ಕುಷ್ಟಗಿ : ಇಲ್ಲಿನ ತಹಸೀಲ್ದಾರ್ ಕಛೇರಿ ಪಕ್ಕದ ಸಮಾಜ ಕಲ್ಯಾಣ ಇಲಾಖೆಯ ಎಸ್ಸಿ, ಎಸ್ಟಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಅವ್ಯವಸ್ಥೆಯ ಆಗರವಾಗಿದೆ. ಕಳೆದ ಎರಡು ದಿನಗಳಿಂದ ಅಹಾರದಲ್ಲಿ ಬಾಲ ಹುಳು ಕಂಡು ವಿದ್ಯಾರ್ಥಿನಿಯರು ಊಟ, ಉಪಹಾರ ತ್ಯಜಿಸುತ್ತಿದ್ದಾರೆ, ಅಹಾರ ಇಲ್ಲದೇ ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿಗಳು ಶಾಲೆಯಲ್ಲಿ ಮೂರ್ಛೆ ಹೋಗುತ್ತಿದ್ದಾರೆ.
ಕುಷ್ಟಗಿ ಹನುಮಸಾಗರ ರಸ್ತೆಯಲ್ಲಿರುವ ಈ ವಸತಿ ನಿಲಯದಲ್ಲಿ ಸ್ವಚ್ಚತೆ ಮಾಯವಾಗಿದ್ದು ವಿಪರೀತ ಸೊಳ್ಳೆ ಕಾಟ ಹೆಚ್ಚಾಗಿದೆ. ಜ್ವರದಿಂದ ಬಳಲುವ ವಿದ್ಯಾರ್ಥಿನಿಯರು ಆರೈಕೆಗಾಗಿ ತಮ್ಮೂರತ್ತ ಮುಖ ಮಾಡಿದ್ದಾರೆ. ಈ ಸಮಸ್ಯೆ ಒಂದೆಡೆಯಾದರೆ ಅಹಾರ ಪದಾರ್ಥ ಸ್ವಚ್ಚತೆ ಇಲ್ಲದಿರುವ ಹಿನ್ನೆಲೆಯಲ್ಲಿ ಬೇಯಿಸಿದ ಆಹಾರದಲ್ಲಿ ಬಾಲ ಹುಳ, ನುಸಿ ಕಂಡು ಬಂದಿದ್ದು ಸಾಮೂಹಿಕ ಸಮೂಹ ಸನ್ನಿಗೆ ಒಳಗಾಗಿದ್ದು ವಾಂತಿ ಮಾಡಿಕೊಳ್ಳುತ್ತಿದ್ದಾರೆ.
ಕಳೆದೆರೆಡು ದಿನಗಳಿಂದ ವಾಂತಿಗೆ ಹೆದರಿದ ವಿದ್ಯಾರ್ಥಿನಿಯರು ವಸತಿ ನಿಲಯದ ಊಟ ತ್ಯಜಿಸಿ ಉಪವಾಸದಿಂದ ಶಾಲೆಗೆ ಬರುತ್ತಿದ್ದಾರೆ ಇದರಿಂದ ಪ್ರಾರ್ಥನೆ ವೇಳೆ, ತರಗತಿಯಲ್ಲಿ ತಲೆಸುತ್ತಿ ಬೀಳುತ್ತಿದ್ದಾರೆ.
ಸದರಿ ವಸತಿ ನಿಲಯದಲ್ಲಿ ಐವರು ಅಡುಗೆ ಮಾಡುವವರಿದ್ದು ಅರೆಬೆಂದ ಅಹಾರ, ಹಸಿಬಿಸಿ ಚಪಾತಿ ಮಾಡುತ್ತಿದ್ದು, ಅಹಾರ ಗುಣಮಟ್ಟ ಕಳಪೆಯಾಗಿದೆ. ಸಿಬ್ಬಂದಿ ಸರಿಯಾದ ನಿರ್ವಹಣೆ ಇಲ್ಲ. ಅಹಾರ ಪದಾರ್ಥ ಸ್ವಚ್ಚತೆ ಇಲ್ಲ. ಅಹಾರ ರುಚಿ, ಶುಚಿ ಮೊದಲೇ ಇಲ್ಲ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಹದಗೆಟ್ಟಿರುವ ವಸತಿ ನಿಲಯದ ಪರಿಸರ ಸ್ವಚ್ಚಗೊಳಿಸಿ, ಸೊಳ್ಳೆಗಳ ನಿರ್ಮೂಲನೆಗೆ ಫಾಗೀಂಗ್ ವ್ಯವಸ್ಥೆ ಹಾಗೂ ಅಡುಗೆ ತಯಾರಿಕೆಯಲ್ಲಿ ಸ್ವಚ್ಚತೆ ಕಾಯ್ದುಕೊಳ್ಳದೇ ಇದ್ದರೆ ಬೇರೆ ಅಡುಗೆಯವರನ್ನು ನೇಮಿಸಬೇಕೆಂದು ವಿದ್ಯಾರ್ಥಿನಿಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಹಿಜಾಬ್ ವಿರೋಧಿ ಪ್ರತಿಭಟನೆ; ಇರಾನ್ ನಲ್ಲಿ ಭದ್ರತಾ ಪಡೆ ಗುಂಡಿಗೆ ಐವರು ಸಾವು