ಕುಷ್ಟಗಿ: ನಿಡಶೇಸಿ ವಿದ್ಯಾರ್ಥಿಗಳ ಬಸ್ ಬೇಡಿಕೆಗೆ ಸ್ಪಂದಿಸದ ಕುಷ್ಟಗಿ ಘಟಕದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳ ನಡೆ ಖಂಡಿಸಿ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳು ಕಳೆದ ಸೆ.15 ರಂದು ಕುಷ್ಟಗಿ ಘಟಕಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಘಟಕ ವ್ಯವಸ್ಥಾಪಕ ಜಡೇಶ್, 2-3 ದಿನಗಳ ಕಾಲಾವಕಾಶ ಕೇಳಿದ್ದರು. ಆದರೆ ಸೆ.20 ವರೆಗೂ ಬಸ್ಸು ಬೇಡಿಕೆಗೆ ಸ್ಪಂದಿಸದೇ ಇದ್ದಾಗ ವಿದ್ಯಾರ್ಥಿಗಳು ನಿಡಶೇಸಿಯಲ್ಲಿ ಬಸ್ ತಡೆದಿದ್ದರಲ್ಲದೇ ಬಸ್ಸಿಗೆ ಅಡ್ಡ ಕುಳಿತು ಅಧಿಕಾರಿಗಳ ವಿರುದ್ದ ಧಿಕ್ಕಾರ ಕೂಗಿದರು.
ಈ ಹಿನ್ನೆಲೆಯಲ್ಲಿ ಕುಷ್ಟಗಿ ಸೇರಿದಂತೆ ವಿವಿಧ ಗ್ರಾಮಗಳಿಂದ ತಳವಗೇರಾದ ವಿದ್ಯಾ ಸಂಸ್ಥೆಗೆ ತೆರಳುವ ವಿದ್ಯಾರ್ಥಿಗಳಿಗೆ ಎರಡು ಘಂಟೆ ತಡವಾಯಿತು. ಬಸ್ ತಡೆದಿರುವ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ದೌಡಾಯಿಸಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ವಿರೋಧಿಸಿದರು. ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಆಗಮಿಸಿ, ಕ.ಕ.ರ.ಸಾ. ಸಂಸ್ಥೆಯ ಜಿಲ್ಲಾ ಅಧಿಕಾರಿ, ವಿಭಾಗೀಯ ಅಧಿಕಾರಿಗಳನ್ನು ಸಂಪರ್ಕಿಸಿ ವಾಸ್ತವ ಸ್ಥಿತಿ ವಿವರಿಸಿದರು. ಬಳಿಕ ಅಧಿಕಾರಿಗಳು ಹೆಚ್ಚುವರಿ ಬಸ್ ಓಡಿಸುವ ಭರವಸೆ ನೀಡಿದರು.
ಈ ಕುರಿತು ಗ್ರಾಮದ ಮಂಜುನಾಥ ಗುಳಗುಳಿ ಪ್ರತಿಕ್ರಿಯಿಸಿ, ಕಳೆದ ಸೆ.15 ಕ್ಕೆ ವಿದ್ಯಾರ್ಥಿಗಳ ದಿಡೀರ್ ಪ್ರತಿಭಟನೆಗೆ ಘಟಕ ವ್ಯವಸ್ಥಾಪಕ ನಾಲ್ಕು ದಿನಗಳ ಗಡವು ಕೇಳಿದ್ದರು. ಆದರೂ ಸ್ಪಂದಿಸದೇ ಇದ್ದಾಗ ಕುಷ್ಟಗಿಯಿಂದ ನಿಡಶೇಸಿ, ತಳವಗೇರಾದ ಮೂಲಕ ಹನುಮಸಾಗರಕ್ಕೆ ಹೋಗುವ ಎರಡು ಬಸ್ಸು ತಡೆದಿದ್ದೇವೆ ಎಂದು ವಿವರಿಸಿದರು.