Advertisement

ಕಾರ್ಮಿಕ, ರೈತನ ಪುತ್ರಿಯರು ಟಾಪರ್‌

12:09 PM Jul 16, 2020 | mahesh |

ಕೋಲಾರ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಲಾ ವಿಭಾಗದಲ್ಲಿ ನಗರದ ಸರ್ಕಾರಿ ಬಾಲಕಿಯರ ಕಾಲೇಜಿನ ಇಬ್ಬರು ಹೆಣ್ಣು ಮಕ್ಕಳು ಜಿಲ್ಲೆಗೆ ಮೊದಲಿಗರಾಗಿ, ಬಡತನ ಸಾಧನೆಗೆ ಅಡ್ಡಿಯಾಗದು ಎಂಬುದನ್ನು ಸಾಕ್ಷೀಕರಿಸಿದ್ದಾರೆ. ನಗರದ ಬಾಲಕಿಯರ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಎ.ವಿ.ಅಂಜಲಿ ಮತ್ತು ಎಸ್‌.ಎನ್‌.ಕೋಮಲಾ ಸರ್ಕಾರಿ ಸರ್ಕಾರಿ ಕಾಲೇಜಲ್ಲಿ ಓದಿ ಸಾಧನೆ ಮಾಡಿದ್ದಾರೆ.

Advertisement

ಅಂಗಡಿ ಕೂಲಿಯಿಂದ ಜೀವನ ನಿರ್ವಹಣೆ: ತಾಲೂಕಿನ ಅರಹಳ್ಳಿ ಗ್ರಾಮದ ವೆಂಕಟೇಶ್‌ ಮತ್ತು ವೆಂಕಟಲಕ್ಷ್ಮೀ ದಂಪತಿಗಳ ಮೂವರು ಮಕ್ಕಳಲ್ಲಿ 2ನೇಯವಳಾದ ಎ.ವಿ.ಅಂಜಲಿ, ದ್ವಿತೀಯ ಪಿಯು ಕಲಾ ವಿಭಾಗದಲ್ಲಿ 568 ಅಂಕ ಗಳಿಸಿ, ಜಿಲ್ಲೆಗೆ ಮೊದಲಿಗರಾಗಿದ್ದಾರೆ. ಪ್ರೌಢ ಶಾಲಾ ವ್ಯಾಸಂಗವನ್ನು ಅನುದಾನಿತ ಸಬರಮತಿ ಪ್ರೌಢಶಾಲೆಯಲ್ಲಿ ಮಾಡಿದ ಈ ವಿದ್ಯಾರ್ಥಿನಿ ಎಸ್ಸೆಸ್ಸೆಲ್ಸಿಯಲ್ಲಿ 510 ಅಂಕ ಗಳಿಸಿದ್ದರು. ತಂದೆ ನಗರದ ಹಾರ್ಡ್‌ವೇರ್‌ ಅಂಗಡಿ ಯೊಂದರಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಗೃಹಿಣಿ. ಬಡತನದಿಂದಾಗಿ ಖಾಸಗಿ ಕಾಲೇಜು ಅಥವಾ ವಿಜ್ಞಾನ ವಿಭಾಗಕ್ಕೆ ಸೇರದೇ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ
ಕಲಾ ವಿಭಾಗ ಆರಿಸಿಕೊಂಡು ಸಾಧನೆ ಮಾಡಿದ್ದಾರೆ, ಮುಂದೆ ಕೆಎಎಸ್‌ ಪರೀಕ್ಷೆ ಎದುರಿಸುವ ತವಕ ಹೊಂದಿದ್ದಾರೆ.

ಮಗಳ ಓದಿಗೆ ಅಡಚಣೆಯಾಗದಂತೆ ತಂದೆ ವೆಂಕಟೇಶ್‌ ದ್ವಿತೀಯ ಪಿಯುಸಿಗೆ ಬರುತ್ತಿದ್ದಂತೆ ಮನೆಯಲ್ಲಿ ಟಿ.ವಿ. ಮಾರಾಟ ಮಾಡಿ, ತಾವೂ ಮನರಂಜನೆಯಿಂದ
ವಂಚಿತರಾಗಿದ್ದಾಗಿ ತಿಳಿಸಿದರು. ಬೆಳಗ್ಗೆ 2 ಗಂಟೆ ಹಾಗೂ ರಾತ್ರಿ 6 ರಿಂದ 10 ಗಂಟೆಯವರೆಗೂ ಓದುತ್ತಿದ್ದುದಾಗಿ ತಿಳಿಸುವ ಅಂಜಲಿ, ದ್ವಿತೀಯ ಪಿಯುಸಿಯಲ್ಲಿ ಕನ್ನಡ- 97, ಇಂಗ್ಲಿಷ್‌-82, ಇತಿಹಾಸ-97, ಅರ್ಥ ಶಾಸ್ತ್ರ-94, ಸಮಾಜಶಾಸ್ತ್ರ-99 ಹಾಗೂ ರಾಜ್ಯ ಶಾಸ್ತ್ರದಲ್ಲಿ 90 ಅಂಕ ಗಳಿಸಿದ್ದಾರೆ.

ರೈತನ ಮಗಳು ಜಿಲ್ಲೆಗೆ ದ್ವಿತೀಯ: ತಾಲೂಕಿನ ರಾಮಪುರ ನಿವಾಸಿ ವೃತ್ತಿಯಲ್ಲಿ ಕೃಷಿಕರಾದ ನಂಜುಂಡಪ್ಪ, ಲಕ್ಷ್ಮಿದೇವಮ್ಮ ದಂಪತಿಯ ಪುತ್ರಿಯಾದ ಎಸ್‌.ಎನ್‌.ಕೋಮಲಾ 551 ಅಂಕ ಗಳಿಸುವ ಮೂಲಕ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಪ್ರೌಢ ಶಿಕ್ಷಣವನ್ನು ಹುತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮುಗಿಸಿರುವ ಈ ವಿದ್ಯಾರ್ಥಿನಿಯು, ಮುಂದೆ ಸರ್ಕಾರಿ ಮಹಿಳಾ ಕಾಲೇಜಿನಲ್ಲೇ ಪದವಿ, ಸ್ನಾತಕೋತ್ತರ ಪದವಿ ಮುಗಿಸಿ ಕೆಎಎಸ್‌ ಪರೀಕ್ಷೆ ಬರೆಯುವ ಆಶಯ ವ್ಯಕ್ತಪಡಿಸಿದ್ದಾರೆ. ಕಲಾವಿಭಾಗ ಆಯ್ಕೆ ಮಾಡಿಕೊಂಡಿದ್ದಕ್ಕೆ ಖುಷಿ ಇದೆ, ದಿನಕ್ಕೆ 6 ಗಂಟೆ ಓದುತ್ತಿದ್ದುದಾಗಿ ಈಕೆ ಹೇಳಿದ್ದಾರೆ.

ಈ ವಿದ್ಯಾರ್ಥಿನಿ ಕನ್ನಡ-98, ಇಂಗ್ಲಿಷ್‌ -81, ಇತಿಹಾಸ-95, ಅರ್ಥಶಾಸ್ತ್ರ-87, ಸಮಾಜಶಾಸ್ತ್ರ-96, ರಾಜ್ಯಶಾಸ್ತ್ರದಲ್ಲಿ 94 ಅಂಕ ಪಡೆದಿದ್ದಾರೆ. ಈ ಸಾಧಕ ವಿದ್ಯಾರ್ಥಿನಿಯ ರನ್ನು ಕಾಲೇಜಿನ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಸದಸ್ಯ ವೇಣು, ಪ್ರಾಂಶುಪಾಲ ಬಾಲಕೃಷ್ಣ, ಉಪನ್ಯಾಸಕರಾದ ಗೋಪಾಲಕೃಷ್ಣನ್‌, ಆನಂದಕುಮಾರ್‌, ಅಶ್ವತ್ಥಗೌಡ, ಟಿ.ಚಂದ್ರಪ್ಪ, ದಿನಕರ್‌, ವೆಂಕಟೇಶ್‌, ಉದಯಕುಮಾರ್‌ ಅಭಿನಂದಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next