Advertisement
ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯ ಬಿಆರ್‌ಸಿ ಕೇಂದ್ರದ ಬಳಿ ಇರುವ ಕರ್ನಾಟಕ ಕಸ್ತೂರಿ ಬಾ ಗಾಂಧಿ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಈವರೆಗೆ ಸಮವಸ್ತ್ರ, ಶಾಲಾ ಬ್ಯಾಗ್, ನೋಟ್ ಪುಸ್ತಕ ವಿತರಿಸಿಲ್ಲ, ಸಮರ್ಪಕ ನೀರಿನ ಸೌಲಭ್ಯವಿಲ್ಲ, ಕೊಠಡಿಯ ಕಿಟಕಿಯ ಗಾಜುಗಳು ಒಡೆದು ವರ್ಷಗಳೇ ಉರುಳಿದರೂ ಸರಿಪಡಿಸಿಲ್ಲ. ಸೌಲಭ್ಯ ಕೇಳಿದರೆ ವಸತಿ ನಿಲಯದ ಸಿಬ್ಬಂದಿಯ ಕೋಪಕ್ಕೆ ವಿದ್ಯಾರ್ಥಿನಿಯರು ತುತ್ತಾಗುವ ಭೀತಿಯಲ್ಲಿದ್ದಾರೆ!.
Related Articles
Advertisement
ಕೆಲವೊಮ್ಮೆ ಶೌಚಕ್ಕೂ ನೀರು ಇರುವುದಿಲ್ಲ : ಪುರಸಭೆಯಿಂದ ಸಾರ್ವಜನಿಕ ನಲ್ಲಿ ನೀರಿನ ಒಂದೇ ಒಂದು ಸಂಪರ್ಕ ಪಡೆದುಕೊಳ್ಳಲಾಗಿದೆ. ಪ್ರತಿದಿನ ಅರ್ಧತಾಸು ಮಾತ್ರ ನಲ್ಲಿಯಲ್ಲಿ ನೀರು ಬರುತ್ತದೆ. ನೀರಿನ ಸಮಸ್ಯೆ ಪರಿಹಾರಕ್ಕೆಂದು ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನಿಂದ ತಾತ್ಕಾಲಿಕ ನೀರಿನ ಸಂಪರ್ಕ ಪಡೆದುಕೊಳ್ಳಲಾಗಿದೆ. ಕೆಲವು ಸಂದರ್ಭದಲ್ಲಿ ವಸತಿ ನಿಲಯಕ್ಕೆ ನೀರಿಲ್ಲದೆ ಸ್ನಾನಕ್ಕೆ ಇರಲಿ, ಶೌಚಾಲಯದ ನೀರಿಗೂ ಪರದಾಡುವ ಸ್ಥಿತಿ ಮೂಮೂಲಿ.
ಕಿಟಕಿಯ ಗಾಜು ಒಡೆದಿದ್ದು ಭಯ ಕಾಡುತ್ತಿದೆ: ನಿಲಯದ ಕೊಠಡಿಗಳ ಕಿಟಕಿಗಳಿಗೆ ಗಾಜುಗಳಿಲ್ಲ, ತೆರೆದ ಕಿಟಕಿ ಬಾಗಿಲುಗಳಿಂದ ನಿಲಯದಲ್ಲಿ ರಾತ್ರಿ ವೇಳೆ ವಿದ್ಯಾರ್ಥಿನಿಯರು ಭಯಭೀತರಾಗುತ್ತಿದ್ದಾರೆ. ಸರಿಪಡಿಸುವಂತೆ ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಬಿಆರ್‌ಸಿ, ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಮಾಡಿದರೂ ಸಮಸ್ಯೆ ಪರಿಹಾರವಾಗಿಲ್ಲ ಎಂದು ದೂರಿದ್ದಾರೆ.
ಸಮವಸ್ತ್ರ ವಿತರಣೆಗೆ ಅವಕಾಶ ಇಲ್ಲ: ಬಿಇಒ : ನಿಲಯದ ವಿದ್ಯಾರ್ಥಿನಿಯರಿಗೆ ಬ್ಯಾಗ್, ನೋಟ್‌ಬುಕ್, ಸಮವಸ್ತ್ರ ವಿತರಣೆಗೆ ಅವಕಾಶ ಇಲ್ಲ. ನೀರಿನ ಸಮಸ್ಯೆ ಪರಿಹಾರ ಮತ್ತು ಕೊಠಡಿಗಳ ಕಿಟಕಿ ಗಾಜು ರಿಪೇರಿ ಸೇರಿ ಇನ್ನಿತರ ಸಮಸ್ಯೆ ಪರಿಹಾರಕ್ಕೆ ಡಿಡಿಪಿಐ ಅವರಿಂದ ಅನುಮೋದನೆ ಪಡೆಯಲಾಗುತ್ತದೆ. ಜತೆಗೆ ನಿಲಯದ ಸಿಬ್ಬಂದಿ ಹೊಂದಾಣಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿಇಒ ಉದಯಕುಮಾರ್ ತಿಳಿಸಿದ್ದಾರೆ.
ನಿಲಯದಲ್ಲಿ ಊಟ ವಸತಿ ಹೊರತು ಪಡಿಸಿ ಇನ್ಯಾವುದೇ ಸವಲತ್ತು ಇಲ್ಲ. ಕೊರೊನಾ ಬಳಿಕ, ಬ್ಯಾಗ್, ಬಟ್ಟೆ, ನೋಟ್ ಪುಸ್ತಕಕ್ಕೆ ತಡೆ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. -ಕಾವ್ಯಾ, ನಿಲಯದ ವಿದ್ಯಾರ್ಥಿನಿ(ಹೆಸರು ಬದಲಿಸಿದೆ)
-ಎಚ್.ಬಿ.ಬಸವರಾಜು