Advertisement

ವೈದ್ಯರ ಕೊರತೆಯಿಂದ ರೋಗಿಗಳಿಗೆ ಬವಣೆ

09:31 PM Nov 29, 2019 | Lakshmi GovindaRaj |

ಹೊಳೆನರಸೀಪುರ: ತಾಲೂಕಿನ ಹಳ್ಳಿಮೈಸೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇಲ್ಲದೆ ಪರದಾಡುವಂತಾಗಿದೆ ಎಂದು ರೋಗಿಗಳು ಆರೋಪಿಸಿದ್ದಾರೆ. ಹಳ್ಳಿಮೈಸೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಆಗಮಿಸಿದ್ದ ಗ್ರಾಮಸ್ಥರುಗಳು ಕೇಂದ್ರದಲ್ಲಿ ಇರುವ ಒಬ್ಬರೇ ಒಬ್ಬನೇ ವೈದ್ಯ ಸರಿಯಾಗಿ ಸ್ಪಂದಿಸುತ್ತಿಲ್ಲ. ಆಸ್ಪತ್ರೆ ತೆರೆಯುವ ವೇಳೆ ಬರಬೇಕಾದ ವೈದ್ಯ ಸೂರ್ಯ ನೆತ್ತಿಗೆ ಬರೋ ವೇಳೆಗೆ ಆಗಮಿಸಿ ಮಧ್ಯಾಹ್ನ 3 ಗಂಟೆ ವೇಳೆಗೆ ಆಸ್ಪತ್ರೆಯಿಂದ ಕಾಲು ಕೀಳುತ್ತಾರೆ ಎಂದು ದೂರಿದರು.

Advertisement

ಹಳ್ಳಿಮೈಸೂರು ಹೋಬಳಿ ಕೇಂದ್ರದಲ್ಲಿ ಎಲ್ಲ ಸವಲತ್ತು ಇರುವ ಪ್ರಾಥಮಿಕ ಕೇಂದ್ರಲ್ಲಿ ವೈದ್ಯರೇ ಇಲ್ಲದೆ ಹೋದರೆ ರೋಗಿಗಳ ಪಾಡು ಏನು ಎಂಬುದನ್ನು ತಾಲೂಕು ಆರೋಗ್ಯ ಇಲಾಖೆ ಯೋಚಿಸಬೇಕು. ಈ ಬಗ್ಗೆ ಅರಕಲಗೂಡು ಕ್ಷೇತ್ರದ ಶಾಸಕ ಎ.ಟಿ.ರಾಮಸ್ವಾಮಿ ಅವರಿಗೆ ಮೌಖೀಕ ದೂರು ನೀಡಲಾಗಿದ್ದು, ಶಾಸಕರು ಆ ವೈದ್ಯರಿಗೆ ತಮ್ಮನ್ನು ಕಾಣುವಂತೆ ಸೂಚನೆ ನೀಡಿದ್ದರೂ ಸಹ ಕ್ಯಾರೆ ಎನ್ನದೆ ದಿನಗಳನ್ನು ದೂಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ತೇಜೂರು ಮಾಯಿಗೌಡನಹಳ್ಳಿಯಿಂದ ಹಳ್ಳಿಮೈಸೂರು ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಕೇವಲ ಮೂರು ಕಿಲೋ ಮೀಟರ್‌ ದೂರವಿದ್ದರೂ, ಚಿಕಿತ್ಸೆ ಪಡೆಯಲು ಸುಮಾರು 15 ಕಿಲೋ ಮೀಟರ್‌ ದೂರದ ದೊಡ್ಡಕಾಡನೂರಿನ ಆರೋಗ್ಯ ಕೇಂದ್ರಕ್ಕೆ ತೆರಳಿ ಚಿಕಿತ್ಸೆ ಪಡೆಯುವಂತ ಪರಿಸ್ಥಿತಿ ಒದಗಿದೆ. ಹೋಬಳಿ ಮಟ್ಟದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಇಲ್ಲಿಯವರಗೆ ತಾಲೂಕು ವೈದ್ಯಾಧಿಕಾರಿ ಡಾ.ಎಚ್‌.ಎನ್‌.ರಾಜೇಶ್‌ ಅವರು ಸಮಸ್ಯೆ ಪರಿಹರಿಸಲು ಮುಂದಾಗದಿರುವುದು ವಿಷಾದ ಎಂದು ಹೇಳಲಾಗುತ್ತಿದೆ.

ಪ್ರಸ್ತುತ ತೇಜೂರು ಮಾಯಿಗೌಡನಹಳ್ಳಿಯಲ್ಲಿ ಬಹುತೇಕ ಎಲ್ಲ ಮನೆಗಳಲ್ಲಿಯೂ ಸಹ ಜ್ವರ ಪೀಡಿತರಾಗಿ ನರಳುತ್ತಿದ್ದಾರೆ. ಆದರೆ ಕಾಲಕಾಲಕ್ಕೆ ದೊರಕಬೇಕಾದ ಚಿಕಿತ್ಸೆ ದೊರಕದೆ ಚಿಕಿತ್ಸೆಗಾಗಿ ದೂರದ ದೊಡ್ಡಕಾಡನೂರು ಗ್ರಾಮದ ಆರೋಗ್ಯ ಕೇಂದ್ರಕ್ಕೆ ತೆರಳುವುದು ಅನಿವಾರ್ಯವಾಗಿದೆ. ಇನ್ನೂ ದೊಡ್ಡಕಾಡನೂರು ಗ್ರಾಮದ ಆರೋಗ್ಯಕೇಂದ್ರದಕ್ಕೆ ತೇಜೂರು ಮಾಯಿಗೌಡನಹಳ್ಳಿಯಿಂದ ಚಿಕಿತ್ಸೆಗಾಗಿ ತೆರಳುವ ರೋಗಿಗಳಿಂದ ಹಣ ವಸೂಲಿ ಮಾಡುವ ದಂಧೆ ಆರಂಭಿಸಿದ್ದಾರೆ ಎಂದು ರೋಗಿಗಳು ಅಳಲು ತೋಡಿಕೊಂಡಿದ್ದಾರೆ.

ಈ ಹಿಂದೆ ತಾಲೂಕಿನ ಸಿಗರನಹಳ್ಳಿ ಗ್ರಾಮದ ಬಹುತೇಕ ನಿವಾಸಿಗಳು ಇದೇ ರೀತಿ ಜ್ವರದಿಂದ ಬಳಲಿ ಬೆಂಡಾಗಿದ್ದ ವೇಳೆ ಜಿಲ್ಲಾ ಆರೋಗ್ಯ ಇಲಾಖೆ ವಿಶೇಷ ಶಿಬಿರ ಆಯೋಜಿಸಿ ಸಿಗರನಹಳ್ಳಿ ಗ್ರಾಮದಲ್ಲಿಯೆ ಆರೋಗ್ಯ ಇಲಾಖೆಯ ವೈದ್ಯರು ಮತ್ತು ಸಿಬ್ಬಂದಿ ಠಿಕಾಣಿ ಹಾಕಿದ್ದರಿಂದ ಆಲ್ಲಿನ ರೋಗ ಹಂತಹಂತವಾಗಿ ಕಡಿಮೆಯಾಗಿದ್ದನ್ನು ಸ್ಮರೀಸಿಕೊಳ್ಳಬಹದಾಗಿದೆ. ಪ್ರಸ್ತುತ ತೇಜೂರು ಮಾಯಿಗೌಡನಹಳ್ಳಿಯಲ್ಲಿಯೂ ಸಹ ಬಹುತೇಕ ನಿವಾಸಿಗಳು ಜ್ವರದಿಂದ ಬಳಲುತ್ತಿದ್ದು, ಜಿಲ್ಲಾ ಆರೋಗ್ಯ ಇಲಾಖೆ ವಿಶೇಷ ಶಿಬಿರ ನಡೆಸಿ ರೋಗಿಗಳನ್ನು ಗುಣಪಡಿಸುವ ಕೆಲಸ ಮಾಡುವರೆ ಎಂಬುದನ್ನು ಕಾದು ನೋಡಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next