ದೇವದುರ್ಗ: ನಿಲವಂಜಿ ಗ್ರಾಮದ ಕೃಷ್ಣಾ ನದಿ ತೀರದಲ್ಲಿರುವ ಏತ ನೀರಾವರಿ ಯೋಜನೆ ನಿರ್ವಹಣೆ ಕೊರತೆಯಿಂದ ನೀರಿನ ಅಭಾವ ಉಂಟಾಗಿದೆ. ಪಂಪ್‌ಹೌಸ್ ಮೂಲಕ ನೂರಾರು ಎಕರೆ ಪ್ರದೇಶಕ್ಕೆ ನೀರುಣಿಸುವ ಪೈಪ್ ಎರಡು ಕಡೆ ಒಡೆದು ವರ್ಷವಾದರೂ ಅ ಧಿಕಾರಿಗಳು ದುರಸ್ತಿ ಮಾಡುವ ಗೋಜಿಗೆ ಹೋಗಿಲ್ಲ.
ಲಕ್ಷಾಂತರ ರೂ. ಅನುದಾನ: ನಿಲವಂಜಿ ಗ್ರಾಮದಲ್ಲಿರುವ ಏತ ನೀರಾವರಿ ಯೋಜನೆ ಜಾಕ್‌ವೆಲ್, ಪಂಪ್‌ಹೌಸ್, ಮೋಟರ್, ವಿದ್ಯುತ್ ಸೇರಿ ಇತರೆ ನಿರ್ವಹಣೆ ಮಾಡಲು ಪ್ರತಿ ವರ್ಷ ಲಕ್ಷಾಂತರ ರೂ. ಟೆಂಡರ್ ಕರೆಯಲಾಗುತ್ತಿದೆ. ಕಳೆದ ವರ್ಷ 15 ಲಕ್ಷ ರೂ. ಖಾಸಗಿ ಕಂಪನಿಯೊಂದಕ್ಕೆ ಟೆಂಡರ್ ನೀಡಲಾಗಿತ್ತು. ಅರೆಬರೆ ಕೆಲಸ ಮಾಡಿರುವ ಆರೋಪ ಕೇಳಿ ಬರುತ್ತಿದೆ.
ಅವ್ಯವಸ್ಥೆ ಪಂಪ್‌ಹೌಸ್: ಕಳೆದ ಎರಡ್ಮೂರು ವರ್ಷಗಳಿಂದ ಪ್ರವಾಹ ಹಿನ್ನೆಲೆಯಲ್ಲಿ ಜಾಕ್‌ವೆಲ್, ಪಂಪ್‌ಹೌಸ್ ನೀರಿನಲ್ಲಿ ಮುಳುಗಿದ್ದು, ಪ್ರವಾಹ ತಗ್ಗಿದ ನಂತರ ಸ್ವತ್ಛತೆ ಕೈಗೊಳ್ಳದೇ ಇರುವುದರಿಂದ ಪಂಪ್ ಹೌಸ್ ಸುತ್ತಲೂ ಜಾಲಿಕಂಟಿಗಳು ಬೆಳೆದು ಅವ್ಯವಸ್ಥೆ ಆಗರವಾಗಿದೆ. ಪಂಪ್‌ಹೌಸ್ ಕಬ್ಬಿಣದ ಪೈಪ್‌ಗ್ಳು ತುಕ್ಕು ಹಿಡಿಯುತ್ತಿವೆ. ಒಳಗೂ ಜಾಲಿಗಿಡ ಬೆಳೆದಿವೆ.
ಕೇಂದ್ರ ಸ್ಥಾನದಲ್ಲಿಲ್ಲ ಕಚೇರಿ: ತಾಲೂಕು ಕೇಂದ್ರ ಸ್ಥಾನದಲ್ಲಿ ಸಣ್ಣ ನೀರಾವರಿ ಇಲಾಖೆ ಕಚೇರಿ ಇಲ್ಲವಾಗಿದೆ. ಏನೇ ಕೆಲಸಗಳಿದ್ದರೂ ರಾಯಚೂರಿಗೆ ಹೋಗಬೇಕು. ಇಲಾಖೆ ಯೋಜನೆಗಳಡಿ ಅರ್ಜಿ ಸಲ್ಲಿಸುವುದು ಸೇರಿದಂತೆ ಇತರೆ ಕಾರ್ಯಗಳಿಗೆ ಇಲ್ಲಿ ಕಚೇರಿ ಅವಶ್ಯಕತೆ ಇದೆ.
ರೈತರ ಆಗ್ರಹ: ಕಳೆದ ವರ್ಷಗಳಿಂದ ಒಡೆದ ಪೈಪ್ ದುರಸ್ತಿ ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ನೂರಾರು ಎಕರೆ ಪ್ರದೇಶಕ್ಕೆ ಸಮರ್ಪಕವಾಗಿ ನೀರುಣಿಸಲು ಆಗುತ್ತಿಲ್ಲ. ಮಳೆ ನಂಬಿ ಬದುಕಲು ಸಂಕಷ್ಟವಾಗುತ್ತಿದೆ. ಅಧಿಕಾರಿಗಳು ಕೂಡಲೇ ಪೈಪ್ ದುರಸ್ತಿ ಮಾಡಿಸುವಂತೆ ರೈತರು ಆಗ್ರಹಿಸಿದ್ದಾರೆ.
ಎರಡು ಕಡೆ ಒಡೆದ ಪೈಪ್ ದುರಸ್ತಿ ವಿಳಂಬವಾಗಿದೆ. ಈ ವರ್ಷ ನಿರ್ವಹಣೆ ಮಾಡಲು ಟೆಂಡರ್ ಹಂತದಲ್ಲಿದೆ. ಕಳೆದ ವಾರದ ಹಿಂದೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ.
ಚಂದ್ರಶೇಖರ,
ಎಇ, ಸಣ್ಣ ನೀರಾವರಿ ಇಲಾಖೆ
ತಾಲೂಕು ಕೇಂದ್ರದಲ್ಲಿ ಸಣ್ಣ ನೀರಾವರಿ ಇಲಾಖೆ ಇಲ್ಲದ ಕಾರಣ ಕೆರೆಗಳ ಅಭಿವೃದ್ಧಿ ಹಿನ್ನಡೆ ಯಾಗಿವೆ. ಏನೇ ಕೆಲಸ ಬಂದರೂ ರಾಯಚೂರಿಗೆ ಹೋಗಬೇಕಿದೆ.
ನರಸಣ್ಣ ನಾಯಕ,
ತಾಲೂಕು ಅಧ್ಯಕ್ಷ, ಕರ್ನಾಟಕ
ಪ್ರಾಂತ ರೈತ ಸಂಘ
*ನಾಗರಾಜ ತೇಲ್ಕರ್