯಾಯಬೆಲೆ ಅಂಗಡಿಗಳಲ್ಲಿನ ಪಡಿತರದಾರರಿಗೆ ಮೊದಲ ಆದ್ಯತೆ ಎಂದು ಹೇಳುತ್ತಿರುವುದರಿಂದ ಪೋರ್ಟಬಿಲಿಟಿ ಪಡಿತರದಾರರು ಬೇರೆಡೆ ಅಲೆದಾಡುವ ಸ್ಥಿತಿ ಉಂಟಾಗಿದೆ.
ಹೆಚ್ಚಿನ ಪಡಿತರ ನೀಡಲಿ: ಪಡಿತರ ವಿತರಣೆ ಆರಂಭಗೊಂಡ ದಿನಗಳಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಹೆಚ್ಚಿನ ಜನಸಂದಣಿಯಾಗಿತ್ತು. ಈಗ ನಮ್ಮ ಅಂಗಡಿಯ ಪಡಿತರದಾರರಿಗೆ ರೇಷನ್ ನೀಡದಿದ್ದರೆ, ಜಗಳ ಮಾಡುತ್ತಾರೆ. ಅನಿವಾರ್ಯವಾಗಿ ಪೋರ್ಟಬಿಲಿಟಿ ಪಡಿತರದಾರರಿಗೆ ಮಾರನೇ ದಿನಬರುವಂತೆ ಹೇಳಲಾಗುತ್ತಿದೆ. ಸರ್ಕಾರ ಹೆಚ್ಚಿನ ದಾಸ್ತಾನು ನೀಡುವುದು ಹಾಗು ಎಲ್ಲಾ ಪಡಿತರಅಂಗಡಿಗಳು ಒಂದೇ ಸಮಯ ಪಾಲನೆ ಮಾಡುವುದನ್ನು ಜಾರಿ ಮಾಡಿದರೆ, ಸಮಸ್ಯೆ ಬಗೆ ಹರಿಸಬಹುದಾಗಿದೆ ಎನ್ನುತ್ತಾರೆ ಕುಚ್ಚಪ್ಪನ ಪೇಟೆಯ ನ್ಯಾಯಬೆಲೆ ಅಂಗಡಿ ಮಾಲೀಕ ಗಂಗಾಪ್ರಸಾದ್.
ಪಡಿತರ ಧಾನ್ಯಗಳನ್ನು ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಕಾರ್ಡ್‌ಗಳ ಆಧಾರದ ಮೇಲೆ ನೀಡಲಾಗುತ್ತಿದ್ದು, ಲಭ್ಯತೆ ಇದ್ದರೆ ಶೇ.10ರವರೆಗೆ ಹೆಚ್ಚಿಸಬಹುದಾಗಿದೆ. ಈಗಾಗಲೇ ಬಾಗಿಲು ಹಾಕಿರುವ ನ್ಯಾಯಬೆಲೆ ಅಂಗಡಿಗಳಲ್ಲಿ ದಾಸ್ತಾನು ಖಾಲಿಯಾಗಿದ್ದು, ಇದರಲ್ಲಿ ಪೋರ್ಟಬಿಲಿಟಿ ಪಡಿತರದಾರರು ಸಹ ರೇಷನ್ ಪಡೆದಿದ್ದಾರೆ. ದಾಸ್ತಾನು ಇದ್ದರೂ ಸರಿಯಾಗಿ ವಿತರಣೆ ಮಾಡದ ನ್ಯಾಯಬೆಲೆ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು.
–ರಮೇಶ್, ಆಹಾರ ಶಿರಸ್ತೇದಾರ್.