Advertisement

ಬಸ್‌ ಸೌಕರ್ಯ ಕೊರತೆ: ವಿದ್ಯಾರ್ಥಿಗಳು ಹೈರಾಣ

09:37 PM Aug 19, 2019 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯ ಕಣಿವೆ ಮಾರ್ಗವಾದ ಚಿಕ್ಕಬಳ್ಳಾಪುರ-ಗೌರಿಬಿದನೂರು ನಡುವೆ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಸಮರ್ಪಕ ಸಾರಿಗೆ ಸೌಕರ್ಯ ಇಲ್ಲದೇ ವಿದ್ಯಾರ್ಥಿಗಳು ಹಾಗೂ ನಗರಕ್ಕೆ ಬರುವ ಕೂಲಿ ಕಾರ್ಮಿಕರು ಪರದಾಡುತ್ತಿದ್ದು, ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಬೇಜಾವಬ್ದಾರಿಗೆ ಪ್ರಾಣಸಂಕಟ ಎದುರಿಸುವಂತಾಗಿದೆ.

Advertisement

ಹೌದು, ಜಿಲ್ಲೆಯ ಗೌರಿಬಿದನೂರು ಮಾರ್ಗ ಕಣಿವೆ ಪ್ರದೇಶದಿಂದ ಕೂಡಿದ್ದು, ಬಳಹಷ್ಟು ಪ್ರಯಾಣಿಕರು ಬರುವಾಗ ಅಂಗೈಯಲ್ಲಿ ಜೀವ ಹಿಡಿದು ಬರುವ ಸನ್ನಿವೇಶ ಇರುತ್ತದೆ. ಆದರೆ ಇದೇ ರಸ್ತೆಯಲ್ಲಿ ಚಿಕ್ಕಬಳ್ಳಾಪುರಕ್ಕೆ ಬರಲು ಸಾರಿಗೆ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ನಿತ್ಯ ಖಾಸಗಿ ಬಸ್‌ಗಳಲ್ಲಿ ಸುರಕ್ಷತೆ ಇಲ್ಲದೇ ಪ್ರಯಾಣಿಸುವಂತಾಗಿದ್ದರೂ ಅಧಿಕಾರಿಗಳು ಸಮರ್ಪಕ ಸಾರಿಗೆ ಸೌಕರ್ಯ ಕಲ್ಪಿಸದಿರುವುದು ವಿದ್ಯಾರ್ಥಿ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಖಾಸಗಿ ಬಸ್‌ಗಳಿಗೆ ಅವಕಾಶ?: ನಿತ್ಯ ಶಾಲಾ, ಕಾಲೇಜು, ಸರ್ಕಾರಿ ಕಚೇರಿ, ಆಸ್ಪತ್ರೆ ಸೇರಿದಂತೆ ವಿವಿಧ ಕಾರ್ಯಗಳಿಗೆ ಜಿಲ್ಲೆಯ ಗೌರಿಬಿದನೂರಿನಿಂದ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಪ್ರಯಾಣಿಕರು ಪ್ರಯಾಣಿಸುತ್ತಿದ್ದರೂ ಸಾರಿಗೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಸ್‌ ಸೌಲಭ್ಯ ಕಲ್ಪಿಸದೇ ಖಾಸಗಿ ಬಸ್‌ಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಪಾಸ್‌ ಇದೆ, ಬಸ್‌ ಸಮಸ್ಯೆ: ಬೆಳಗ್ಗೆ 7 ರಿಂದ 10 ಗಂಟೆ ಸಮಯದಲ್ಲಿ ಈ ಮಾರ್ಗದಲ್ಲಿ ಕೆಂಪು ಬಸ್‌ಗಳು ಕಾಣುವುದೇ ಅಪರೂಪ. ಖಾಸಗಿ ಬಸ್‌ಗಳ ಸಂಚಾರವೇ ಹೆಚ್ಚಾಗಿರುತ್ತದೆ. ಬಸ್‌ಪಾಸ್‌ ಇದ್ದರೂ ಬಸ್‌ ಸೌಕರ್ಯ ಇಲ್ಲ. ನಾವು ಕೂಡ ಖಾಸಗಿ ಬಸ್‌ಗಳಲ್ಲಿ ಚಿಕ್ಕಬಳ್ಳಾಪುರಕ್ಕೆ ಬರುವಂತಾಗಿದೆ ಎಂದು ಮಂಚೇನಹಳ್ಳಿ ಹೋಬಳಿಯ ಬಿಸಲಹಳ್ಳಿ ವಿದ್ಯಾರ್ಥಿ ಸುರೇಶ್‌ ಸಾರಿಗೆ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಯಾಣಿಕರ ಅಳಲು: ಕಣಿವೆ ಪ್ರದೇಶದಲ್ಲಿ ತೆರಳುವುದೇ ಹರಸಾಹಸದ ವಿಷಯ. ಖಾಸಗಿ ಬಸ್‌ಗಳ ವೇಗಕ್ಕೆ ಮಿತಿ ಇಲ್ಲ. ಕುರಿಗಳಂತೆ ಪ್ರಯಾಣಿಕರನ್ನು ತುಂಬಿಸಿಕೊಂಡು ಬರುತ್ತಾರೆ. 7 ರಿಂದ 10ರ ವರೆಗೂ ಕೆಎಸ್‌ಆರ್‌ಟಿಸಿ ಬಸ್‌ ಸೌಲಭ್ಯ ಒದಗಿಸುವಂತೆ ಕೇಳಿಕೊಂಡರೂ ಅಧಿಕಾರಿಗಳು ಸ್ಪಂದಿಸದಿರುವುದರಿಂದ ಗೌರಿಬಿದನೂರು, ಪೋಶೆಟ್ಟಿಹಳ್ಳಿ, ಮಂಚೇನಹಳ್ಳಿ ಕಡೆಯಿಂದ ಬರುವ ಪ್ರಯಾಣಿಕರು ತಮ್ಮ ಅಳಲು ತೋಡಿಕೊಳ್ಳುವಂತಾಗಿದೆ.

Advertisement

ಅಧಿಕಾರಿಗಳು ಇತ್ತ ಗಮನ ಕೊಡುತ್ತಿಲ್ಲ. ಈಗಾಗಲೇ ರಾಜ್ಯ ಸೇರಿದಂತೆ ಜಿಲ್ಲೆಯ ಹಲವೆಡೆ ಖಾಸಗಿ ಬಸ್‌ಗಳ ಅಫ‌ಘಾತ ಸಂಭವಿಸಿ ಅಮಾಯಕ ಪ್ರಯಾಣಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ಜಿಲ್ಲಾಡಳಿತ ಮಾತ್ರ ಕಣಿವೆ ಪ್ರದೇಶದಲ್ಲಿ ಪ್ರಯಾಣಿಕರ ರಕ್ಷಣೆಗೆ ಒತ್ತು ಕೊಟ್ಟು ಸರ್ಕಾರಿ ಕೆಂಪು ಬಸ್‌ಗಳ ವ್ಯವಸ್ಥೆ ಮಾಡುವಲ್ಲಿ ತೋರುತ್ತಿರುವ ನಿರ್ಲಕ್ಷ್ಯಕ್ಕೆ ಈ ಭಾಗದ ಸಾರ್ವಜನಿಕರಲ್ಲಿ, ವಿದ್ಯಾರ್ಥಿ, ಕೂಲಿ ಕಾರ್ಮಿಕರಲ್ಲಿ ಆಕ್ರೋಶವಿದೆ.

ಬಸ್‌ ಡೋರ್‌ ಕಿತ್ತು ಬರುತ್ತವೆ: ಗೌರಿಬಿದನೂರು, ಚಿಕ್ಕಬಳ್ಳಾಪುರ ನಡುವೆ ಖಾಸಗಿ ಬಸ್‌ಗಳ ಆರ್ಭಟಕ್ಕೆ ಸರ್ಕಾರಿ ಕೆಂಪು ಬಸ್‌ಗಳು ಕಾಣುವುದೇ ಅಪರೂಪವಾಗಿದ್ದು, ಬರುವ ಬಸ್‌ಗಳಿಗೆ ಪ್ರಯಾಣಿಕರು ಮುಗಿಬಿದ್ದು ಬರುವ ಸನ್ನಿವೇಶಗಳು ನಿತ್ಯ ಕಾಣುತ್ತವೆ. ಎಷ್ಟರ ಮಟ್ಟಿಗೆ ಅಂದರೆ ಬಸ್‌ನ ಡೋರ್‌ ಕಿತ್ತು ಬರುವ ರೀತಿಯಲ್ಲಿ ಬಸ್‌ಗಳಲ್ಲಿ ಪ್ರಯಾಣಿಕರ ಜಂಗುಳಿ ಇರುತ್ತದೆ. ಆದರೆ ಕೆಎಸ್‌ಆರ್‌ಟಿಸಿ ಇಲಾಖೆ ಅಧಿಕಾರಿಗಳು ಮಾತ್ರ ಶಾಲಾ, ಕಾಲೇಜುಗಳಿಗೆ ಬಂದು ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಸಾರಿಗೆ ಸೌಕರ್ಯ ಕಲ್ಪಿಸದೇ ವಿದ್ಯಾರ್ಥಿ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಣಿವೆಯಲ್ಲಿ ಬಸ್‌ ಸಂಚರಿಸಿದರೂ ಬಹಳಷ್ಟು ಬಸ್‌ಗಳಿಗೆ ಡೋರ್‌ ಇಲ್ಲದೇ ಸಂಚರಿಸುತ್ತವೆ. ಹಲವು ತಿಂಗಳ ಹಿಂದೆ ಬಸ್‌ ಕೊರತೆಯಿಂದ ಬಸ್‌ನಲ್ಲಿ ಸೀಟು ಹಿಡಿಯಲು ಹೋದ ಎಂಜಿನಿಯರ್‌ ವಿದ್ಯಾರ್ಥಿ ಬಸ್‌ ಚಕ್ರಕ್ಕೆ ಸಿಲುಕಿ ನಿಲ್ದಾಣದಲ್ಲಿಯೇ ಕೊನೆಯುಸಿರು ಎಳೆದಿದ್ದ. ಮೊನ್ನೆ ಮೊನ್ನೆ ಪಾವಗಡಕ್ಕೆ ತೆರಳುತ್ತಿದ್ದ ಕೆಂಪು ಬಸ್‌ ಕಣಿವೆಯಲ್ಲಿ ಪಲ್ಟಿಯಾಗಿ ಪ್ರಯಾಣಿಕರು ಗಾಯಗೊಂಡಿದ್ದರೂ ಸಾರಿಗೆ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿರುವುದು ಏಕೆ ಎಂಬ ಪ್ರಶ್ನೆ ಕಣಿವೆ ಮಾರ್ಗದಲ್ಲಿ ನಿತ್ಯ ಸಂಚರಿಸುವ ಪ್ರಯಾಣಿಕರದ್ದಾಗಿದೆ.

ಆರ್‌ಟಿಒ ಅಧಿಕಾರಿಗಳು ಎಲ್ಲಿದ್ದಾರೆ?: ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರಗಮಲ್ಲ ರಸ್ತೆಯಲ್ಲಿ ಟಾಟಾ ಏಸ್‌ ಹಾಗೂ ಖಾಸಗಿ ಬಸ್‌ ನಡುವೆ ಸಂಭವಿಸಿದ ಮುಖಾಮುಖೀ ಡಿಕ್ಕಿಯಿಂದ 11 ಮಂದಿ ಪ್ರಯಾಣಿಕರು ಮೃತಪಟ್ಟ ಬಳಿಕ ಎಚ್ಚೆತ್ತುಕೊಂಡು ಆರ್‌ಟಿಒ ಅಧಿಕಾರಿಗಳು ನೆಪ ಮಾತ್ರಕ್ಕೆ ಕೆಲ ದಿನಗಳ ಕಾಲ ಜಿಲ್ಲಾದ್ಯಂತ ಖಾಸಗಿ ಬಸ್‌ಗಳ ವಿರುದ್ಧ ಕಾರ್ಯಾಚರಣೆ ನಡೆಸಿದರು.

ಇದೀಗ ಮತ್ತೆ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳ ಹಾವಳಿ ಹೆಚ್ಚಾಗಿದ್ದು, ಹೇಳ್ಳೋರು ಕೇಳ್ಳೋರು ಇಲ್ಲವಾಗಿದೆ. ಅದರಲ್ಲೂ ಕಣಿವೆ ಪ್ರದೇಶದಲ್ಲಿ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸಬೇಕಾದರೆ ಆತಂಕ ತಪ್ಪಿದ್ದಲ್ಲ. ಆದರೆ ಸಂಚಾರಿ ನಿಯಮಗಳನ್ನು ಉಲ್ಲಂ ಸಿ ಖಾಸಗಿ ಬಸ್‌ಗಳು ತಮ್ಮ ಆಟೋಟಗಳನ್ನು ಮುಂದುವರೆಸಿದರೂ ಸೂಕ್ತ ಕ್ರಮ ಕೈಗೊಳ್ಳಬೇಕಾದ ಸಾರಿಗೆ ಇಲಾಖೆ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಗೌರಿಬಿದನೂರು-ಚಿಕ್ಕಬಳ್ಳಾಪುರ ನಡುವೆ ಬೆಳಗ್ಗೆ ಸಮಯದಲ್ಲಿ ಸಾರಿಗೆ ಸೌಕರ್ಯದ ಕೊರತೆ. ಬೆಳಗ್ಗೆ ಶಾಲಾ, ಕಾಲೇಜುಗಳಿಗೆ ಬರಲು ವಿದ್ಯಾರ್ಥಿಗಳು, ಕೆಲಸಕ್ಕೆ ಬರುವ ಕೂಲಿ ಕಾರ್ಮಿಕರಿಗೆ ಬಸ್‌ ಸೌಕರ್ಯ ಕಲ್ಪಿಸಲು ಕ್ರಮ ವಹಿಸುತ್ತೇನೆ. ಬೆಳಗ್ಗೆ ಸಮಯದಲ್ಲಿ ಮಾತ್ರ ಸ್ವಲ್ಪ ಸಮಸ್ಯೆ ಇದೆ. ಇದನ್ನು ಸರಿಪಡಿಸಲು ಕ್ರಮ ವಹಿಸುತ್ತೇವೆ.
-ಬಿ.ಬಸವರಾಜ್‌, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next