Advertisement

ಕಾಫಿ ಕೊಯ್ಲಿಗೆ ಕಾರ್ಮಿಕರ ಕೊರತೆ

05:13 PM Jan 13, 2021 | Team Udayavani |

ಶೃಂಗೇರಿ: ಕಾಫಿ ಕೊಯ್ಲು ತಾಲೂಕಿನಲ್ಲಿ ಆರಂಭವಾಗಿದ್ದರೂ, ಕಾರ್ಮಿಕರ ಕೊರತೆಯಿಂದ ಕಾಫಿ ಕೊಯ್ಲು ಮಂದಗತಿಯಲ್ಲಿ ಸಾಗಿದೆ. ಕೃಷಿಗೆ ಯಾಂತ್ರೀಕರಣ ಅನಿವಾರ್ಯವಾಗಿದ್ದರೂ, ಇನ್ನೂ ಅನೇಕ ಕೃಷಿ ಕಾರ್ಯಗಳಿಗೆ ಕಾರ್ಮಿಕರ ಅವಲಂಬನೆ ಅನಿವಾರ್ಯವಾಗಿದೆ. ಕಾಫಿ ಹಣ್ಣು ಕೊಯ್ಲಿಗೆ ಕಾರ್ಮಿಕರ ಅವಲಂಬನೆ ಹೆಚ್ಚಾಗಿದೆ. ಅಡಕೆ,ಕಾಫಿ, ಭತ್ತ ಕಟಾವಿನಿಂದ ಕಾರ್ಮಿಕರ ಕೊರತೆ ತೀವ್ರವಾಗಿದೆ.

Advertisement

ಕಾಫಿ ಹಣ್ಣಿನ ಕೊಯ್ಲಿಗೆ ಕಾರ್ಮಿಕರ ಕೊರತೆ:

ಅಡಕೆ ಸುಲಿಯುವ ಯಂತ್ರ ಬಂದಿದ್ದರಿಂದ ಅಡಕೆ ಸುಲಿಯುವ ಸಮಸ್ಯೆ ಬಹುತೇಕ ಪರಿಹಾರವಾಗಿದೆ. ಭತ್ತ ಕಟಾವಿನ ಸಮಸ್ಯೆ, ಒಕ್ಕಣೆಯನ್ನು ಮಾಡುವ ಕಂಬೈನ್‌x ಹಾರ್ವೆಸ್ಟರ್‌ ಭತ್ತದ ಕಟಾವಿನ ಸಮಸ್ಯೆ ನೀಗಿಸಿದ್ದಲ್ಲದೆ ಹತ್ತಾರು ಕಾರ್ಮಿಕರ ಕೆಲಸ  ಯಂತ್ರದಿಂದ ಆಗುತ್ತಿದೆ. ಅಕ್ಟೋಬರ್‌- ನವೆಂಬರ್‌ನಲ್ಲಿ ಸತತ ಚಂಡಮಾರುತ ಪ್ರಭಾವದಿಂದ ಅಡಕೆ ಕೊಯ್ಲು ವಿಳಂಬವಾಗಿ, ಡಿಸೆಂಬರ್‌ನಲ್ಲಿ ಕೊಯ್ಲು ಚುರುಕಾಗಿದೆ.

ಇದೇ ಸಂದರ್ಭದಲ್ಲಿ ಭತ್ತ ಕಟಾವು ನಡೆದಿದೆ. ಈ ನಡುವೆ ಅಡಕೆ ತೋಟದಲ್ಲಿ ಪರ್ಯಾಯ ಬೆಳೆಯಾಗಿರುವ ಕಾಫಿ ಹಣ್ಣಾಗುತ್ತಿದ್ದು, ಕೊಯ್ಲಿಗೆ ಕಾರ್ಮಿಕರ ಕೊರತೆ ಉಂಟಾಗಿದೆ. ಕಾಫಿ ಹಣ್ಣು ಕೊಯ್ಲಿಗೆ ಇನ್ನೂ ಸಮರ್ಪಕವಾಗಿ ಯಂತ್ರಗಳು ಬರದೇ ಇರುವುದರಿಂದ ಕಾಫಿ ಕೊಯ್ಲಿಗೆ ತೀವ್ರ ಹಿನ್ನಡೆಯಾಗಿದೆ. ಕಾಫಿ ಹಣ್ಣಾಗುತ್ತಿದ್ದಂತೆ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, ಸಕಾಲಕ್ಕೆ ಕೊಯ್ಲು ಮಾಡಲಾಗದ ರೈತರಿಗೆ ತೀವ್ರ ನಷ್ಟವಾಗುತ್ತಿದೆ. ಈ ವರ್ಷ ಇದುವರೆಗೂ ಚಳಿಯ ಪ್ರಮಾಣ ಕಡಿಮೆಯಾಗಿದ್ದು, ಇದರಿಂದ ಕಾಫಿ ಹಣ್ಣು ಒಂದೇ ಸಮನೆ ಆಗುತ್ತಿಲ್ಲ. ಆದರೆ ತೋಟದಲ್ಲಿ ಅಲ್ಲಲ್ಲಿ ಕಾಫಿ ಹಣ್ಣಾಗಿದ್ದು, ಕೊಯ್ಲು ಮಾಡಲು ಅಡ್ಡಿಯಾಗಿದೆ. ಕೊಯ್ಲು ಮಾಡದಿದ್ದರೆ ಅದು ಕಾಡುಪ್ರಾಣಿಗಳ ದಾಳಿಗೆ ಸಿಲುಕಿ ರೈತರಿಗೆ ದಕ್ಕುವುದಿಲ್ಲ. ಕಾಫಿ ಬೆಳೆಗೆ ಮಂಗಗಳ ಹಾವಳಿ ವಿಪರೀತವಾಗಿದ್ದು, ಕಾಫಿ ಹಣ್ಣು ತಿನ್ನುವುದರೊಂದಿಗೆ ರೆಂಬೆಯನ್ನು ಮುರಿದು ಹಾಳು ಮಾಡುತ್ತಿವೆ.

ಇದರಿಂದ ಈ ಸಾಲಿನ ಹಣ್ಣು ನಷ್ಟವಾಗುವುದಲ್ಲದೆ ಮುಂದಿನ ಸಾಲಿನ ಬೆಳೆಯೂ ನಷ್ಟವಾಗಲಿದೆ. ಮಂಗಗಳ ಹಿಂಡು ಬೆಳಗ್ಗೆಯಿಂದ ಸಂಜೆಯವರೆಗೂ ಗುಂಪು ಗುಂಪಾಗಿ ಕಾಫಿ ಗಿಡದ ಮೇಲೆ ದಾಳಿ ನಡೆಸುತ್ತಿದ್ದು, ಕಾಫಿ ಗಿಡವನ್ನೇ ಹಾಳು ಮಾಡುತ್ತಿವೆ. ಇದಲ್ಲದೆ ಅಳಿಲು,  ರಾತ್ರಿ ಸಂಚರಿಸುವ ಪ್ರಾಣಿಗಳು ಕಾಫಿ ಹಣ್ಣಿಗೆ ಮಾರಕವಾಗಿವೆ. ಕಾಫಿ ಕೊಯ್ಲು ಯಂತ್ರ ಇದೀಗ ಪರಿಚಯಿಸಿದ್ದರೂ ಅದರ ಬಳಕೆ ಇನ್ನಷ್ಟೇ ಆಗಬೇಕಿದೆ. ತಾಲೂಕಿನ ಬಹುತೇಕ ಅಡಕೆ ತೋಟ ಹಳದಿ ಎಲೆ ರೋಗಕ್ಕೆ ತುತ್ತಾಗಿದೆ. ಇತ್ತ ಕಾಫಿ ಗಿಡ ಉಪ ಬೆಳೆಯಾಗಿದ್ದು, ಇದೀಗ ರೈತರ ಅನಿವಾರ್ಯವಾದ ವಾಣಿಜ್ಯ ಬೆಳೆಯಾಗಿದೆ. ಕಾಡುಪ್ರಾಣಿಗಳ ದಾಳಿಯಿಂದ ರೈತರಿಗೆ ತೀವ್ರ ನಷ್ಟ ಆಗುತ್ತಿದೆ.

Advertisement

ಇದನ್ನೂ ಓದಿ:ಲವ್ ಮ್ಯಾರೇಜ್ VS ಅರೇಂಜ್ಡ್ ಮ್ಯಾರೇಜ್

ಅಡಕೆ ತೋಟದೊಳಗೆ ಬೆಳೆಯುತ್ತಿರುವ ಕಾಫಿ ಗಿಡಗಳಲ್ಲಿ ಬೇಗ ಹಣ್ಣು ಆಗುತ್ತಿದೆ. ಕಾಫಿ ತೋಟದಲ್ಲಿ ಬಹುತೇಕ ಒಂದೇ ಬಾರಿ ಹಣ್ಣು ಕೊಯ್ಲು ಮಾಡುತ್ತಾರೆ. ಅಡಕೆ ತೋಟದಲ್ಲಿ ಮಧ್ಯೆ- ಮಧ್ಯೆ ಹಣ್ಣಾಗುತ್ತಿದ್ದು, ಕೊಯ್ಲು ಮಾಡಲು ಅಡ್ಡಿಯಾಗಿದೆ. ಕೊಯ್ಲು ಮಾಡದೇ ಬಿಟ್ಟರೇ ಅದು ಕಾಡುಪ್ರಾಣಿಗಳ ಪಾಲಾಗುತ್ತದೆ. ಕಾಫಿ ಕೊಯ್ಲಿಗೂ ಸುಧಾರಿತ ಯಂತ್ರದ ಅಗತ್ಯವಿದೆ.  ತೋಟದಕುಂಬ್ರಿ ಸತೀಶ್‌, ಶೃಂಗೇರಿ

Advertisement

Udayavani is now on Telegram. Click here to join our channel and stay updated with the latest news.

Next