ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚುವ ಉದ್ದೇಶದಿಂದ ಬಿಬಿಎಂಪಿ ವಿಧಾನಸಭಾ ಕ್ಷೇತ್ರವಾರು ಲೇಬರ್ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ. ನಗರದಲ್ಲಿನ ರಸ್ತೆಗುಂಡಿಗಳನ್ನು ಮುಚ್ಚುವುದು ಹಾಗೂ ರಸ್ತೆಗುಂಡಿಗಳು ಸೃಷ್ಟಿಯಾಗದಂತೆ ಯೋಜನೆ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಎಂಜಿನಿಯರ್‌ಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸಂಬಂಧ “ಉದಯವಾಣಿ’ ಜತೆ ಮಾತನಾಡಿದ ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಬಿ.ಎನ್.ಪ್ರಹ್ಲಾದ್, ನಗರದಲ್ಲಿ ರಸ್ತೆ ಗುಂಡಿ ಗಳನ್ನು ವೈಜ್ಞಾನಿಕವಾಗಿ ಮುಚ್ಚುವುದರ ಜತೆಗೆ ಮುಂದಿನ ದಿನಗಳಲ್ಲಿ ರಸ್ತೆಗುಂಡಿಗಳು ಸೃಷ್ಟಿಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ವಿಧಾನಸಭಾ ಕ್ಷೇತ್ರವಾರು ಲೇಬರ್ ಟೆಂಡರ್ ಕರೆಯಲು ಆಯುಕ್ತರು ಸೂಚನೆ ನೀಡಿದ್ದಾರೆ ಎಂದರು.
ಪಾಲಿಕೆಯ 27 ವಿಧಾನಸಭಾ ಕ್ಷೇತ್ರಗಳಿಗೆ ಒಮ್ಮೆಗೆ ಡಾಂಬರು, ಯಂತ್ರಗಳು ಹಾಗೂ ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳುವುದು ಸವಾಲಾಗಲಿದೆ. ಈ ಹಿನ್ನೆಲೆಯಲ್ಲಿ ವಿಧಾನಸಭಾ ಕ್ಷೇತ್ರವಾರು ಲೇಬರ್ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ. ಇದರಿಂದ ಸ್ಥಳೀಯ ಸಿಬ್ಬಂದಿಗೆ ಯಾವ ರಸ್ತೆಗಳಲ್ಲಿ ರಸ್ತೆ ಗುಂಡಿಗಳು ನಿರ್ಮಾಣವಾಗಿದೆ ಎನ್ನುವ ಬಗ್ಗೆಯೂ ಅವರಿಗೆ ಮಾಹಿತಿ ಇರುವುದರಿಂದ ಶೀಘ್ರವಾಗಿ ರಸ್ತೆಗಳು ರಸ್ತೆ ಗುಂಡಿ ಮುಕ್ತವಾಗಲಿವೆ ಎಂದು ತಿಳಿಸಿದರು. ಟೆಂಡರ್‌ನಲ್ಲಿ ಭಾಗವಹಿಸುವವರು ಲೇಬರ್ (ಕಾರ್ಮಿಕರನ್ನು) ನೇಮಕ ಮಾಡಿಕೊಳ್ಳಬೇಕು ಹಾಗೂ ರೋಲರ್ ಗಳನ್ನೂ ತೆಗೆದುಕೊಂಡು ಬರಬೇಕು. ರಸ್ತೆ ಗುಂಡಿಯನ್ನು ಮುಚ್ಚುವುದಕ್ಕೆ ಬೇಕಾದ ಡಾಂಬರ್ ಅನ್ನು ಬಿಬಿಎಂ ಪಿಯ ಕಣ್ಣೂರು ಬಳಿ ಪಾಲಿಕೆಯಿಂದ ನಿರ್ಮಾಣವಾಗಿರುವ ಡಾಂಬರು ಮಿಶ್ರಣ ಘಟಕದಿಂದ ನೀಡಲಾಗುವುದು. ಇದರಿಂದ ಎಷ್ಟು ಡಾಂಬರು ಖರ್ಚಾ ಗುತ್ತಿದೆ ಎಂಬ ವಿವರ ಲಭ್ಯವಾಗಲಿದೆ. ಅಲ್ಲದೆ, ರಸ್ತೆಗಳ ಗುಣಮಟ್ಟ ವನ್ನೂ ಕಾಪಾಡಿಕೊಳ್ಳಬಹು ದಾಗಿದೆ ಎಂದು ಮಾಹಿತಿ ನೀಡಿದರು.
ಅವೈಜ್ಞಾನಿಕ ರಸ್ತೆಗುಂಡಿ ಮುಚ್ಚುತ್ತಿಲ್ಲ: ನಗರದಲ್ಲಿ ಅವೈಜ್ಞಾನಿಕ ರಸ್ತೆ ಗುಂಡಿ ಮುಚ್ಚಲಾಗುತ್ತಿದೆ ಎನ್ನುವ ಆರೋಪಕ್ಕೆ ಸಂಬಂಧಿ ಸಿದಂತೆ ಪ್ರತಿಕ್ರಿಯಿಸಿದ ಪ್ರಹ್ಲಾದ್ ಅವರು, ನಗರದಲ್ಲಿ ಯಾವುದೇ ಭಾಗದಲ್ಲಿ ಅವೈಜ್ಞಾನಿಕ ರಸ್ತೆ ಗುಂಡಿ ಮುಚ್ಚುತ್ತಿಲ್ಲ. ತಗ್ಗು ಇರುವ ಭಾಗ ಹಾಗೂ ಮುಂದಿನ ದಿನಗಳಲ್ಲಿ ರಸ್ತೆ ಗುಂಡಿ ಸೃಷ್ಟಿಯಾಗುವ ಸಾಧ್ಯತೆ ಇರುವ ಭಾಗಕ್ಕೂ ಡಾಂಬರು ಹಾಕಲಾಗುತ್ತಿದೆ. ಇದನ್ನು ಮತ್ತಷ್ಟು ವ್ಯವಸ್ಥಿತವಾಗಿ ಮುಚ್ಚಲು ನಿರ್ದೇಶನ ನೀಡಲಾಗುವುದು ಎಂದು ಹೇಳಿದರು.
ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಎಂ.ಆರ್. ವೆಂಕಟೇಶ್ ಹಾಗೂ ಎಲ್ಲ ವಲಯದ ಮುಖ್ಯ ಎಂಜಿನಿಯರ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.