Advertisement
ಕಾಡುಪ್ರಾಣಿಗಳು, ದನ, ನಾಯಿ ಇತ್ಯಾದಿಗಳ ಮೈಮೇಲಿರುವ ಉಣ್ಣಿ (ಉಣುಗು) ಕೆಎಫ್ಡಿ ವೈರಸ್‌ನ ಆವಾಸಸ್ಥಾನವಾಗಿದೆ. ಉಣ್ಣಿ ಒಮ್ಮೆ ವೈರಸ್ ಸೋಂಕಿತವಾದರೆ ಅದು ಜೀವಮಾನಪೂರ್ತಿ ಇರುತ್ತದೆ. ಸೋಂಕುಪೀಡಿತ ಉಣ್ಣಿಗಳಿಂದ ಕಡಿಸಿಕೊಳ್ಳುವ ಮೂಷಿಕ ವರ್ಗದ ಪ್ರಾಣಿಗಳು, ಮಂಗಗಳು ಕೆಎಫ್ಡಿವಿಯ ಸಾಮಾನ್ಯ ಆಶ್ರಯದಾತರಾಗುತ್ತವೆ. ಮಂಗ ಗಳಲ್ಲಿ ಕೆಎಫ್ಡಿವಿ ಸೋಂಕು ಉಂಟಾದಾಗ ಭಾರೀ ಪ್ರಮಾಣದಲ್ಲಿ ಮಂಗಗಳು ಸಾಯುತ್ತವೆ.
ಸೋಂಕುಪೀಡಿತ ಉಣ್ಣಿಗಳ ಕಡಿತದಿಂದ ಕೆಎಫ್ಡಿವಿ ಹರಡುತ್ತದೆ. ಸೋಂಕುಪೀಡಿತ ಉಣ್ಣಿಗಳು ಕಚ್ಚಿದಾಗ ಮಂಗಗಳು ಈ ಕಾಯಿಲೆಗೆ ತುತ್ತಾಗುತ್ತವೆ. ಬಹುತೇಕ ಮಂಗಗಳಲ್ಲಿ ಈ ಸೋಂಕು ತೀವ್ರ ಜ್ವರವನ್ನು ಉಂಟು ಮಾಡುತ್ತದೆ. ಸೋಂಕುಪೀಡಿತ ಮಂಗಗಳು ಸತ್ತಾಗ, ಉಣ್ಣಿಗಳು ಅವುಗಳ ಮೈಯಿಂದ ಉದುರಿ ಈ ಕಾಯಿಲೆ ಇನ್ನಷ್ಟು ಹರಡುವ ಸೋಂಕು ಪೀಡಿತ ಉಣ್ಣಿಗಳ “ಹಾಟ್‌ಸ್ಪಾಟ್’ಗಳು ಸೃಷ್ಟಿಯಾಗುತ್ತವೆ. ಸೋಂಕು ಪ್ರಸಾರಕ ಉಣ್ಣಿಯ ಕಡಿತದಿಂದ ಅಥವಾ ಇತ್ತೀಚೆಗೆ ಮೃತಪಟ್ಟ ಸೋಂಕುಪೀಡಿತ ಮಂಗದಂತಹ ಪ್ರಾಣಿಗಳ ಸಂಪರ್ಕದಿಂದ ಕಾಯಿಲೆ ಮನುಷ್ಯರಿಗೆ ಹರಡುತ್ತದೆ. ಮನುಷ್ಯನಿಂದ ಮನುಷ್ಯನಿಗೆ ಈ ಸೋಂಕು ಪ್ರಸರಣವಾಗಿರುವುದು ಗೊತ್ತಾಗಿಲ್ಲ. ಆಡು, ಹಸುಗಳು ಮತ್ತು ಕುರಿಯಂತಹ ದೊಡ್ಡ ಗಾತ್ರದ ಪ್ರಾಣಿಗಳು ಕೆಎಫ್ಡಿ ಸೋಂಕಿಗೆ ತುತ್ತಾಗಬಹುದಾದರೂ ಕಾಯಿಲೆಯ ಪ್ರಸರಣದಲ್ಲಿ ಅವುಗಳ ಪಾತ್ರ ಸೀಮಿತ. ಉಣ್ಣಿಗಳು ಈ ಪ್ರಾಣಿಗಳಿಂದ ರಕ್ತ ಹೀರುತ್ತವೆ; ಹೀಗಾಗಿ ಸೋಂಕುಪೀಡಿತ ದೊಡ್ಡ ಪ್ರಾಣಿಗಳು ಇತರ ಉಣ್ಣಿಗಳಿಗೆ ಸೋಂಕನ್ನು ನೀಡಬಹುದಾಗಿದೆ. ಆದರೆ ದೊಡ್ಡ ಪ್ರಾಣಿಗಳಿಂದ ಮನುಷ್ಯರಿಗೆ ಕೆಎಫ್ಡಿವಿ ಹರಡುವುದು ತೀರಾ ಅಪರೂಪ. ಅಲ್ಲದೆ, ಈ ಯಾವುದೇ ಪ್ರಾಣಿಗಳ ಪ್ಯಾಶ್ಚರೀಕರಣಗೊಳ್ಳದ ಹಾಲಿನಿಂದಲೂ ಈ ರೋಗ ಪ್ರಸರಣವಾಗಿರುವುದಕ್ಕೆ ಸಾಕ್ಷ್ಯಗಳಿಲ್ಲ.
Related Articles
ಮಂಗನಕಾಯಿಲೆಯ ಹಾವಳಿ ಸಾಮಾನ್ಯವಾಗಿ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಆರಂಭಗೊಂಡು ಜನವರಿಯಿಂದ ಎಪ್ರಿಲ್ ತನಕ ಉತ್ತುಂಗ ಸ್ಥಿತಿಯಲ್ಲಿರುತ್ತದೆ. ಮೇ-ಜೂನ್ ಹೊತ್ತಿಗೆ ಕಡಿಮೆಯಾಗುತ್ತದೆ. ಉಣ್ಣಿಗಳ ಸಂತಾನೋತ್ಪತ್ತಿ ಚಟುವಟಿಕೆಗೂ ಕೆಎಫ್ಡಿ ಹಾವಳಿಗೂ ನಿಕಟ ಸಂಬಂಧವಿದೆ. ಉಣ್ಣಿಗಳ ಸಂತಾನೋತ್ಪತ್ತಿ ನವೆಂಬರ್‌ನಿಂದ ಮೇ ವರೆಗೆ ಹೆಚ್ಚು. ಬೆಳೆದು ಹೊಟ್ಟೆ ತುಂಬಿದ ಹೆಣ್ಣು ಉಣ್ಣಿಗಳು ಎಲೆಗಳ ಅಡಿಯಲ್ಲಿ ಇರಿಸುವ ಮೊಟ್ಟೆಗಳು ಲಾರ್ವಾಗಳು ಹೊರಬರುತ್ತವೆ. ಅವುಗಳು ಇನ್ನಷ್ಟು ಸಣ್ಣ ಸಸ್ತನಿಗಳು ಮತ್ತು ಮಂಗಗಳಿಗೆ ಸೋಂಕು ಪ್ರಸರಣ ಮಾಡುತ್ತವೆ, ಆಕಸ್ಮಿಕವಾಗಿ ಮನುಷ್ಯರನ್ನು ಕಚ್ಚಿದಾಗ ಮನುಷ್ಯರಿಗೂ ರೋಗ ಹರಡುತ್ತವೆ. ತಾವು ಆಶ್ರಯ ಪಡೆದ ಪ್ರಾಣಿಗಳ ರಕ್ತ ಹೀರಿ ಬೆಳೆಯುವ ಉಣ್ಣಿಗಳು ಪ್ರೌಢವಾಗಿ ಮತ್ತೆ ರೋಗ ಪ್ರಸರಣದ ಚಕ್ರ ಮುಂದುವರಿಯುತ್ತದೆ. ಹುಳಗಳು ಮತ್ತು ಪ್ರೌಢ ಉಣ್ಣಿಗಳು ಮೂಷಿಕಗಳು ಮತ್ತು ಮೊಲಗಳಿಗೂ ಕಚ್ಚುವ ಮೂಲಕ ರೋಗ ಹರಡುತ್ತವೆ; ಈ ಮೂಷಿಕ-ಉಣ್ಣಿ ಚಕ್ರ ಒಂದು ಜೀವನಚಕ್ರಕ್ಕಿಂತ ಹೆಚ್ಚು ಮುಂದುವರಿಯುತ್ತದೆ.
Advertisement
ಸೋಂಕಿಗೀಡಾಗುವ ಅಪಾಯಕೆಎಫ್ಡಿ ಅಥವಾ ಮಂಗನ ಕಾಯಿಲೆಯು ಪಶ್ಚಿಮ ಮತ್ತು ಮಧ್ಯ ಕರ್ನಾಟಕದ ಜಿಲ್ಲೆಗಳಿಗೆ ಸೀಮಿತವಾಗಿದೆ. ಆದರೆ 2012ರ ನವೆಂಬರ್‌ನಲ್ಲಿ ರಾಜ್ಯದ ದಕ್ಷಿಣದ ತುದಿಯ, ತಮಿಳುನಾಡು ಮತ್ತು ಕೇರಳ ಗಡಿಗೆ ತಾಗಿರುವ ಜಿಲ್ಲೆಯಲ್ಲೂ ಮಂಗಗಳಲ್ಲಿ ಕೆಎಫ್ಡಿವಿ ಕಂಡುಬಂದಿದ್ದು, ವೈರಸ್ ಇನ್ನಷ್ಟು ವ್ಯಾಪಕವಾಗಿ ಹರಡಿರುವ ಸಂಭಾವ್ಯತೆ ಎಂಬುದರ ಸೂಚನೆ ನೀಡಿದೆ. ಕರ್ನಾಟಕದ ಗ್ರಾಮೀಣ ಮತ್ತು ಅರಣ್ಯ ಭಾಗದ ಜತೆಗೆ ಉದ್ಯೋಗ ಅಥವಾ ಮನೋರಂಜನೆಯ ಉದ್ದೇಶಕ್ಕಾಗಿ ಸಂಪರ್ಕ ಇರಿಸಿಕೊಂಡವರು (ಬೇಟೆಗಾರರು, ದನಗಾಹಿಗಳು, ಕೆಲಸಗಾರರು, ರೈತರು) ಸೋಂಕುಪೀಡಿತ ಉಣ್ಣಿಗಳ ಕಡಿತಕ್ಕೆ ಒಳಗಾಗಿ ಸೋಂಕುಪೀಡಿತರಾಗುವ ಅಪಾಯ ಹೊಂದಿರುತ್ತಾರೆ. ನವೆಂಬರ್‌ನಿಂದ ಜೂನ್ ತನಕದ ಒಣ ಹವೆಯ ಸಮಯದಲ್ಲಿ ಮಂಗನಕಾಯಿಲೆಯ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದ್ದು, ಋತುಮಾನವೂ ಒಂದು ಮುಖ್ಯ ಅಪಾಯಾಂಶವಾಗಿದೆ. ಚಿಹ್ನೆಗಳು ಮತ್ತು ಲಕ್ಷಣಗಳು
ಉಣ್ಣಿ ಕಡಿತ ನಡೆದ ಬಳಿಕ 3-8 ದಿನಗಳ ಬಳಿಕ ಮಂಗನ ಕಾಯಿಲೆ ಹಠಾತ್ತಾಗಿ ಚಳಿಜ್ವರ, ತಲೆನೋವಿನಂತಹ ಲಕ್ಷಣಗಳೊಂದಿಗೆ ಕಾಣಿಸಿಕೊಳ್ಳುತ್ತದೆ. ಪ್ರಾಥಮಿಕ ಲಕ್ಷಣಗಳು ಕಾಣಿಸಿಕೊಂಡ ಮೂರ್ನಾಲ್ಕು ದಿನಗಳ ಬಳಿಕ ವಾಂತಿ, ತೀವ್ರ ಸ್ನಾಯು ನೋವು, ಹೊಟ್ಟೆ-ಕರುಳಿಗೆ ಸಂಬಂಧಿಸಿದ ಲಕ್ಷಣಗಳು ಹಾಗೂ ರಕ್ತಸ್ರಾವ ತಲೆದೋರುತ್ತವೆ. ರೋಗಿಗಳಲ್ಲಿ ಕಡಿಮೆ ರಕ್ತದೊತ್ತಡ, ಪ್ಲೇಟ್‌ಲೆಟ್, ಕೆಂಪು ಮತ್ತು ಬಿಳಿ ರಕ್ತಕಣಗಳ ಸಂಖ್ಯೆ ಕಡಿಮೆಯಾಗಬಹುದು. ಲಕ್ಷಣಗಳು ಕಾಣಿಸಿಕೊಂಡ 1-2 ವಾರಗಳ ಬಳಿಕ ಕೆಲವು ರೋಗಿಗಳು ಯಾವುದೇ ಸಂಕೀರ್ಣ ಸಮಸ್ಯೆ ಇಲ್ಲದೆ ಗುಣ ಕಾಣಬಹುದು. ಆದರೆ ಶೇ.10ರಿಂದ 20ರಷ್ಟು ರೋಗಿಗಳಲ್ಲಿ ಈ ಕಾಯಿಲೆ ದ್ವಿಹಂತದ್ದಾಗಿ ಮೂರನೇ ವಾರದಿಂದ ಇನ್ನೊಮ್ಮೆ ಲಕ್ಷಣಗಳನ್ನು ತೋರ್ಪಡಿಸುತ್ತದೆ. ಜ್ವರ, ತೀವ್ರ ತಲೆನೋವು, ಮಾನಸಿಕ ಗೊಂದಲಗಳು, ನಡುಕಗಳು ಮತ್ತು ದೃಷ್ಟಿ ದೋಷಗಳಂತಹ ನರಶಾಸ್ತ್ರೀಯ ಲಕ್ಷಣಗಳು ಉಂಟಾಗುತ್ತವೆ. ಕೆಎಫ್ಡಿ ಅಥವಾ ಮಂಗನ ಕಾಯಿಲೆ ರೋಗಿಯ ಮರಣಕ್ಕೆ ಕಾರಣವಾಗುವ ಅಂದಾಜು ಪ್ರಮಾಣ ಶೇ.3ರಿಂದ 5ರಷ್ಟಿದೆ. – ಮುಂದುವರಿಯುವುದು – ಡಾ| ಶಿಪ್ರಾ ರೈ
ಸಹಾಯಕ ಪ್ರಾಧ್ಯಾಪಕರು, ಮೆಡಿಸಿನ್ ವಿಭಾಗ, ಕೆಎಂಸಿ, ಮಣಿಪಾಲ. – ಡಾ| ಕವಿತಾ ಸರವು
ಪ್ರೊಫೆಸರ್ ಮತ್ತು ವಿಭಾಗ ಮುಖ್ಯಸ್ಥೆ,
ಮೆಡಿಸಿನ್ ವಿಭಾಗ, ಕೆಎಂಸಿ ಮಣಿಪಾಲ;
ಮಣಿಪಾಲ ಮೆಕ್‌ಗಿಲ್ ಸೆಂಟರ್ ಫಾರ್ ಇನ್‌ಫೆಕ್ಷಿಯಸ್ ಡಿಸೀಸಸ್.