Advertisement

ನಿರ್ವಹಣೆ ಕೊರತೆ: ಪಾಳುಬಿದ್ದ ಬಸ್‌ ತಂಗುದಾಣ

12:39 PM Dec 13, 2022 | Team Udayavani |

ಗುಂಡ್ಲುಪೇಟೆ: ತಾಲೂಕಿನ ಕಾಡಂಚಿನ ಚಿರಕನಹಳ್ಳಿ ಗ್ರಾಮದ ಮುಂಭಾಗ ವಿರುವ ಬಸ್‌ ತಂಗುದಾಣವು ನಿರ್ವಹಣೆಯ ಕೊರತೆಯಿಂದ ಪಾಳು ಬೀಳುವ ಹಂತಕ್ಕೆ ತಲುಪಿದೆ.

Advertisement

ತೆರಕಣಾಂಬಿ ಹೋಬಳಿಯ ವಡ್ಡಗೆರೆ ಗ್ರಾಪಂ ವ್ಯಾಪ್ತಿಗೆ ಬರುವ ಚಿರಕನಹಳ್ಳಿ ಗ್ರಾಮದಲ್ಲಿ ಸುಮಾರು 20 ವರ್ಷಗಳ ಹಿಂದೆ ನಿರ್ಮಾಣ ಮಾಡಲಾದ ಬಸ್‌ ತಂಗುದಾಣದ ಕಟ್ಟಡವು ಶಿಥಿಲಾವಸ್ಥೆ ತಲುಪಿದ್ದು, ಚೆಕ್ಕೆಗಳು ಒಡೆದು ಬೀಳುತ್ತಿದೆ. ಇದರಿಂದ ಕಬ್ಬಿಣ ಸರಳುಗಳು ಕಾಣುವಂತಾ ಗಿದ್ದು, ಸುಣ್ಣ ಬಣ್ಣವೆಲ್ಲ ಮಾಸಿ ಹೋಗಿ ಮಳೆ ಬಂದ ಸಂದರ್ಭದಲ್ಲಿ ತಂಗುದಾಣದ ಒಳಗೆ ನೀರು ಸೋರಿಕೆಯಾಗುತ್ತಿದೆ.

ಕುಡುಕರ ಅಡ್ಡೆ: ಬಸ್‌ ತಂಗುದಾಣ ಶಿಥಿಲವಾಗಿರುವು ದರಿಂದ ಯಾರು ಇತ್ತ ಅಷ್ಟಾಗಿ ಸುಳಿಯುವುದಿಲ್ಲ. ಈ ಕಾರಣದಿಂದ ಬೆಳಗ್ಗೆ ಮತ್ತು ರಾತ್ರಿ ಸಮಯದಲ್ಲಿ ಕುಡುಕರು ಇದನ್ನು ಅಡ್ಡೆಯನ್ನಾಗಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆ ಕುಡಿದು ಬಿಸಾಡಿದ ಮದ್ಯದ ಬಾಟಲಿ ಹಾಗೂ ಪೌಚ್‌ಗಳನ್ನು ತಂಗದಾಣದಲ್ಲಿ ಚೆಲ್ಲಾಪಿಲ್ಲಿಯಾಗಿ ರಾಶಿಗಟ್ಟಲೆ ಬಿದ್ದಿದೆ. ಜೊತೆಗೆ ಅನೈತಿಕ ಚಟುವಟಿಕೆ ತಾಣವಾಗಿಯು ಸಹ ಪರಿವರ್ತನೆಯಾಗಿದೆ.

ಕಟ್ಟಡದ ಸುತ್ತಲು ಅನೈರ್ಮಲ್ಯ: ನಿರ್ಮಾಣವಾಗಿ ಹಲವು ವರ್ಷ ಕಳೆದಿರುವ ಹಿನ್ನೆಲೆ ಹಾಗೂ ನಿರ್ವಹಣೆ ಕೊರತೆಯಿಂದ ಕಟ್ಟಡ ಸುತ್ತಲು ಆಳುದ್ದ ಗಿಡ ಗಂಟಿಗಳು ಬೆಳೆದುನಿಂತು ಅನೈರ್ಮಲ್ಯ ತಾಂಡವವಾಡುತ್ತಿದೆ. ಜೊತೆಗೆ ಬೆಳಗಿನ ಸಮಯದಲ್ಲಿ ಬೆರಳಣಿಕೆ ಮಂದಿ ಪ್ರಯಾಣಿಕರು ನಿಲ್ದಾಣದ ಬಳಿ ಬಸ್‌ ಹತ್ತಲು ಬರುತ್ತಾರೆ. ಅವರು ಸಹ ವಿಷಜಂತುಗಳ ಭೀತಿಯಲ್ಲಿ ನಿಲ್ದಾಣದ ಮುಂದೆ ನಿಲ್ಲಬೇಕಾದ ಪರಿಸ್ಥಿತಿ ಇದೆ.

ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯ: ಬಸ್‌ ತಂಗುದಾಣ ಶಿಥಿಲಾವಸ್ಥೆ ತಲುಪಿದ್ದು, ಛಾವಣಿಯ ಚೆಕ್ಕೆಗಳು ಒಡೆದು ಬೀಳುವ ಪರಿಸ್ಥಿಗೆ ತಲುಪಿದ್ದರು ಸಹ ಸ್ಥಳೀಯ ಗ್ರಾಪಂ ಅಧ್ಯಕ್ಷರು, ಸದಸ್ಯರು ಹಾಗೂ ಪಂಚಾಯಿತಿ ಅಧಿಕಾರಿಗಳು ಇತ್ತ ಗಮನ ನೀಡದೆ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ. ಈ ಕಾರಣದಿಂದ ದಿನ ಕಳೆಯುತ್ತಿದ್ದಂತೆ ಮಳೆ, ಗಾಳಿ, ಬಿಸಿಲಿಗೆ ಸಿಲುಕು ಕಟ್ಟಡವು ಬೀಳುವ ಹಂತಕ್ಕೆ ತಲುಪಿದೆ.

Advertisement

ಶಾಸಕರೇ ಇತ್ತ ಗಮನಿಸಿ : ತಂಗುದಾಣ ನಿರ್ಮಾಣವಾಗಿ ಹಲವು ವರ್ಷಗಳೇ ಕಳೆದಿರುವ ಹಿನ್ನೆಲೆ ಕಟ್ಟಡ ಬೀಳುವ ಹಂತಕ್ಕೆ ಬಂದು ತಲುಪಿದೆ. ಆದ್ದರಿಂದ ಕ್ಷೇತ್ರದ ಶಾಸಕ ಸಿ.ಎಸ್‌ .ನಿರಂಜನಕುಮಾರ್‌ ಇತ್ತ ಗಮನ ಹರಿಸಿ ಹಳೇ ತಂಗುದಾಣ ಕೆಡವಿ ಹೊಸ ಬಸ್‌ ಶೆಲ್ಟರ್‌ ನಿರ್ಮಾಣ ಮಾಡುವಂತೆ ಚಿಕರನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಚಿರಕನಹಳ್ಳಿ ಗ್ರಾಮದ ಬಸ್‌ ತಂಗುದಾಣ ಸುಮಾರು 20 ವರ್ಷ ಹಳೆಯದಾಗಿದೆ. ನಿರ್ಮಾಣದ ಹಂತದಲ್ಲಿ ಸುಣ್ಣ-ಬಣ್ಣ ಕಂಡಿದ್ದು, ಬಿಟ್ಟರೆ ನಿರ್ವಹಣೆಯ ಕೊರತೆಯಿಂದ ಸೋರುತ್ತಿದೆ. ಕಟ್ಟಡ ಬಿದ್ದು ಹೋಗಿ ಅಪಾಯ ಸಂಭವಿಸುವ ಮುನ್ನ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಸೂಕ್ತ ಬಸ್‌ ತಂದು ನಿರ್ಮಾಣ ಮಾಡಬೇಕು. -ಶ್ರೀನಿವಾಸ್‌, ಚಿರಕನಹಳ್ಳಿ ಗ್ರಾಮಸ್ಥರು

ಚಿರಕನಹಳ್ಳಿ ಬಸ್‌ ತಂಗುದಾಣವನ್ನು ಕೂಡಲೇ ಪರಿಶೀಲನೆ ನಡೆಸಿ, ನಂತರ ನಿಲ್ದಾಣದ ದುರಸ್ತಿಗೆ ಕ್ರಮ ವಹಿಸಲಾಗುವುದು -ಮಹದೇವಸ್ವಾಮಿ, ಪಿಡಿಒ, ವಡ್ಡಗೆರೆ ಗ್ರಾಪಂ

-ಬಸವರಾಜು ಎಸ್‌.ಹಂಗಳ

Advertisement

Udayavani is now on Telegram. Click here to join our channel and stay updated with the latest news.

Next