ಕುಷ್ಟಗಿ: ತಳವಗೇರಾ ಸರ್ಕಾರಿ ಪ್ರೌಢಶಾಲೆ ಹಾಗೂ ಆದರ್ಶ ವಿದ್ಯಾಲಯದಲ್ಲಿ ಅಭ್ಯಾಸ ಮಾಡುವ ನಿಡಶೇಸಿ ಗ್ರಾಮದ ವಿದ್ಯಾರ್ಥಿಗಳಿಗೆ ಶಾಲಾ ವೇಳೆಗೆ ಬಸ್ ಸೇವೆ ಕಲ್ಪಿಸುವಂತೆ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
70ಕ್ಕೂ ಅಧಿಕ ವಿದ್ಯಾರ್ಥಿಗಳು ಕುಷ್ಟಗಿ ಪ್ರಮುಖ ರಸ್ತೆಯಲ್ಲಿ ಬಸ್ ಬೇಕೆ ಬೇಕು ಎಂದು ಘೋಷಣೆ ಕೂಗುತ್ತಾ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕುಷ್ಟಗಿ ಘಟಕದವರೆಗೆ ಸಂಚರಿಸಿದರು. ನಂತರ ಘಟಕದ ಪ್ರವೇಶ ದ್ವಾರದಲ್ಲಿ ಧರಣಿ ನಿರತರಾಗಿ ಡಿಪೋ ವ್ಯವಸ್ಥಾಪಕ, ಜಿಲ್ಲಾ ಅಧಿಕಾರಿ ವಿರುದ್ದ ಘೋಷಣೆ ಕೂಗಿದರು.
ಕುಷ್ಟಗಿ ಘಟಕ ವ್ಯವಸ್ಥಾಪಕ ಧರಣಿ ನಿರತ ಸ್ಥಳಕ್ಕೆ ಬರುವುದು ವಿಳಂಬವಾಗುತ್ತಿದ್ದಂತೆ ವಿದ್ಯಾರ್ಥಿಗಳು ಡಿಪೋ ಒಳಗೆ ನುಗ್ಗಿದ ಸಂದರ್ಭದಲ್ಲಿ ಅಲ್ಲಿನ ಸಿಬ್ಬಂದಿ ತಡೆದರು. ಘಟಕ ವ್ಯವಸ್ಥಾಪಕ ಜಡೇಶ್ ಅವರು ವಿದ್ಯಾರ್ಥಿಗಳ ಅಹವಾಲು ಆಲಿಸಿದರು.
ಇದೇ ವೇಳೆ ವಿದ್ಯಾರ್ಥಿನಿಯರು ಮಾತನಾಡಿ, ಪ್ರತಿ ದಿನ ಕುಷ್ಟಗಿಯಿಂದ ಹನುಮಸಾಗರಕ್ಕೆ ಇರುವ ಬಸ್ ಸಂಚಾರ ವ್ಯವಸ್ಥೆಯಲ್ಲಿ ಬಸ್ಸಿನಲ್ಲಿ ಕುಷ್ಟಗಿಯಿಂದ ತಳವಗೇರಾಕ್ಕೆ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳೇ ತುಂಬಿರುತ್ತಾರೆ. ನಿಡಶೇಸಿ ವಿದ್ಯಾರ್ಥಿಗಳಿಗೆ ಕಾಲು ಇಡುವಷ್ಟು ಜಾಗ ಇರುವುದಿಲ್ಲ. ವಿದ್ಯಾರ್ಥಿಗಳು ನಿಡಶೇಸಿಯಿಂದ ತಳವಗೇರಾದ ಸರ್ಕಾರಿ ಪ್ರೌಢಶಾಲಾ ಬಹುತೇಕ ವಿದ್ಯಾರ್ಥಿಗಳಿಗೆ ಬಸ್ಸು ಇದ್ದರೂ ಇಲ್ಲದಂತಿದ್ದು ಖಾಸಗಿ ವಾಹನ ಅವಲಂಬಿಸಬೇಕಿದೆ. ನಿಡಶೇಸಿಯ ಕೆಲವು ವಿದ್ಯಾರ್ಥಿಗಳು ಜೋತು ಬಿದ್ದು ಅಪಾಯಕಾರಿ ಸ್ಥಿತಿಯಲ್ಲಿ ಸಂಚರಿಸಬೇಕಿದೆ. ಈ ವೇಳೆ ಬಸ್ಸಿನಿಂದ ಜಾರಿ ಬಿದ್ದಿರುವ ಉದಾಹರಣೆಗಳಗವೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮೊದಲ ತರಗತಿ ತಪ್ಪುತ್ತಿದ್ದು ಶಿಕ್ಷಕರಿಂದ ಬೈಗುಳ ಕೇಳಬೇಕಾಗುತ್ತಿದೆ. ಪ್ರತಿ ದಿನ ಖಾಸಗಿ ವಾಹನಕ್ಕಾಗಿ ಪಾಲಕರು ಹಣ ನೀಡುವುದಿಲ್ಲ. ಬಸ್ ಪಾಸ್ ಮಾಡಿಸಿದರೂ ವ್ಯರ್ಥವಾಗಿದೆ ಎಂದು ಅಳಲು ತೋಡಿಕೊಂಡರು.
ಘಟಕ ವ್ಯವಸ್ಥಾಪಕ ಜಡೇಶ ಪ್ರತಿಕ್ರಿಯಿಸಿ, ಏಕಕಾಲಕ್ಕೆ ಎರಡೆರೆಡು ಬಸ್ ಗಳನ್ನು ಬಿಡಲು ಸಾದ್ಯವಿಲ್ಲ. ಸಕಾಲಿಕ ಬಸ್ ವ್ಯವಸ್ಥೆಗಾಗಿ ಅಧಿಕಾರಿಗಳನ್ನು ವಾಸ್ತವ ಸ್ಥಿತಿ ಪರಿಶೀಲನೆಗೆ ಕಳುಹಿಸಿ ಅವರು ನೀಡುವ ವರದಿ ಆಧಾರಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.