Advertisement

ಅವ್ಯವಸ್ಥೆಗಳ ಆಗರ ವಿದ್ಯಾರ್ಥಿನಿ ನಿಲಯ

01:28 PM Feb 20, 2023 | Team Udayavani |

ಎಚ್‌.ಡಿ.ಕೋಟೆ: ವಿದ್ಯುತ್‌ ಕಡಿತಗೊಂಡರೆ ಮೊಬೈಲ್‌ ಟಾರ್ಚ್‌ ಲೈಟ್‌ಗಳೆ ಬೆಳಕು, ಶುಚಿತ್ವ ಕಾಣದೆ ನಾರುವ ಶೌಚಾಲಯಗಳು, ಒಡೆದ ಕಿಟಕಿ ಗಾಜುಗಳು, ತಿರುಗದ ಫ್ಯಾನ್‌ಗಳು, ಇದ್ದೂ ಇಲ್ಲವಾದ ಸ್ನಾನಕ್ಕೆ ಬೇಕಾದ ಬಿಸಿನೀರಿನ ಸೋಲಾರ್‌ ಸಿಸ್ಟಮ್‌, ಸರಬರಾಜಾಗದ ಹೆಣ್ಣು ಮಕ್ಕಳ ತಿಂಗಳ ಬಳಕೆ ಸ್ಯಾನಿಟರಿ ನ್ಯಾಪ್ಕಿನ್‌ ಪ್ಯಾಡ್‌. ಇದು ಎಚ್‌.ಡಿ.ಕೋಟೆ ಪಟ್ಟಣದ ಸರ್ಕಾರಿ ಪರಿಶಿಷ್ಟ ವರ್ಗ ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿನಿ ನಿಲಯದ ಅವ್ಯವಸ್ಥೆಗಳು.

Advertisement

ಪಟ್ಟಣದ ಸರ್ಕಾರಿ ಪರಿಶಿಷ್ಟ ವರ್ಗ ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿನಿ ನಿಲಯ ದಲ್ಲಿ ಒಟ್ಟು 60 ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದಾರೆ. ಹಲವು ವರ್ಷಗಳ ಹಿಂದಿನಿಂದ ಸ್ವಂತ ಕಟ್ಟಡ ಇಲ್ಲದೆ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವಿದ್ಯಾರ್ಥಿನಿ ನಿಲಯ ಕಳೆದ 2 ತಿಂಗಳ ಹಿಂದೆ ವಿಶ್ವನಾಥಯ್ಯ ಕಾಲೋನಿಯ ಶ್ರೀ ಎಲ್ಲಮ್ಮತಾಯಿ ದೇವಸ್ಥಾನದ ಹಿಂಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಾಲಕ ರನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಿ ಅದೇ ಕಟ್ಟಡಕ್ಕೆ ಸರ್ಕಾರಿ ಪರಿಶಿಷ್ಟ ವರ್ಗ ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿನಿ ನಿಲಯ ದ ಹೆಣ್ಣು ಮಕ್ಕಳನ್ನು ಸ್ಥಳಾಂತರಿಸ ಲಾಯಿತು.

ಕೆಲ ದಿನಗಳಲ್ಲೇ ಬೇಸರ: ವಿದ್ಯಾರ್ಥಿನಿ ನಿಲಯಕ್ಕೆ ಹೊರಗಿನಿಂದ ಸುಟ್ಟಬಣ್ಣ ಬಳಿದಿರುವುದರಿಂದ ಸುಸಜ್ಜಿತವಾಗಿ ನೋಡುಗರಿಗೆ ಕಾಣುವುದು ಸಹಜವಾದರೂ ಮೇಲೆ ಥಳಕು ಒಳಗೆ ಹುಳುಕು ಅನ್ನುವಂತೆ ನಿಲಯದ ಒಳಗೆ ಸಮಸ್ಯೆಗಳ ಸರಮಾಲೆಗಳೇ ಕಾಡುತ್ತಿವೆ. ಸದ್ಯ ಬಾಡಿಗೆ ಕಟ್ಟಡದಲ್ಲಿ ಸಮಸ್ಯೆಗಳನ್ನು ಸರಿದೂಗಿಸಿಕೊಂಡು ಸಾಗುತ್ತಿದ್ದ ವಿದ್ಯಾರ್ಥಿನಿಯರಿಗೆ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಗೊಂಡದ್ದು ಕೊಂಚ ಖುಷಿ ತಂದಿತ್ತಾದರೂ ನಿಲಯದ ಒಳಗಿನ ಸಮಸ್ಯೆಗಳಿಂದ ಕೆಲವೇ ದಿನಗಳಲ್ಲಿ ಬೇಸರ ತಂದಿದೆ.

ಇಲ್ಲಗಳ ನಡುವೆ ವಿದ್ಯಾರ್ಥಿನಿ ನಿಲಯ: ಶೌಚಾಲಯ ಶುಚಿತ್ವ ಇಲ್ಲ, ವಿದ್ಯಾರ್ಥಿ ನಿಲಯ ದಲ್ಲಿ ಯುಪಿಎಸ್‌ ಇಲ್ಲ, ವಿದ್ಯುತ್‌ ಕಡಿತ ಗೊಂಡರೆ ಕತ್ತಲೆ ಕಳೆಯಲು ವಿದ್ಯಾರ್ಥಿನಿಯರು ಮೊಬೈಲ್‌ ಟಾರ್ಚ್‌ ಬೆಳಕು ಬಳಕೆ ಮಾಡಬೇಕು. ಕಸದ ಬುಟ್ಟಿಗಳಿಲ್ಲ, ನೆಲದ ಚಾಪೆಗಳಿಲ್ಲ, ಕಿಟಕಿಗಳಿಗೆ ಗಾಜುಗಳಿಲ್ಲ, ಚಪ್ಪಲಿ ಸ್ಟ್ಯಾಂಡ್‌ಗಳಿಲ್ಲ, ನಿಯಮಾನುಸಾರ ಊಟ ತಿಂಡಿ ಇಲ್ಲ, ಕೊಠಡಿಗಳಲ್ಲಿ ಫ್ಯಾನ್‌ ಗಳಿವೆಯಾದರೂ ಒಂದೂ ತಿರುಗುತ್ತಿಲ್ಲ, ಜನರೇಟರ್‌ ಇದೆ ಆದರೆ ಕಾರ್ಯ ನಿರ್ವಹಿಸುತ್ತಿಲ್ಲ. ಈ ಎಲ್ಲಾ ಇಲ್ಲಗಳ ನಡುವೆ ವಿದ್ಯಾರ್ಥಿನಿಲಯ ಕಾರ್ಯನಿರ್ವಹಿಸುತ್ತಿದೆ. ನಿಲಯದಲ್ಲಿ ಸೋಲಾರ ಅಳವಡಿಸಲಾಗಿದೆ, ಆದರೆ ರಿಪೇರಿಯಾಗಿರುವುದರಿಂದ ಸ್ವಾನಕ್ಕೆ ಹನಿ ಬಿಸಿ ನೀರಿನ ಭಾಗ್ಯ ಇಲ್ಲ. ಹೆಣ್ಣು ಮಕ್ಕಳ ಭವಣೆ ಅರಿತು ಸಂಬಂಧ ಪಟ್ಟ ತಾಲೂಕು ಗಿರಿಜನ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ಬಿಸಿ ನೀರಿನ ಸಮಸ್ಯೆ ಸರಿಪಡಿಸದೇ ಇರುವುದು ವಿಪರ್ಯಾಸವೇ ಸರಿ.

ಯುಪಿಎಸ್‌ ಇಲ್ಲದೆ ಕಗ್ಗತ್ತಲಲ್ಲಿ ಹಾಸ್ಟೆಲ್‌ : ವಿದ್ಯಾರ್ಥಿನಿ ನಿಲಯದಲ್ಲಿ ಜನರೇಟರ್‌ ಇದೆ ಆದರೆ ಕಾರ್ಯನಿರ್ವಹಿಸುತ್ತಿಲ್ಲ, ಹಾಗಾಗಿ ವಿದ್ಯುತ್‌ ಕಡಿತಗೊಂಡಾಗ ಅಥವಾ ವಿದ್ಯುತ್‌ ವೆತ್ಯಯವಾದಾಗ ಇಡೀ ವಿದ್ಯಾರ್ಥಿನಿಯರ ವಿದ್ಯಾರ್ಥಿನಿಲಯ ಕಗ್ಗತ್ತಲಿನಿಂದ ಆವರಿಸಿಕೊಂಡಾಗ ಕತ್ತಲು ಸರಿಸಲು ಮೊಬೈಲ್‌ ಟಾರ್ಚ್‌ ಲೈಟ್‌ಗಳ ಮೊರೆ ಹೋಗಬೇಕಾದ ಅನಿವಾರ್ಯತೆ ಇದೆ. ಖಾಸಗಿ ವಿದ್ಯಾರ್ಥಿನಿಲಯದ ಕಟ್ಟಡದಲ್ಲಿ ಕಾರ್ಯನಿರ್ವಹಿಸಲು ಸರ್ಕಾರ ಮಂಜೂರು ಮಾಡಿದ್ದ ಯುಪಿಎಸ್‌ ಕಾಣೆಯಾಗಿದ್ದು ಕೂಡಲೆ ಕತ್ತಲ ನಿವಾರಣೆಗೆ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮವಹಿಸಬೇಕಿದೆ.

Advertisement

ನಿಲಯದಲ್ಲಿ ವಿದ್ಯುತ್‌ ಕಡಿತ ಗೊಂಡರೆ ಬೆಳಕಿಲ್ಲದೆ ಮೊಬೈಲ್‌ ಬೆಳಕಿನಲ್ಲಿ ಕಾಲ ಕಳೆಯಬೇಕು. ಶೌಚಾಲಯ ಶುಚಿತ್ವ ಕಾಣದೆ ದುರ್ವಾಸೆ ಸೂಸುತ್ತದೆ. ಯುಪಿಎಸ್‌ ಇಲ್ಲ, ಸ್ನಾನಕ್ಕೆ ಬಿಸಿನೀರಿಲ್ಲದೆ ತಿಂಗಳ ಹೊರಗಾದಾಗ ತಡರಾತ್ರಿಯಾದರೂ ತಣ್ಣೀರಿನ ಸ್ನಾನ ಮಾಡಬೇಕು. ಫ್ಯಾನ್‌ಗಳು ಕಾರ್ಯನಿರ್ವಹಿಸು ತ್ತಿಲ್ಲ, ತಿಂಗಳ ಬಳಕೆ ಪ್ಯಾಡ್‌ಗಳನ್ನು ಒಮ್ಮೆಯೂ ವಿತರಿಸಿಲ್ಲ, ಕಸದ ಡಬ್ಬಗಳಿಲ್ಲದೆ ಕಸ ಎಲ್ಲೆಂದರಲ್ಲಿ ಚಲ್ಲಾಪಿಲ್ಲಾಗಿ ಬಿದ್ದಿದೆ. ನಮ್ಮನ್ನೂ ಪ್ರಾಣಿಗಳಂತೆ ಕಾಣದೆ ಮನುಷ್ಯ ರೆಂದು ಭಾವಿಸಿ ಮೂಲಸೌಕರ್ಯ ಒದಗಿಸಿಕೊಡಿ. -ಲಾವಣ್ಯ (ಹೆಸರು ಬದಲಿಸಿದೆ)

ನಿಲಯದ ವಿದ್ಯಾರ್ಥಿನಿ ವಿದ್ಯಾರ್ಥಿನಿಯರ ಸಮಸ್ಯೆಗಳ ಬಗ್ಗೆ ನನಗೆ ಮಾಹಿತಿ ಇರಲಿಲ್ಲ, 2-3 ದಿನಗಳಲ್ಲಿ ವಿದ್ಯಾರ್ಥಿನಿ ನಿಲಯದ ಬಹುತೇಕ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಕ್ರಮವಹಿಸುತ್ತೇನೆ. ಸ್ನಾನದ ಬಿಸಿನೀರಿನ ಸೋಲಾರ್‌ ವ್ಯವಸ್ಥೆ ಸರಿಪಡಿಸುವುದರ ಜೊತೆಯಲ್ಲಿ ತುರ್ತು ಸಮಯದ ಸಲುವಾಗಿ 2 ಬಿಸಿನೀರಿನ ಗೀಜರ್‌ಗಳನ್ನು ಅಳವಡಿಸಿ ಶುಚಿತ್ವ, ವಿದ್ಯುತ್‌ ಕಡಿತಗೊಂಡಾಗ ಯುಪಿಎಸ್‌ ಕಾರ್ಯನಿರ್ವಹಿಸುವ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ತುರ್ತು ಕ್ರಮವಹಿಸಲಾಗುತ್ತದೆ. -ನಾರಾಯಣಸ್ವಾಮಿ, ತಾ. ಗಿರಿಜನ ಅಭಿವೃದ್ಧಿ ಇಲಾಖಾ ಅಧಿಕಾರಿ

– ಎಚ್‌.ಬಿ.ಬಸವರಾಜು

Advertisement

Udayavani is now on Telegram. Click here to join our channel and stay updated with the latest news.

Next