ರಾಯಚೂರು: ಕರ್ನಾಟಕ ನಗರ ನೀರು ಸರಬರಾಜು ಉತ್ತರ ಕರ್ನಾಟಕ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯನ್ನು ಈ ಭಾಗದಲ್ಲಿ ಸ್ಥಾಪಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ತಿಳಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಉತ್ತರ ಕರ್ನಾಟಕ ಕಚೇರಿ ಬೆಂಗಳೂರಿನಲ್ಲಿದೆ. ಅದನ್ನು ಬಳ್ಳಾರಿ ಅಥವ ಹುಬ್ಬಳ್ಳಿಗೆ ಸ್ಥಳಾಂತರಿಸುವ ಕುರಿತು ಸಿಎಂ ಜತೆ ಚರ್ಚಿಸಲಾಗುವುದು ಎಂದರು.
ಉತ್ತರ ಕರ್ನಾಟಕದ ನಗರಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ನನೆಗುದಿಗೆ ಬಿದ್ದ ಕಾಮಗಾರಿಗಳಿಗೆ ಚುರುಕು ನೀಡಲು ತಾಕೀತು ಮಾಡಲಾಗಿದೆ. ಕಳಪೆ ಕಾಮಗಾರಿಗಳಾಗಿದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಕೋವಿಡ್ ದಿಂದ ಸರ್ಕಾರ ಆರ್ಥಿಕ ಸಂಕಷ್ಟ ಎದುರಾಗಿದ್ದು ಹೊಸ ನೇಮಕಾತಿ ಸದ್ಯಕ್ಕೆ ಮಾಡುತ್ತಿಲ್ಲ. ಇರುವ ಸಿಬ್ಬಂದಿಯಿಂದಲೇ ಕೆಲಸ ಪಡೆಯಲಾಗುತ್ತಿದೆ ಎಂದರು.
ಇದನ್ನೂ ಓದಿ: ಶಿಕ್ಷಣ ನಾಲ್ಕು ಗೋಡೆ ಮಧ್ಯೆ ಸೀಮಿತಗೊಳಿಸಬೇಡಿ; ಪ್ರಧಾನಿ ಹೇಳಿದ 5 E ಸೂತ್ರ ಯಾವುದು?
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭೇಟಿ ಬಗ್ಗೆ ನನಗೇನು ಗೊತ್ತಿಲ್ಲ. ಸದ್ಯಕ್ಕೆ ನಾಯಕತ್ವ ಬದಲಾವಣೆ ಮಾತೇ ಇಲ್ಲ. ಬಿಎಸ್ ವೈ ಪ್ರಶ್ನಾತೀತ ನಾಯಕರು ಎಂದರು.