Advertisement

ಸಮನ್ವಯ ಕೊರತೆಯಿಂದ ಕಾಮಗಾರಿ ಅವ್ಯವಸ್ಥೆ

09:53 PM Dec 21, 2019 | Team Udayavani |

ತುಮಕೂರು: ನಗರದ 15ನೇ ವಾರ್ಡ್‌ನ ವಿವಿಧ ಬಡಾವಣೆಗಳಲ್ಲಿ ಸ್ಮಾರ್ಟ್‌ಸಿಟಿ ವತಿಯಿಂದ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ಶನಿವಾರ ಪಾಲಿಕೆ ಸದಸ್ಯೆ ಗಿರಿಜಾ ಧನಿಯಕುಮಾರ್‌ ವಿವಿಧ ಇಲಾಖೆ ಅಧಿಕಾರಿಗಳ ಜೊತೆಗೆ ತೆರಳಿ ಪರಿಶೀಲಿಸಿದರು.

Advertisement

ನಗರದ 15ನೇ ವಾರ್ಡ್‌ಗೆ ಸಂಬಂಧಿಸಿದ ಎಸ್‌.ಎಸ್‌.ಪುರಂ ಮುಖ್ಯರಸ್ತೆಯ ಇಕ್ಕೆಲಗಳಲ್ಲಿರುವ ಅಡ್ಡರಸ್ತೆಗಳಲ್ಲಿ ಸ್ಮಾರ್ಟ್‌ಸಿಟಿಯಿಂದ ಡಕ್‌ಸ್ಲಾಬ್‌, ಎಲ್‌ಎನ್‌ಟಿಯಿಂದ 24*7 ಕುಡಿಯುವ ನೀರು, ಮೇಘಾ ಗ್ಯಾಸ್‌ ಅವರಿಂದ ಮನೆ ಮನೆಗೆ ಪೈಪ್‌ಲೈನ್‌ ಮೂಲಕ ಅಡುಗೆ ಅನಿಲ ತರಿಸುವ ಕಾಮಗಾರಿಗಳು ನಡೆಯುತ್ತಿದ್ದು, ಕೆಲವು ಕಡೆ ನಿರ್ಮಾಣವಾಗಿರುವ ಡೆಕ್‌ಸ್ಲಾಬ್‌ ರಸ್ತೆಗಿಂತ ಒಂದು ಅಡಿ ಎತ್ತರವಿದೆ.

ಗ್ಯಾಸ್‌ ಪೈಪ್‌ಲೈನ್‌ಗೆ ಅಗೆದಿರುವ ಗುಂಡಿ ತಿಂಗಳಾದರೂ ಮುಚ್ಚಿಲ್ಲ. ಎರಡನೇ ಹಂತದ ಯುಜಿಡಿ ಮತ್ತು 24*7 ಕುಡಿಯುವ ನೀರು ಯೋಜನೆಗೆ ಕಟ್‌ ಮಾಡಿರುವ ರಸ್ತೆ ಮುಚ್ಚಿಲ್ಲ. ಹೀಗೆ ಹತ್ತು ಹಲವು ಸಮಸ್ಯೆ ಸ್ಮಾರ್ಟ್‌ಸಿಟಿ, ನಗರಪಾಲಿಕೆ ಅಧಿಕಾರಿಗಳ ಮುಂದೆ ತೆರೆದಿಟ್ಟರು.

ಪಾಲಿಕೆ ಸದಸ್ಯೆ ಗಿರಿಜಾ ಧನಿಯಾಕುಮಾರ್‌ ಮಾತನಾಡಿ, ಇಲಾಖೆ ಅಧಿಕಾರಿಗಳ ಸಮನ್ವಯದ ಕೊರತೆಯಿಂದ ಜನಸಾಮಾನ್ಯರ ಪ್ರಶ್ನೆಗಳಿಗೆ ಉತ್ತರ ಹೇಳಲು ಆಗುತ್ತಿಲ್ಲ. ಕೂಡಲೇ ಸಮಸ್ಯೆ ಇರುವ ಜಾಗ ಸರಿಪಡಿಸಿ ನಾಗರಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸಮಸ್ಯೆ ಸುರಿಮಳೆ: ಸ್ಮಾರ್ಟ್‌ಸಿಟಿ ಅಧಿಕಾರಿಗಳು ಮಾಡಿರುವ ಬೇಕಾಬಿಟ್ಟಿ ಕೆಲಸದಿಂದ ಮಕ್ಕಳು, ಮಳೆಯರು, ವಯೋವೃದ್ಧರು ರಸ್ತೆಯಲ್ಲಿ ಸುಗಮವಾಗಿ ಓಡಾಡುವುದು ಕಷ್ಟವಾಗಿದೆ. ಮಾರುತಿ ವಿದ್ಯಾಮಂದಿರದ ರಸ್ತೆಯಲ್ಲಿ ಕುಡಿಯುವ ನೀರಿಗೆ ರಸ್ತೆ ಅಗೆದು, ತಿಂಗಳಾದರೂ ಮುಚ್ಚಿಲ್ಲ. ದಿನಕ್ಕೆ ಸಾವಿರಾರು ಮಕ್ಕಳು ಶಾಲೆಗೆ ಇದೇ ರಸ್ತೆಯಲ್ಲಿ ಹೋಗುತ್ತಾರೆ. ಗುಂಡಿಯಲ್ಲಿ ಬೀಳುವ ಭಯ ಶುರುವಾಗಿದೆ ಎಂದು ಸ್ಥಳೀಯರು ದೂರಿದರು.

Advertisement

ಕೆಲಸ ನಡೆಯುತ್ತಿರುವ ಜಾಗದಲ್ಲಿ ಯಾವುದೇ ಬ್ಯಾರಿಕೇಡ್‌ ಇಲ್ಲದ್ದರಿಂದ ರಾತ್ರಿ ಬೈಕ್‌ಗಳು ಬಿದ್ದು ಗಾಯಗೊಂಡಿರುವುದೂ ಇದೆ. ಇದೇ ರೀತಿಯ ಅನೇಕ ಸಮಸ್ಯೆಗಳು ವಾರ್ಡ್‌ನಲ್ಲಿವೆ ಎಂದು ಸಾರ್ವಜನಿಕರು ದೂರಿದರು. ಸಾರ್ವಜನಿಕರು ಹಾಗೂ ವಾರ್ಡ್‌ ಕಾರ್ಪೋರೇಟರ್‌ ದೂರಿಗೆ ಪ್ರತಿಕ್ರಿಯಿಸಿದ ಸ್ಮಾರ್ಟ್‌ಸಿಟಿ ಅಧಿಕಾರಿ ಚಂದ್ರಶೇಖರ್‌, ಎರಡನೇ ಹಂತದಲ್ಲಿ ಎಸ್‌.ಎಸ್‌.ಪುರಂನಲ್ಲಿ ಧ ಅಭಿವೃದ್ಧಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.

ಒಂದೇ ಬಾರಿಗೆ ಕಾಮಗಾರಿಗಳು ಆರಂಭವಾದ ಕಾರಣ, ಕೆಲ ತೊಂದರೆಗಳು ನಾಗರಿಕರಿಗೆ ಆಗಿದೆ. ಮುಂದಿನ ಒಂದು ವಾರದಲ್ಲಿ ಸಾರ್ವಜನಿಕರಿಂದ ಬಂದಿರುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸಿ, ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು. ತಕ್ಷಣವೇ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಆದೇಶ ನೀಡಿ, ಅಗೆದಿರುವ ರಸ್ತೆ ವೈಜ್ಞಾನಿಕವಾಗಿ ಮುಚ್ಚಲು ಸೂಚಿಸಲಾಗುವುದು ಎಂದು ಭರವಸೆ ನೀಡಿದರು. ಎಂಜಿನಿಯರ್‌ ನಳಿನಾಕ್ಷಿ, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next