Advertisement
ರಾಜೀವ್‌ಗಾಂಧಿ ವಸತಿ ನಿಗಮದ ವತಿಯಿಂದ ತಲಾ 5.50 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣವಾಗಲಿದ್ದು, ಸರ್ಕಾರದಿಂದ ಸಬ್ಸಿಡಿ ಸಹ ದೊರೆಯಲಿದೆ. ಮುಂದಿನ 24 ತಿಂಗಳಲ್ಲಿ 1 ಲಕ್ಷ ಮನೆ (ನೆಲ ಮತ್ತು ಮೂರು ಅಂತಸ್ತಿನ ಅಪಾರ್ಟ್‌ಮೆಂಟ್) ನಿರ್ಮಿಸಲು ನಿರ್ಧರಿಸಿದ್ದು, ನ.15ರಿಂದ ಆನ್‌ಲೈನ್‌ಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗುವುದು.
Related Articles
Advertisement
“ಒಟ್ಟು 5.5 ಲಕ್ಷ ರೂ.ವೆಚ್ಚದ ಈ ಮನೆಗಳಿಗಾಗಿ ಫಲಾನುಭವಿಗಳು ಅರ್ಜಿ ಸಲ್ಲಿಸುವಾಗ ಪರಿಶಿಷ್ಟರಾಗಿದ್ದರೆ 50 ಸಾವಿರ ರೂ. ಹಾಗೂ ಸಾಮಾನ್ಯ ವರ್ಗದವರು 1 ಲಕ್ಷ ರೂ. ಆರಂಭಿಕ ಠೇವಣಿ ಪಾವತಿಸಬೇಕು. ಫಲಾನುಭವಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದರೆ ಒಟ್ಟು 3.80 ಲಕ್ಷ ರೂ. ಹಾಗೂ ಸಾಮಾನ್ಯ ವರ್ಗದವರಿಗೆ 2.70 ಲಕ್ಷ ರೂ. ಸಬ್ಸಿಡಿ ಸಿಗಲಿದೆ.
ಉಳಿದ ಮೊತ್ತವನ್ನು ಫಲಾನುಭವಿಗಳು ಭರಿಸಬೇಕಿದ್ದು, ಈ ಉದ್ದೇಶಕ್ಕೆ ಬ್ಯಾಂಕ್ ಸಾಲ ಸೌಲಭ್ಯ ಸಿಗಲಿದೆ. ಬ್ಯಾಂಕುಗಳ ಜತೆಯೂ ಈ ಸಂಬಂಧ ಮಾತನಾಡಲಾಗಿದೆ,’ ಎಂದು ಸಿಎಂ ಮಾಹಿತಿ ನೀಡಿದರು. “ಯೋಜನೆಯಡಿ ನೆಲಮಹಡಿ ಸೇರಿ ಒಟ್ಟು ನಾಲ್ಕು ಅಂತಸ್ತುಗಳು ನಿರ್ಮಾಣವಾಗಲಿದ್ದು, ಮಲಗುವ ಕೊಠಡಿ, ಹಾಲ್, ಅಡುಗೆ ಮನೆ, ಸ್ನಾನದ ಕೋಣೆ ಇರಲಿವೆ.
ತುಮಕೂರಿನಲ್ಲಿ ಈಗಾಗಲೇ ತಲಾ 4.70 ಲಕ್ಷ ರೂ. ವೆಚ್ಚದಲ್ಲಿ ರಾಜೀವ್‌ಗಾಂಧಿ ವಸತಿ ನಿಗಮ ನಿರ್ಮಿಸಿರುವ ಮನೆಗಳ ಮಾದರಿಯಲ್ಲೇ ಈ ಮನೆಗಳನ್ನು ನಿರ್ಮಾಣ ಮಾಡಲಾಗುವುದು. ರಸ್ತೆ, ಚರಂಡಿ ಮತ್ತಿತರ ಮೂಲಸೌಕರ್ಯ ಕಲ್ಪಿಸುವುದನ್ನೂ ಒಳಗೊಂಡಿರುವ ಕಾರಣ ಪ್ರತಿ ಮನೆ ನಿರ್ಮಾಣ ವೆಚ್ಚವನ್ನು 5.5 ಲಕ್ಷ ರೂ. ನಿಗದಿ ಮಾಡಲಾಗಿದೆ. ಮನೆಗಳ ನಿರ್ಮಾಣ ಕಾರ್ಯಕ್ಕೆ ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಲಿದೆ,’ ಎಂದು ತಿಳಿಸಿದರು.
ಹೊರವಲಯದವರಿಗೆ ಶೇ.20 ಮನೆ“ಒಂದು ಲಕ್ಷ ಮನೆಗಳ ನಿರ್ಮಾಣಕ್ಕೆ ಒಟ್ಟು 1,100 ಎಕರೆ ಭೂಮಿಯ ಅಗತ್ಯವಿದೆ. ಈ ಭೂಮಿ ಗುರುತಿಸಲು ಬೆಂಗಳೂರು ನಗರ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಜಿಲ್ಲಾಡಳಿತ ಈಗಾಗಲೇ 431 ಎಕರೆ ಭೂಮಿಯನ್ನು ಗುರುತಿಸಿದೆ. ಬಿಬಿಎಂಪಿ ವ್ಯಾಪ್ತಿಗೆ ಸೀಮಿತವಾಗದೆ ಬಿಎಂಆರ್‌ಡಿಎ ವ್ಯಾಪ್ತಿಯಲ್ಲೂ ಈ ಮನೆಗಳು ನಿರ್ಮಾಣವಾಗುತ್ತಿವೆ. ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವವರಿಗೆ ಮನೆಗಳ ಹಂಚಿಕೆಯಲ್ಲಿ ಆದ್ಯತೆ ನೀಡಲಾಗುವುದು. ಶೇ.20 ಮನೆಗಳ ಹಂಚಿಕೆಗೆ ಹೊರವಲಯದ ಕುಟುಂಬಗಳನ್ನೂ ಪರಿಗಣಿಸಲಾಗುವುದು. ಅಸಂಘಟಿತ ವಲಯದ ಕಾರ್ಮಿಕರೂ ಮನೆ ಪಡೆದುಕೊಳ್ಳಲು ಇದೊಂದು ಅವಕಾಶವಾಗಿದ್ದು, ಇಂತವರಿಗೆ ಹೆಚ್ಚು ಸಬ್ಸಿಡಿ ಸಿಗುವಂತೆ ಮಾಡಲು ಯೋಜನೆಯಲ್ಲಿ ಸಹಯೋಗಕ್ಕೆ ಕಾರ್ಮಿಕ ಇಲಾಖೆಗೂ ನಿರ್ದೇಶನ ನೀಡಲಾಗಿದೆ,’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ವಸತಿ ಸಚಿವ ಎಂ.ಕೃಷ್ಣಪ್ಪ, ಕಾರ್ಮಿಕ ಸಚಿವ ಸಂತೋಷ್‌ಲಾಡ್ ಉಪಸ್ಥಿತರಿದ್ದರು.