Advertisement
ಬೆಂ-ಮೈ ನಡುವೆ ಕ್ಲೋಸ್ ಟೋಲ್ ಮಾಡಿ ಎಲ್ಲೆಂದರಲ್ಲಿ ವಾಹನಗಳು, ಪ್ರಾಣಿಗಳು, ರಸ್ತೆ ದಾಟುವ ಪಾದಚಾರಿಗಳು ಹೈವೇಗೆ ಎಂಟ್ರಿ ಪಡೆಯ ದಂತೆ ನೋಡಿಕೊಳ್ಳುವುದು ಆಕ್ಸೆಸ್ ಕಂಟ್ರೋಲ್ ಎಕ್ಸ್ ಪ್ರಸ್ ವೇನ ಪ್ರಮುಖ ನಿಯಮ. ಆದರೆ, ಈ ಹೆದ್ದಾರಿ ಯಲ್ಲಿ ಇಂತಹ ಯಾವುದೇ ಕ್ರಮಗಳು ಇಲ್ಲವಾಗಿದ್ದು, ವಾಹನಗಳು ಎಲ್ಲಿಬೇಕೆಂದರಲ್ಲಿ, ಹೇಗೆ ಬೇಕೆಂದರೆ ಹಾಗೆ ಪ್ರವೇಶ ಪಡೆಯುವಂತಾಗಿದೆ. ಇನ್ನು, ಹೆದ್ದಾರಿಯಲ್ಲಿ ಅಲ್ಲಲ್ಲಿ ತಂತಿ ಬೇಲಿಗಳು ಕಿತ್ತು ಹೋಗಿದ್ದು, ಕೆಲವೆಡೆ ಪ್ರಯಾಣಿಕರು ಹೆದ್ದಾರಿ ಯನ್ನು ಎಂದಿನಂತೆ ದಾಟು ತ್ತಿರುವುದು ಒಂದೆಡೆಯಾದರೆ, ಕೆಲ ಗ್ರಾಮಗಳಲ್ಲಿ ಹಸು, ಎಮ್ಮೆಗಳನ್ನು ಹಿಡಿದುಕೊಂಡು ರಸ್ತೆ ದಾಟುತ್ತಿರುವ ದೃಶ್ಯಗಳು ಸಾಮಾನ್ಯವೆನಿಸಿದೆ. ಇದರಿಂದ ಅಪಘಾತಗಳು ಸಂಭವಿಸುತ್ತಿದ್ದು, ಅನಗತ್ಯವಾಗಿ ಹೆದ್ದಾರಿ ಪ್ರವೇಶ ಪಡೆಯುವುದಕ್ಕೆ ಕಡಿವಾಣ ಹಾಕುವ ಯಾವ ಪ್ರಯತ್ನವನ್ನು ಎನ್‌ಎಚ್‌ಎಐ ಮಾಡಿಲ್ಲ.
Related Articles
Advertisement
ನಿಲುಗಡೆಗೆ ಅವಕಾಶವಿಲ್ಲ : ಬೆಂಗಳೂರು-ಮೈಸೂರು ರಸ್ತೆಯಲ್ಲಿ ಎಲ್ಲಿಯೂ ವಾಹನ ನಿಲುಗಡೆಗೆ ಅವಕಾಶವಿಲ್ಲ, ಯಾವುದಾದರೂ ಕಾರಣಕ್ಕೆ ವಾಹನ ನಿಲುಗಡೆ ಮಾಡಬೇಕು ಎಂದಾದಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ. ಇನ್ನು ಪ್ರಯಾಣಿಕರು ಶೌಚಕ್ಕೂ ವಾಹನ ನಿಲುಗಡೆ ಮಾಡಲು ಸಾಧ್ಯವಿಲ್ಲದೆ ಪರದಾಡುವಂತಾಗಿದ್ದು, ಬೆಂ-ಮೈ. ವರೆಗೆ ಎಲ್ಲಿಯೂ ಪ್ರಯಾಣಿಕರ ರೆಸ್ಟ್ ಏರಿಯಾಗಳನ್ನು ನಿಗದಿ ಮಾಡಿಲ್ಲ.
ಅವಶ್ಯಕ ಸೌಕರ್ಯಕ್ಕೂ ಪ್ರಯಾಣಿಕರ ಪರದಾಟ: ಬೆಂ-ಮೈ ಎಕ್ಸ್‌ಪ್ರೆಸ್ ವೇನಲ್ಲಿ ವಾಹನ ಕೆಟ್ಟು ನಿಂತರೆ ಸಕಾಲದಲ್ಲಿ ಟ್ರೋಲ್ ವಾಹನ ಬರುವ ವ್ಯವಸ್ಥೆ, ತುರ್ತು ಆ್ಯಂಬುಲೆನ್ಸ್ ವ್ಯವಸ್ಥೆ, ಪೆಟ್ರೋಲ್ ಬಂಕ್ ವ್ಯವಸ್ಥೆ, ಪಂಚರ್ ಶಾಪ್, ತುರ್ತು ಚಿಕಿತ್ಸಾ ಘಟಕ ಹೀಗೆ ಯಾವುದೇ ವ್ಯವಸ್ಥೆ ಇಲ್ಲವಾಗಿದ್ದು, ಸಂಚಾರದ ವೇಳೆ ಸಮಸ್ಯೆಯಾದರೆ ಪ್ರಯಾಣಿಕರ ಪಾಡು ದೇವರಿಗೇ ಪ್ರೀತಿ ಎನ್ನುವಂತಾಗಿದೆ. ಒಟ್ಟಾರೆ ಮಾದರಿ ಎಕ್ಸ್‌ಪ್ರೆಸ್ ವೇ ಎನ್ನುವ ಬೆಂ-ಮೈ ರಾಷ್ಟ್ರೀಯ ಹೆದ್ದಾರಿಯ ಆಕ್ಸೆಸ್ ಕಂಟ್ರೋಲ್ ಎಕ್ಸ್‌ಪ್ರೆಸ್ ವೇ ಅವ್ಯವಸ್ಥೆಯ ಆಗರವಾಗಿದ್ದು, ಪ್ರಯಾಣಿಕರಿಗೆ ಕನಿಷ್ಠ ಸೌಲಭ್ಯವೂ ಇಲ್ಲದೆ ಗರಿಷ್ಠ ಟೋಲ್ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಅವಶ್ಯಕ ಸೌಲಭ್ಯಗಳನ್ನು ಕಲ್ಪಿಸಲು ಇನ್ನಾದರೂ ಎನ್‌ಎಚ್‌ಎಐ ಮುಂದಾಗಬೇಕಿದೆ.
ಕೆಫೆಟೇರಿಯ ನಿರ್ಮಾಣ: ಸಚಿವರ ಭರವಸೆ ಹುಸಿ: ಬೆಂಗಳೂರು-ಮೈಸೂರು ನಡುವಿನ ಮಧ್ಯಭಾಗವಾದ ಕಣ್ವ ರಸ್ತೆಯಲ್ಲಿ ವಿಶಾಲವಾದ ಪ್ರದೇಶದಲ್ಲಿ ಕೆಫೆಟೇರಿಯಾವನ್ನು ನಿರ್ಮಾಣ ಮಾಡಿ, ಇಲ್ಲಿ ಪ್ರಯಾಣಿಕರಿಗೆ ಹೋಟೆಲ್, ವಿಶ್ರಾಂತಿಗೆ ಅವಕಾಶ, ಆ್ಯಂಬುಲೆನ್ಸ್ ಸೇವೆ ಸೇರಿದಂತೆ ಎಲ್ಲಾ ರೀತಿಯ ಸೌಕರ್ಯಗಳನ್ನು ಕಲ್ಪಿಸುವ ಜೊತೆಗೆ ಚನ್ನಪಟ್ಟಣ ಬೊಂಬೆ, ಬಿಡದಿ ತಟ್ಟೆ ಇಡ್ಲಿ, ರಾಮನಗರ ಮೈಸೂರು ಪಾಕ್, ಮದ್ದೂರು ವಡೆ ಸೇರಿದಂತೆ ಸ್ಥಳೀಯ ಆಹಾರ ಮತ್ತು ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಮಾಡಿ ಕೊಡುವುದಾಗಿ ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರಿ ಭೇಟಿವೇಳೆ ಹೇಳಲಾಗಿತ್ತು. ಆದರೆ, ಇದು ಕೇವಲ ಭರವಸೆಯಾಗೇ ಉಳಿದಿದ್ದು ಈ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ನಡೆದಿಲ್ಲ.
-ಸು.ನಾ.ನಂದಕುಮಾರ್