ಕೀವ್/ಮಾಸ್ಕೋ: ರಷ್ಯಾ-ಉಕ್ರೇನ್ ಯುದ್ಧವು ಜಗತ್ತಿನ ಹಲವು ಬಡ ರಾಷ್ಟ್ರಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಮಧ್ಯಪ್ರಾಚ್ಯದ ಅನೇಕ ದೇಶಗಳಲ್ಲಿ ಆಹಾರದ ಕೊರತೆ ಉಂಟಾಗುತ್ತಿದ್ದು, ಜನ ಪರದಾಡುವಂತಾಗಿದೆ.
ಇರಾಕ್, ಸಿರಿಯಾ, ಸುಡಾನ್, ಲೆಬನಾನ್, ಯೆಮೆನ್‌ನಂತಹ ಬಡರಾಷ್ಟ್ರಗಳ ಪರಿಸ್ಥಿತಿ ದಯನೀಯವಾಗಿದೆ.
ಇದಕ್ಕೆ ಮುಖ್ಯ ಕಾರಣವಿಷ್ಟೇ: ಜಗತ್ತಿನಲ್ಲಿ 3ರಲ್ಲಿ 1ರಷ್ಟು ಗೋಧಿ, ಬಾರ್ಲಿಯನ್ನು ರಫ್ತು ಮಾಡುವುದು ರಷ್ಯಾ ಮತ್ತು ಉಕ್ರೇನ್. ಜೊತೆಗೆ ಸೂರ್ಯಕಾಂತಿ ಎಣ್ಣೆ, ಇತರೆ ಆಹಾರಧಾನ್ಯ ಗಳೂ ಆ ದೇಶದಿಂದಲೇ ಬರುವುದು. ಈಗ ಯುದ್ಧದಿಂದಾಗಿ ಇವುಗಳ ಸರಬರಾಜು ಸ್ಥಗಿತಗೊಂಡಿವೆ. ಹೀಗಾಗಿ ತಮ್ಮ ಊಟದ ಕಥೆಯೇನು ಎಂದು ಈ ದೇಶಗಳ ಮನೆಮನೆಗಳಲ್ಲಿ ಚಿಂತೆ ಶುರುವಾಗಿದೆ.
ಜತೆಗೆ, ಅಗತ್ಯ ವಸ್ತುಗಳ ಬೆಲೆಯೇರಿಕೆ ಕೂಡ ಇಲ್ಲಿನ ಜನರ ಸಂಕಷ್ಟವನ್ನು ದುಪ್ಪಟ್ಟಾಗಿಸಿದೆ. ಯುದ್ಧಪೂರ್ವದಲ್ಲೇ ಪಶ್ಚಿಮ ಏಷ್ಯಾ ದೇಶ ಲೆಬನಾನ್‌ನಲ್ಲಿ ತೀವ್ರ ಆರ್ಥಿಕ ಕುಸಿತ ಎದುರಾಗಿತ್ತು. ಈಗಂತೂ ಆಹಾರ ಧಾನ್ಯಗಳ ಬೆಲೆ ಗಗನಕ್ಕೇರಿ, ದಿನನಿತ್ಯದ ಆಹಾರಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಇದುವರೆಗೆ ಕನಿಷ್ಠ ಬ್ರೆಡ್‌ಗಳಾದರೂ ಕಡಿಮೆ ಬೆಲೆಗೆ ಸಿಗುತ್ತವೆ ಎಂದು ಅಲ್ಲಿ ಕುಟುಂಬ ನಿರ್ವಹಣೆ ಮಾಡುವ ಮಹಿಳೆಯರು ಧೈರ್ಯ ವಾಗಿದ್ದರು. ಇನ್ನು ಮುಂದೆ ಅದೂ ಸಿಕ್ಕುವುದು ಕಷ್ಟವಾಗಿದೆ.
ಮತ್ತೆ ಕೊಲೆ ಯತ್ನ: ಉಕ್ರೇನ್ ಅಧ್ಯಕ್ಷರ ಕೊಲೆ ಗೆ ರಷ್ಯಾ ನಡೆಸಿರುವ ಯತ್ನವು ಸತತ 3ನೇ ಬಾರಿಗೆ ವಿಫಲವಾಗಿದೆ. ಝೆಲೆನ್‌ಸ್ಕಿ ಅವರನ್ನು ಹತ್ಯೆಗೈಯ್ಯ ಲೆಂದು ಬಂದಿದ್ದ ರಷ್ಯಾದ ವಿಶೇಷ ಪಡೆಯ 25 ಮಂದಿಯನ್ನು ಉಕ್ರೇನ್‌ನ ಅಧಿಕಾರಿಗಳು ಸ್ಲೊವೇಕಿಯಾ- ಹಂಗೇರಿ ಗಡಿಯಲ್ಲಿ ಸೆರೆಹಿಡಿದಿದ್ದಾರೆ.
ಹನಿಕೇನ್ ಗುಡ್‌ಬೈ: ಜಗತ್ತಿನ ಪ್ರಮುಖ ಬಿಯರ್ ಕಂಪನಿ ಹನಿಕೇನ್ ಈಗ ರಷ್ಯಾದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಯುದ್ಧ ಖಂಡಿಸಿ ಈ ನಿರ್ಧಾರ ಕೈಗೊಂಡಿರುವುದಾಗಿ ಕಂಪನಿ ತಿಳಿಸಿದೆ.