ಮಂಡ್ಯ: ಲಾಕ್‌ಡೌನ್ ಪರಿಣಾಮ ಜಿಲ್ಲೆಯಲ್ಲಿ ಜಾನುವಾರು ಹಸಿವಿನಿಂದ ಬಳಲುತ್ತಿವೆ. ಸಮರ್ಪಕವಾಗಿ ಆಹಾರ ದೊರಕದೆ ಮೂಕರೋಧನ ಅನುಭವಿಸುತ್ತಿವೆ. ಬೇಸಿಗೆಯಿಂದಾಗಿ ಒಂದೆಡೆ ಹಸಿರು ಮೇವು ಸಿಗುತ್ತಿಲ್ಲ, ಮತ್ತೂಂದೆಡೆ ಹಾಲು ನೀಡುವ ಹಸುಗಳಿಗೆ ಅಗತ್ಯವಿರುವಷ್ಟು ಆಹಾರ ನೀಡಲಾಗದೆ ರೈತರು ಪರಿತಪಿಸುತ್ತಿದ್ದಾರೆ.
ಲಾಕ್‌ಡೌನ್ ಪಶು ಆಹಾರದ ಪೂರೈಕೆಯನ್ನು ಕುಸಿಯುವಂತೆ ಮಾಡಿದೆ. ಇದರಿಂದ ಬೇಡಿಕೆ ಸೃಷ್ಟಿಯಾಗಿದ್ದು, ಬೆಲೆಯೂ ದುಬಾರಿಯಾಗಿದೆ. ರೈತರು ಆರ್ಥಿಕ ಸಂಕಷ್ಟದ ನಡುವೆ ಸಾಮಾನ್ಯ ದರಕ್ಕಿಂತ ಹೆಚ್ಚು ದರ ನೀಡಿ ಕೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಪಶು ಆಹಾರ ಅಂಗಡಿ ಮಾಲೀಕರು ಬೆಳಗ್ಗೆ 5ರಿಂದ 9 ಗಂಟೆವರೆಗೆ ಮಾತ್ರ ಅಂಗಡಿ ಬಾಗಿಲು ತೆರೆಯುತ್ತಿದ್ದು, ಆ ಸಮಯದಲ್ಲೇ ಪಶುಗಳಿಗೆ ಅಗತ್ಯವಿರುವ ಹಿಂಡಿ, ರವೆಬೂಸಾ, ಫಿಡ್ಸ್ ಖರೀದಿಸಿದೆ. ಅದಕ್ಕೂ ಟೋಕನ್ ಪಡೆದು ಸರದಿಯಲ್ಲಿ ನಿಂತು ಖರೀದಿಸಬೇಕಿದೆ.
ಪಶು ಆಹಾರ ಒಮ್ಮೆ ಖರೀದಿ ಸಂಗ್ರಹಿಸಿಟ್ಟುಕೊಳ್ಳುವಂತಿಲ್ಲ. ಕನಿಷ್ಠ 25 ಕೆಜಿ ಸಿಗಬಹುದು. ಹೆಚ್ಚುವರಿ ನೀಡುವಂತೆ ಕೇಳಿದರೆ ಸ್ಟಾಕ್ ಇಲ್ಲ ಎನ್ನುತ್ತಾರೆ. ಲಾಕ್ ಡೌನ್ ಜಾರಿಯಾದ ಬಳಿಕ ಎಲ್ಲಾ ಪಶು ಆಹಾರದ ಬೆಲೆಯಲ್ಲೂ 100 ರೂ. ಏರಿಕೆ ಯಾಗಿದೆ. ದುಪ್ಪಟ್ಟು ಬೆಲೆ ಕೊಟ್ಟು ಖರೀದಿಸಬೇಕಿದೆ. ಬೆಲೆ ಹೆಚ್ಚಳ ಹಾಗೂ ದಾಸ್ತಾನು ಕೊರತೆಯಿಂದ ಪಶುಗಳಿಗೆ ನಿತ್ಯ 5 ಕೆಜಿ ನೀಡಲಾಗುತ್ತಿದ್ದ ಆಹಾರವನ್ನು ಇದೀಗ 1 ಇಲ್ಲವೇ 2 ಕೆಜಿಗೆ ಇಳಿಸಲಾಗಿದೆ. ಇದರಿಂದ 5 ಲೀ. ಹಾಲು ಕೊಡುವ ಹಸುಗಳಲ್ಲೂ ಹಾಲಿನ ಉತ್ಪಾದನೆ ಕ್ಷೀಣಿಸಿದೆ.
ಪಶು ಆಹಾರ ಸ್ಥಗಿತ: ಲಾಕ್‌ಡೌನ್ ಜಾರಿಯಿಂದ ಪಶು ಆಹಾರ ಪೂರೈಕೆಯನ್ನು ಜಿಲ್ಲಾ ಹಾಲು ಒಕ್ಕೂಟ ಸ್ಥಗಿತಗೊಳಿಸಿದೆ ಎಂಬ ಆರೋಪ ಕೇಳಿಬರುತ್ತಿವೆ. ಹಾಲಿನ ಉತ್ಪಾದನೆ ಕಡಿಮೆಯಾಗಲಿ ಎಂಬ ಉದ್ದೇಶದಿಂದ ಒಕ್ಕೂಟ ಪಶು ಆಹಾರ ಪೂರೈಕೆ ನಿಲ್ಲಿಸಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ನೀರಾವರಿ ಆಶ್ರಿತ ಪ್ರದೇಶದ ಕೆಲ ಭಾಗ ಗಳಲ್ಲಷ್ಟೇ ಹಸಿರು ಮೇವು ದೊರೆಯುತ್ತಿದೆ. ಹೀಗಾಗಿ ಆ ಭಾಗದ ಜನರು ಪಶು ಆಹಾರದ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಪಶು ಆಹಾರ ಸಕಾಲಕ್ಕೆ ನಿಗದಿಯಷ್ಟು ಸಿಗದೆ ಪರದಾಡುತ್ತಿದ್ದರೆ, ಜಾನುವಾರು ಗಳು ಅರ್ಧಹೊಟ್ಟೆ ತುಂಬಿಸಿಕೊಂಡುರೋಧಿಸುತ್ತಿವೆ.
ಲಾಕ್‌ಡೌನ್‌ನಿಂದ ಜಾನುವಾರುಗಳಿಗೆ ಆಹಾರ ಸಿಗದೆ ಕಂಗಾಲಾಗಿವೆ. ಒಕ್ಕೂಟ ಪಶು ಆಹಾರ ಪೂರೈ ಸುತ್ತಿಲ್ಲ. ಬೇಡಿಕೆಯಷ್ಟು ಪಶು ಆಹಾರವೂ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಜೊತೆಗೆ ಬೆಲೆಯಲ್ಲೂ ಹೆಚ್ಚಳವಾಗಿದೆ. ಹಾಲಿನ ಉತ್ಪಾದನೆ ಕ್ಷೀಣಿಸಿದೆ.
ನಾಗರಾಜು, ಹನಿ ಯಂಬಾಡಿ,ರೈತ
ಪಶು ಆಹಾರದ ಬೆಲೆ 150ರಿಂದ 250 ರೂ.ವರೆಗೆ ಹೆಚ್ಚಾಗಿದೆ. ಪಶು ಆಹಾರ ದೊರೆಯುತ್ತಿಲ್ಲ. 6 ಚೀಲ ಕೊಡುವ ಕಡೆಗೆ 2 ಚೀಲ ಕೊಡುತ್ತಿದ್ದಾರೆ. ಇದರಿಂದ ಪಶುಗಳಿಗೆ ನೀಡುವ ಆಹಾರದ ಪ್ರಮಾಣವನ್ನೂ ಕಡಿಮೆ ಮಾಡಿದ್ದೇವೆ. ಇದರಿಂದ ಹಾಲಿನ ಇಳುವರಿ ಕಡಿಮೆಯಾಗಿದೆ.
ಲಿಂಗರಾಜು, ಹಾಲು ಉತ್ಪಾದಕ, ಹೊಸಹಳ್ಳಿ
ಮಂಡ್ಯ ಮಂಜುನಾಥ್