Advertisement

ಕನ್ನಡ ಅಂಕಿ ಕಣ್ಮರೆಯಾಗುವ ಮೊದಲೇ ಕಾಯೋರ್ಯಾರು?

09:18 AM Nov 04, 2017 | |

ಬೆಂಗಳೂರು: ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಕನ್ನಡದಲ್ಲಿಯೇ ಮಾತನಾಡಿ, ಕನ್ನಡದಲ್ಲಿಯೇ ವ್ಯವಹರಿಸಿ ಎಂದೆಲ್ಲ ಸರ್ಕಾರ ಕನ್ನಡದ ಉಳಿವಿಗೆ ಸಾಕಷ್ಟು ಪ್ರಯತ್ನಗಳನ್ನು ನಿರಂತರವಾಗಿ ನಡೆಸುತ್ತಿದೆ. ಆದರೆ ತೀವ್ರ ನಿರ್ಲಕ್ಷ್ಯಕ್ಕೊಳಗಾಗಿ ಕನ್ನಡ ಅಂಕಿಗಳು ಅಳಿವಿನ ಆತಂಕ ಎದುರಿಸುತ್ತಿವೆ.

Advertisement

1 ರಿಂದ 9 ಅಂಕಿಗಳನ್ನು ಹೊಂದಿರುವ ಕನ್ನಡದ ಅಂಕಿಗಳಿಗೆ ಭಾಷೆಗೆ ದೊರೆತಷ್ಟು ಮಾನ್ಯತೆ ದೊರೆಯುತ್ತಿಲ್ಲ. ರಾಜ್ಯ ಸರ್ಕಾರ ಎಲ್ಲ ಹಂತದಲ್ಲೂ ಆಡಳಿತವನ್ನು ಕನ್ನಡದಲ್ಲಿಯೇ ನಡೆಸಬೇಕೆಂದು ಸಾಕಷ್ಟು ಆದೇಶ ಹೊರಡಿಸಿದ್ದರಿಂದ ಕನ್ನಡ ಭಾಷೆಯ ಬಳಕೆಯನ್ನೇ ಕಾಟಾಚಾರಕ್ಕೆ ಮಾಡುತ್ತಿರುವ ಅಧಿಕಾರಿಗಳ ವರ್ಗ ಕನ್ನಡ ಅಂಕಿಗಳನ್ನಂತೂ ಸಂಪೂರ್ಣ ಮರೆತೇ ಬಿಟ್ಟಿದೆ. ಸರ್ಕಾರದ ಕಡತಗಳು ಮತ್ತು ಆದೇಶಗಳು ಕನ್ನಡದಲ್ಲಿಯೇ ಇದ್ದರೂ, ಅದರಲ್ಲಿ ಬರುವ ಅಂಕಿಗಳ ಬಳಕೆ ಮಾತ್ರ ಆಂಗ್ಲ ಅಥವಾ ರೋಮನ್‌ ಭಾಷೆಯಲ್ಲಿ ಬಳಕೆ ಮಾಡಲಾಗಿರುತ್ತದೆ. ಪ್ರಮುಖವಾಗಿ ವಿಧಾನಸಭೆಯಲ್ಲಿಯೇ ಶಾಸನ ರಚಿಸುವಾಗ ಕನ್ನಡದಲ್ಲಿಯೇ ವಿಧೇಯಕದ ಪ್ರತಿ ಸಿದ್ಧಪಡಿಸಿದ್ದರೂ ಅದರಲ್ಲಿ ಬಳಸುವ ವಿಧೇಯಕದ ವರ್ಷ, ಅನುಕ್ರಮ ಸಂಖ್ಯೆಗಳು ಆಂಗ್ಲ ಭಾಷೆಯಲ್ಲಿ ಬಳಕೆಯಾಗುತ್ತಿದ್ದರೆ, ಅನುಕ್ರಮ ಸಂಖ್ಯೆಗಳ ಉಪ ಸಂಖ್ಯೆಗಳನ್ನು ರೋಮನ್‌ ಅಂಕಿಗಳನ್ನು ಬರೆಯಲಾಗುತ್ತಿದೆ. ವಿಧೇಯಕಗಳು ಕನ್ನಡದಲ್ಲಿಯೇ ಇದ್ದರೂ, ಕನ್ನಡ ಪದಗಳ ಜತೆಗೆ ಸಹೋದರಿಯಂತಿರುವ ಅಂಕಿಗಳು ಮಾತ್ರ ಅನಾಥ ಪ್ರಜ್ಞೆ ಅನುಭವಿಸುವಂತಾಗಿದೆ.

ಇಂಗ್ಲಿಷ್‌ ಅಂಕಿಗೆ ಆದ್ಯತೆ: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಒಂದ ರಿಂದ ನಾಲ್ಕನೇ ತರಗತಿವರೆಗೂ ಕನ್ನಡ ಅಂಕಿಗಳನ್ನು ಕಲಿಸಲಾಗುತ್ತದೆ. ಇದುವರೆಗೂ ಐದನೇ ತರಗತಿ ಯಿಂದ ಇಂಗ್ಲಿಷ್‌ ಅಂಕಿಗಳನ್ನು ಕಲಿಸಲಾಗುತ್ತಿತ್ತು. ಆದರೆ, ಈಗ ರಾಜ್ಯ ಸರ್ಕಾರ ಎಲ್ಲ ಸರ್ಕಾರಿ ಶಾಲೆಗಳಲ್ಲಿಯೂ ಇಂಗ್ಲಿಷನ್ನು ಒಂದು ಭಾಷೆಯಾಗಿ 1ನೇ ತರಗತಿಯಿಂದ ಕಲಿಸಲು ಆರಂಭ ಮಾಡಿ ರುವುದರಿಂದ ಮಕ್ಕಳು, 1ನೇ ತರಗತಿಯಲ್ಲಿರುವಾಗಲೇ ಇಂಗ್ಲಿಷ್‌ ಅಂಕಿ ಬಳಸಲು ಆರಂಭಿಸುವಂತಾಗಿದೆ. ಹೀಗಾಗಿ ಮುಂದಿನ ಪೀಳಿಗೆಗೆ ಕನ್ನಡ ಅಂಕಿಗಳೇ ಇರದಂತಹ ಪರಿಸ್ಥಿತಿ ನಿರ್ಮಾಣವಾ ಗುವ ಸಾಧ್ಯತೆಯಿದೆ. 

ಈಗಲೂ ಸ್ವಾತಂತ್ರ್ಯ ಹೋರಾಟಗಾರ ಎಚ್‌. ಎಸ್‌. ದೊರೆಸ್ವಾಮಿ, ಪ್ರೊ. ಪಂಡಿತಾರಾದ್ಯ, ಸಾ.ರಾ. ಸುದರ್ಶನ್‌ ಸೇರಿ ಅನೇಕರು ಕನ್ನಡ ಅಂಕಿಗಳನ್ನೇ ನಿತ್ಯ ವ್ಯವಹಾರಗಳಲ್ಲಿ ಬಳಸುತ್ತಾರೆ. ಆದರೆ, ಅನೇಕರಿಗೆ ಕನ್ನಡದ ಅಂಕಿಗಳನ್ನು ಬಳಸುವುದು ಕೀಳರಿಮೆಯಾದಂತಾಗಿದೆ.

ಅಂಕಿ ಉಳಿವಿಗೆ ಯತ್ನ: ಸರ್ಕಾರದ ಮಟ್ಟದಲ್ಲಿಯೇ ಕೇವಲ ಅಧಿಕಾರಿಗಳ ನಿರ್ಲಕ್ಷವಷ್ಟೇ ಅಲ್ಲದೇ ಜನ ಪ್ರತಿನಿಧಿಗಳ ನಿರಾಸಕ್ತಿಯಿಂದಲೂ ಕನ್ನಡ ಅಂಕಿಗಳ ಬಳಕೆ ಕಡಿಮೆಯಾಗಿದೆ. ಮುಖ್ಯಮಂತ್ರಿ, ಸಚಿವರು, ಶಾಸಕರು ತಾವು ಬರೆಯುವ ಕಡತಗಳನ್ನು ಕನ್ನಡದಲ್ಲಿಯೇ ಬರೆದರೂ ಅಂಕಿಗಳನ್ನು ಮಾತ್ರ ಆಂಗ್ಲ ಭಾಷೆಯಲ್ಲಿಯೇ ಬಳಸುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ವಾಹನಗಳ ನಂಬರ್‌ ಪ್ಲೇಟ್‌ ಮತ್ತು ಸರ್ಕಾರದ ನಿತ್ಯದ ವ್ಯವಹಾರಗಳಲ್ಲಿ ಕನ್ನಡದ ಅಂಕಿಗಳನ್ನೇ ಕಡ್ಡಾಯವಾಗಿ ಬಳಕೆ ಮಾಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಮುಖ್ಯಮಂತ್ರಿ ಚಂದ್ರು, ಸರ್ಕಾರಕ್ಕೆ ಪತ್ರ ಬರೆದು ಆಗ್ರಹ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿದ್ದ ಸರ್ಕಾರ ಸರ್ಕಾರಿ ವಾಹನಗಳ ನಂಬರ್‌ ಪ್ಲೇಟ್‌ಗಳಲ್ಲಿ ಕನ್ನಡ ಅಂಕಿಗಳನ್ನು ಕಡ್ಡಾಯವಾಗಿ ಬಳಸುವಂತೆ ಆದೇಶ ಮಾಡಿದೆ. ಇದರಿಂದ ಸರ್ಕಾರಿ ವಾಹನಗಳ ನಂಬರ್‌ ಪ್ಲೇಟ್‌ಗಳಲ್ಲಿ ಮಾತ್ರ ಕನ್ನಡ ಅಂಕಿಗಳು ಜೀವ ಹಿಡಿದುಕೊಂಡು ಬದುಕುವಂತಾಗಿದೆ. 

Advertisement

ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ಎಲ್ಲ ವ್ಯವಹಾರ ದಲ್ಲಿಯೂ ಕನ್ನಡ ಅಂಕಿ ಕಡ್ಡಾಯಗೊಳಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದ್ದೆ. ಆದರೆ, ಸರ್ಕಾರ ಸರ್ಕಾರಿ ವಾಹನಗಳಿಗೆ ಮಾತ್ರ ಕಡ್ಡಾಯಗೊಳಿಸಿದೆ. ಈ ಕುರಿತು ಮತ್ತೂಂದು ಬಾರಿ ಸರ್ಕಾರದ ಗಮನ ಸೆಳೆಯುವೆ.
 ●ಮುಖ್ಯಮಂತ್ರಿ ಚಂದ್ರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ

ಸರ್ಕಾರ ತನ್ನ ಆದೇಶ, ವಿಧೇಯಕ, ಸುತ್ತೋಲೆಗಳಲ್ಲಿಯಾ ದರೂ ರಾಜ್ಯದಲ್ಲಿ ನಡೆಯುವ ವ್ಯವಹಾರ  ಗಳಿಗೆ ಕನ್ನಡ ಅಂಕಿಗಳನ್ನು ಕಡ್ಡಾಯಗೊಳಿಸಬೇಕು. 
ಎಸ್‌.ಜಿ. ಸಿದ್ದರಾಮಯ್ಯ, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ

 ●ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next