ಹಾವೇರಿ: ವರ್ಷವಿಡೀ ಒಂದಲ್ಲ ಒಂದು ಸಮಸ್ಯೆಯ ಸುಳಿಯಲ್ಲಿ ಸಿಲುಕುವ ಅನ್ನದಾತನಿಗೆ ಈ ಬಾರಿಯ ಮುಂಗಾರು ಹಂಗಾಮಿನ ಕೃಷಿಗೆ ಯೋಗ್ಯ ಎತ್ತುಗಳು ಸಿಗದೇ ಪರದಾಡುವ ಪರಿಸ್ಥಿತಿ ಎದುರಾಗಿದೆ. ಇದು ಲಾಕ್‌ಡೌನ್ ಸೃಷ್ಟಿಸಿದ ಆವಾಂತರಗಳಲ್ಲೊಂದಾಗಿದೆ.
ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ವಿಧಿಸಿದ ಲಾಕ್‌ಡೌನ್‌ನಿಂದಾಗಿ ಎತ್ತುಗಳ ಸಂತೆ ನಡೆದಿಲ್ಲ. ಹೀಗಾಗಿ ರೈತರು ಯೋಗ್ಯ ಎತ್ತುಗಳನ್ನು ಖರೀದಿಸಲಾಗದೆಈಗ ಪರಿತಪಿಸುವಂತಾಗಿದೆ. ಆದ್ದರಿಂದ ಈ ಬಾರಿ ರೈತರು ಕೃಷಿ ಚಟುವಟಿಕೆಗೆ ಯಂತ್ರಗಳಿಗೇ ಹೆಚ್ಚು ಮೊರೆ ಹೋಗುವುದು ಅನಿವಾರ್ಯವಾಗಿದೆ.
ಸಾಮಾನ್ಯವಾಗಿ ರೈತರು ಮುಂದಿನ ಹಂಗಾಮಿನ ಕೃಷಿ ಚಟುವಟಿಕೆಗೆ ಬೇಕಾದ ಎತ್ತುಗಳನ್ನು ಹೊಸ ವರ್ಷ ಯುಗಾದಿ ಸಮಯದಲ್ಲಿಯೇ ಜಾನುವಾರು ಸಂತೆಗೆ ಹೋಗಿ ಖರೀದಿಸುತ್ತಾರೆ. ಅವುಗಳನ್ನು ಕೃಷಿ ಚಟುವಟಿಕೆಗೆ ಬಳಸಿಕೊಂಡು ಮುಂದಿನ ಹಂಗಾಮಿನ ವೇಳೆಗೆ ಅದು ಬಲಿಷ್ಠವಾಗಿದ್ದರೆ ಮತ್ತೆ ಕೃಷಿ ಚಟುವಟಿಕೆಗೆ ಬಳಸಿಕೊಳ್ಳುತ್ತಾರೆ. ದುರ್ಬಲವಾಗಿದ್ದರೆ ಅವುಗಳನ್ನು ಮಾರಿ ಇಲ್ಲವೇ ಗೋಶಾಲೆಗೆ ಬಿಟ್ಟು ಹೊಸ ಎತ್ತುಗಳನ್ನು ಖರೀದಿಸುವುದು ವಾಡಿಕೆ. ಉತ್ತರಕರ್ನಾಟಕ ಭಾಗದಲ್ಲಿ ಪ್ರಸಿದ್ಧಿ ಪಡೆದಿರುವ ಹಾವೇರಿಯ ಜಾನುವಾರು ಸಂತೆ ಲಾಕ್‌ಡೌನ್ ಕಾರಣದಿಂದಾಗಿ ಈ ಬಾರಿ ನಡೆಯಲೇ ಇಲ್ಲ. ಹೀಗಾಗಿ ಅನೇಕ ರೈತರಿಗೆ ಉಳುಮೆಗೆ ಯೋಗ್ಯ ಎತ್ತುಗಳನ್ನು ಖರೀದಿಸಲು ಆಗಿಲ್ಲ. ಇನ್ನು ಕೆಲವರು ಪರಿಚಯಸ್ಥರ ಮನೆಗೇ ಹೋಗಿ ತಮಗೆ ಬೇಕಾದ ಎತ್ತುಗಳನ್ನು ಖರೀದಿಸಿದ್ದಾರಾದರೂ ಅವರ ಪ್ರಮಾಣ ತೀರಾ ಕಡಿಮೆ. ಹೀಗಾಗಿ ಯೋಗ್ಯ ಎತ್ತುಗಳು ಇಲ್ಲದೇ ಈ ಬಾರಿ ಹೊಲಕ್ಕೆ ಕಾಲಿಡುವ ಪರಿಸ್ಥಿತಿ ಅನ್ನದಾತರದ್ದಾಗಿದೆ.
ಇಂದಿನ ಯಾಂತ್ರೀಕೃತ ಜಗತ್ತಿನಲ್ಲಿ ಕೃಷಿ ಕ್ಷೇತ್ರವೂ ಹಿಂದೆ ಬಿದ್ದಿಲ್ಲ. ಇಲ್ಲಿಯೂ ಎಲ್ಲದಕ್ಕೂ ಯಂತ್ರಗಳನ್ನು ಬಳಸಲಾಗುತ್ತಿದೆ. ಆದರೆ, ಯಾಂತ್ರಿಕೃತ ಕೃಷಿ ಬಹುಸಂಖ್ಯಾತ ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ವರ್ಗದ ರೈತರಿಗೆ ಆರ್ಥಿಕ ಹೊರೆಯಾಗುತ್ತದೆ. ಆದ್ದರಿಂದ ರೈತರು ಉಳುಮೆ, ಬಿತ್ತನೆ, ಕಟಾವು ಸೇರಿದಂತೆ ಎಲ್ಲದಕ್ಕೂ ಎತ್ತು ಹಾಗೂ ಮಾನವಶಕ್ತಿಯನ್ನೇ ಅವಲಂಬಿಸಿಕೊಂಡೇ ಬಂದಿದ್ದಾರೆ. ಮನೆಯಲ್ಲಿ ಒಂದು ಜೊತೆ ಎತ್ತುಗಳಿದ್ದರೆ ಅವುಗಳನ್ನು ವರ್ಷಪೂರ್ತಿಯಾಗಿ ಎಲ್ಲ ಕೃಷಿ ಚಟುವಟಿಕೆಗೆ ಬಳಸಿಕೊಳ್ಳಲು ಅನುಕೂಲವಾಗುತ್ತದೆ. ಜತೆಗೆ ಪರೋಕ್ಷವಾಗಿ ಸಾಂಪ್ರದಾಯಿಕ ಸಹಜ ಕೃಷಿಗೂ ಪುಷ್ಠಿ ನೀಡಿದಂತಾಗುತ್ತದೆ. ಆದರೆ, ಈ ಬಾರಿ ಕೃಷಿಗೆ ಯೋಗ್ಯ ಎತ್ತುಗಳು ಸಮರ್ಪಕ ಪ್ರಮಾಣದಲ್ಲಿ ಸಿಗದೆ ಇರುವುದು ರೈತರಿಗೆ ಹೊಸ ಸಮಸ್ಯೆಯಾಗಿ ಕಾಡುತ್ತಿದೆ.
ಬಾಡಿಗೆ ದುಬಾರಿ: ಟ್ರ್ಯಾಕ್ಟರ್ ಸೇರಿದಂತೆ ಇತರ ಕೃಷಿ ಯಂತ್ರೋಪಕರಣಗಳು ಬಾಡಿಗೆ ಆಧಾರದಲ್ಲಿ ಅಲ್ಲಲ್ಲಿ ಸಿಗುತ್ತಿದೆಯಾದರೂ ಅವುಗಳ ಬಾಡಿಗೆ ದರ ನಿಭಾಯಿಸುವುದು ಸಣ್ಣ ರೈತರಿಗೆ ಕಷ್ಟವಾಗಿದೆ. ಇನ್ನು ಸಾಲಸೂಲ ಮಾಡಿಯಾದರೂ ಬಾಡಿಗೆ ಯಂತ್ರ ಬಳಸಿಕೊಂಡೇ ಕೃಷಿ ಮಾಡಿದರಾಯಿತು ಎಂದುಕೊಂಡರೆ ಬಾಡಿಗೆ ಯಂತ್ರಗಳ ಸಂಖ್ಯೆ ಕಡಿಮೆ ಇರುವುದರಿಂದ ಅವು ರೈತರಿಗೆ ಅಗತ್ಯ ಸಮಯದಲ್ಲಿಯೂ ಸಿಗುವುದಿಲ್ಲ. ಇದರಿಂದ ಕೃಷಿ ಚಟುವಟಿಕೆ ಸಕಾಲಕ್ಕೆ ನಡೆಯದೆ ಅದು ಮುಂದೆ ಇಳುವರಿ ಮೇಲೆಯೂ ದುಷ್ಪರಿಣಾಮ ಬೀರುವ ಸಾಧ್ಯತೆಯೂ ಇದೆ. ಒಟ್ಟಾರೆ ಅನ್ನದಾತ ಈ ಬಾರಿ ಲಾಕ್‌ಡೌನ್ ಸೃಷ್ಟಿಸಿದ “ಎತ್ತುಗಳ ಸಮಸ್ಯೆ’ ಎಂಬ ಹೊಸ ಸವಾಲು ಎದುರಿಸಲೇಬೇಕಾಗಿದೆ.
ಟ್ರ್ಯಾಕ್ಟರ್ ಮೊರೆ : ಕಳೆದ ಸಲ ನೆರೆ ಬಂದಿದ್ದರಿಂದ ನಿರ್ವಹಣೆ ಮಾಡಲಾಗದೆ ಹಲವರು ಎತ್ತುಗಳನ್ನು ನವೆಂಬರ್- ಡಿಸೆಂಬರ್ ಒಳಗೆಯೇ ಕಡಿಮೆ ಬೆಲೆಗೆ ಮಾರಿದ್ದಾರೆ. ಲಾಕ್‌ಡೌನ್ ನಿಂದಾಗಿ ಜಾನುವಾರು ಸಂತೆ ನಡೆದಿಲ್ಲ. ಹೀಗಾಗಿ ಬಹಳಷ್ಟು ರೈತರಿಗೆ ಹೊಸ ಎತ್ತುಗಳನ್ನು ಖರೀದಿಸಲು ಸಾಧ್ಯವಾಗಿಲ್ಲ. ಮನೆಯಲ್ಲಿ ಎತ್ತು ಇರುವವರು ಅವುಗಳನ್ನೇ ಬಳಸಿಕೊಂಡು ಉಳುಮೆ ಮಾಡುವುದು ಅನಿವಾರ್ಯವಾಗಿದೆ. ಇಲ್ಲವೇ ಬಾಡಿಗೆ ಟ್ರ್ಯಾಕ್ಟರ್‌ಗೆ ಮೊರೆ ಹೋಗಬೇಕಾಗಿದೆ. ಒಂದು ವೇಳೆ ಇವು ಎರಡೂ ಸಾಧ್ಯವಾಗದಿದ್ದರೆ ಮನೆ ಮಂದಿಯೇ ನೊಗಹೊರುವುದು ಅನಿವಾರ್ಯ. –
ಹನುಮಂತಗೌಡ ಗಾಜೀಗೌಡ್ರ, ರೈತ
– ಎಚ್.ಕೆ. ನಟರಾಜ