Advertisement

ಕೆವಿಜಿ ಪುತ್ಥಳಿ ಸ್ಥಾಪನೆ: ಜಿಲ್ಲಾಡಳಿತ ನೋಟಿಸ್‌

04:59 AM Jan 28, 2019 | |

ಸುಳ್ಯ : ನಗರದ ಖಾಸಗಿ ಬಸ್‌ ನಿಲ್ದಾಣದ ಬಳಿ ನಿರ್ಮಿಸಿದ ಆಧುನಿಕ ಸುಳ್ಯದ ನಿರ್ಮಾತೃ ಕುರುಂಜಿ ವೆಂಕಟ್ರ ಮಣ ಗೌಡ ಅವರ ಪುತ್ಥಳಿ ನಿರ್ಮಾಣಕ್ಕೆ ಅನುಮತಿ ಪಡೆದಿರುವ ದಾಖಲೆ ಕೇಳಿ ಜಿಲ್ಲಾಡಳಿತ ನೋಟಿಸ್‌ ಜಾರಿ ಮಾಡಿದೆ. ಪೂರಕ ದಾಖಲೆ ನೀಡದಿದ್ದರೆ 10 ದಿನ ಗಳೊಳಗೆ ತೆರವುಗೊಳಿಸುವ ಎಚ್ಚರಿಕೆ ನೀಡಿದೆ.

Advertisement

ನಗರ ಪಂಚಾಯತ್‌ ವ್ಯಾಪ್ತಿಯ ಖಾಸಗಿ ಬಸ್‌ ನಿಲ್ದಾಣದ ಬಳಿ ಕುರುಂಜಿ ಪುತ್ಥಳಿ ಸ್ಥಾಪಿಸಿದರೆ ಸಾರ್ವಜನಿಕರಿಗೆ ಅನಾನುಕೂಲ ಆಗುತ್ತದೆ ಎಂದು ಡಿ.ಎಂ. ಶಾರಿಖ್‌ ಅವರು ಜಿಲ್ಲಾಧಿಕಾರಿ ಕಚೇರಿಗೆ ದೂರು ನೀಡಿದ್ದರು. ಈ ಬಗ್ಗೆ ಜಿಲ್ಲಾಡಳಿತವು ನ.ಪಂ. ಮುಖ್ಯಾಧಿಕಾರಿ, ಮಂಗಳೂರು ರಾ.ಹೆ. ಪ್ರಾಧಿಕಾರದ ಕಾರ್ಯನಿರ್ವಾಹಕ ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ ಸುಳ್ಯ ಉಪವಿಭಾಗದ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್‌, ಕೆವಿಜಿ ವಿದ್ಯಾ ಸಂಸ್ಥೆಯ ಅಧ್ಯಕ್ಷರು, ಮೈಸೂರು ಮೇಟಗಳ್ಳಿ ಕರ್ನಾಟಕ ರೋಡ್‌ ಡೆವಲಪ್‌ಮೆಂಟ್ ಕಾರ್ಪೋರೇಶನ್‌ ವಿಭಾಗದ ಎಂಜಿನಿಯರ್‌ ಅವರನ್ನು ಪ್ರತಿವಾದಿ ಗಳನ್ನಾಗಿಸಿ ಜ. 7ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಚಾರಣೆ ನಡೆಸಿತ್ತು.

ಈ ಸಂದರ್ಭ ನ.ಪಂ. ಮುಖ್ಯಾಧಿಕಾರಿ 2015 ಆಗಸ್ಟ್‌ 29ರಂದು ನ.ಪಂ. ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯದ ಮಾಹಿತಿ ಒದಗಿಸಿದ್ದರು. ಆದರೆ ಇದನ್ನು ಅಧಿಕೃತ ಅನುಮತಿ ಎಂದು ಪರಿಗಣಿಸಲು ಅಸಾಧ್ಯ ಎಂದು ತೀರ್ಮಾನಿಸಲಾಗಿತ್ತು. ಉಳಿದ ಪ್ರತಿವಾದಿಗಳು ಪೂರಕ ದಾಖಲೆಗಳ ಮೂಲಕ ಪುತ್ಥಳಿ ಸ್ಥಾಪನೆ ಬಗ್ಗೆ ಸಮರ್ಥಿಸಿಕೊಂಡಿರದ ಕಾರಣ ಮುಂದಿನ ಹಂತದ ಪ್ರಕ್ರಿಯೆಗೆ ಮುಂದಾಗಿತ್ತು.

ತೆರವಿನ ಎಚ್ಚರಿಕೆಯ ನೋಟಿಸ್‌
ಪೌರಾಡಳಿತ ನಿರ್ದೇಶನಾಲಯದ ಸುತ್ತೋಲೆ ಆಧರಿಸಿ ನಿರ್ಮಾಣ ಮಾಡ ದಿರುವ ಹಾಗೂ ಅನುಮತಿ ಪಡೆದಿರುವ ಮಾಹಿತಿ ಲಭ್ಯವಿಲ್ಲದ ಕಾರಣ ಪ್ರೋಟೆಕ್ಷನ್‌ ಆಫ್‌ ಪಬ್ಲಿಕ್‌ ಪ್ರಾಪರ್ಟಿ ಕಾಯ್ದೆ ಅಡಿ ತೆರವಿಗೆ ಅವಕಾಶ ಇದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ನ.ಪಂ.ಗೆ ನೋಟಿಸ್‌ ನೀಡಿದ್ದಾರೆ. ಅನುಮತಿ ಇದ್ದಲ್ಲಿ 10 ದಿನಗಳ ಒಳಗಾಗಿ ಸಂಬಂಧಪಟ್ಟರುವ ದಾಖಲೆಗಳನ್ನು ನೀಡುವಂತೆ ಸೂಚಿಸಲಾಗಿದೆ.

ಸಂಘಟನೆಗಳಿಗೆ ನೋಟಿಸ್‌
2015ರ ನ.ಪಂ. ನಿರ್ಣಯ ಆಧರಿಸಿ ಪುತ್ಥಳಿ ನಿರ್ಮಾಣಕ್ಕೆ ಬೇಡಿಕೆ ಇರಿಸಿದ ಸಂಘ ಸಂಸ್ಥೆಗಳಿಗೆ ನೋಟಿಸ್‌ ನೀಡಲಾಗಿದೆ. ಅನುಮತಿ ಪೂರಕ ದಾಖಲೆ ಇದ್ದರೆ ಸಲ್ಲಿಸುವಂತೆ ಮುಖ್ಯಾಧಿಕಾರಿ ಮೂಲಕ ಕಾರ್ಯನಿರತ ಪತ್ರಕರ್ತರ ಸಂಘ, ಗಾಂಧಿ ಚಿಂತನೆ ವೇದಿಕೆ ಸಂಚಾಲಕರಿಗೆ ಪ್ರತಿ ಕಳುಹಿಸಲಾಗಿದೆ.

Advertisement

ತಿಂಗಳ ಹಿಂದೆ ಉದ್ಘಾಟನೆ
ಶಿಕ್ಷಣದ ಮೂಲಕ ಸುಳ್ಯವನ್ನು ಜಗತ್ತಿನ ಭೂಪಟದಲ್ಲಿ ಗುರುತಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಕುರುಂಜಿ ವೆಂಕಟರಮಣ ಗೌಡ ಅವರ ಪುತ್ಥಳಿಯನ್ನು ಡಾ| ಕುರುಂಜಿ ವೆಂಕಟ್ರಮಣ ಗೌಡ ಸ್ಮಾರಕ ಸಮಿತಿ ಆಶ್ರಯದಲ್ಲಿ 8.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಡಿ. 11ರಂದು ಕೇಂದ್ರ ಸಚಿವ ಸುರೇಶ್‌ ಪ್ರಭು ಅವರ ಉಪಸ್ಥಿತಿ ಯಲ್ಲಿ ಉದ್ಘಾಟಿಸಲಾಗಿತ್ತು. 1.5 ಲಕ್ಷ ರೂ. ವೆಚ್ಚದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು.

ಅನುಮತಿ ನೀಡಿಲ್ಲ
ಪುತ್ಥಳಿ ಸ್ಥಾಪನೆಗೆ ಸಂಬಂಧಿಸಿದ ದಾಖಲೆಗಳು ಇದ್ದಲ್ಲಿ 10 ದಿನಗಳೊಳಗೆ ಸಲ್ಲಿಸಬೇಕು. ಇಲ್ಲದಿದ್ದರೆ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ನೋಟಿಸ್‌ ನೀಡಿದ್ದಾರೆ. ಪುತ್ಥಳಿ ನಿರ್ಮಾಣದ ಸ್ಥಳ ರಾ.ಹೆ. ವ್ಯಾಪ್ತಿಗೆ ಸೇರಿದೆ. ನಿರ್ಮಾಣ ಮಾಡುವವರು ಅಲ್ಲಿಂದ ಎನ್‌ಒಸಿ ಪಡೆದು, ನ.ಪಂ.ಗೆ ಅರ್ಜಿ ಸಲ್ಲಿಸಬೇಕು. ಸಾರ್ವಜನಿಕ ಆಕ್ಷೇಪಣೆಗಳಿದ್ದರೆ ಪಡೆದುಕೊಂಡು ನಾವು ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸುವುದು ನಿಯಮ. ಈ ಪ್ರಕ್ರಿಯೆ ನ.ಪಂ. ಮೂಲಕ ಆಗಿಲ್ಲ. ಹಾಗಾಗಿ ಪುತ್ಥಳಿ ನಿರ್ಮಾಣಕ್ಕೆ ನ.ಪಂ. ಅನುಮತಿ ನೀಡಿಲ್ಲ.
 – ಮತ್ತಡಿ,ಮುಖ್ಯಾಧಿಕಾರಿ, ನ.ಪಂ. ಸುಳ್ಯ

ಸಾರ್ವಜನಿಕರಿಗೆ ತೊಂದರೆ
ಸಾರ್ವಜನಿಕರು ಓಡಾಟ ನಡೆಸುವ ಪ್ರದೇಶ ಆಗಿರುವ ಬಸ್‌ ನಿಲ್ದಾಣದಲ್ಲಿ ಪುತ್ಥಳಿ ನಿರ್ಮಿಸುವಂತಿಲ್ಲ. ಈ ಬಗ್ಗೆ ಹೈಕೋರ್ಟ್‌ ಆದೇಶ ಇತ್ತು. ನಿರ್ಮಾಣದ ಮೊದಲು ಕಾನೂನನ್ನು ಪಾಲಿಸಬೇಕಿತ್ತು. ಆರಂಭದಲ್ಲಿ ನ.ಪಂ.ಗೆ ಮಾಹಿತಿ ಕೇಳಿದ ಸಂದರ್ಭದಲ್ಲಿ ಅಲ್ಲಿಂದ ಸರಿಯಾದ ಉತ್ತರ ನೀಡದೆ ದಾರಿ ತಪ್ಪಿಸುವ ಕೆಲಸ ಮಾಡಿದ್ದರು. ಯೋಜನಾ ನಿರ್ದೇಶಕರಿಗೆ ದೂರು ನೀಡಿದ್ದೆ. ಕಾನೂನು ಎಲ್ಲರಿಗೂ ಒಂದೇ ಎನ್ನುವುದು ನನ್ನ ನಿಲುವು. ಅದು ಪಾಲನೆ ಆಗಬೇಕು.
– ಡಿ.ಎಂ. ಶಾರೀಕ್‌ , ದೂರು ಸಲ್ಲಿಸಿದವರು

Advertisement

Udayavani is now on Telegram. Click here to join our channel and stay updated with the latest news.

Next