ಕುಷ್ಟಗಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ಬಳಸಿಕೊಂಡು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹಿರೇಬನ್ನಿಗೋಳ ಗ್ರಾಮದ ರೈತ ಶರಣಪ್ಪ ತಳವಾರ ಮೇಕೆ ಶೆಡ್ ನಿರ್ಮಿಸಿ ಹತ್ತಾರು ಕುರಿ ಮರಿಗಳನ್ನು ಸಾಕುತ್ತಾ ಅವುಗಳನ್ನ ಮಾರಾಟ ಮಾಡಿ ಅಧಿಕ ಲಾಭ ಪಡೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಈ ಗ್ರಾಮದ ಬಹುತೇಕ ರೈತರು ಕೃಷಿ ಬದುಕಿನ ಜೊತೆಗೆ ಹಸು, ಎಮ್ಮೆ, ಎತ್ತು, ಮೇಕೆ ಕುರಿಗಳನ್ನು ಸಾಕುವುದು ಉಪಕಸುಬುವಾಗಿದೆ. ಆದರೆ ಜಾನುವಾರುಗಳನ್ನು ಸಾಕಲು ಸರಿಯಾದ ವ್ಯವಸ್ಥೆ ಸೂಕ್ತ ಆರೈಕೆ ಮಾಡದಿರುವುದರಿಂದ ಸಾವು ನೋವು ಸಹಜವಾಗಿತ್ತು. ಈ ಹಿನ್ನೆಲೆಯಲ್ಲಿ ಬಹುತೇಕ ಜನರು ದನಕರುಗಳನ್ನು, ಮೇಕೆ ಗಳನ್ನು ಸಾಕುವುದಕ್ಕೆ ಹಿಂದೇಟು ಹಾಕುತ್ತಿದ್ದರು. ಜಾನುವಾರುಗಳು, ಮೇಕೆ ಗಳು ಸಂಕಷ್ಟದಲ್ಲಿರುವ ಪರಿಸ್ಥಿತಿಯನ್ನು ಕಂಡು ಜನಪ್ರತಿನಿಧಿಗಳು ಗ್ರಾಮ ಪಂಚಾಯಿತಿಯೊಂದಿಗೆ ಕೈಜೋಡಿಸಿದಾಗ ನರೇಗಾ ಯೋಜನೆಯಡಿ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಮುಂದಾದರು.ಈ ಯೋಜನೆಯನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ಮೇಕೆ ಸಾಕಾಣಿಕೆಯಲ್ಲಿ ಲಾಭ ಕಂಡಿದ್ದಾರೆ.
ನರೇಗಾ ಅನುದಾನ:
68 ಸಾವಿರ ರೂ ಮೊತ್ತದಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಸುಸಜ್ಜಿತ ಮೇಕೆ ಶೆಡ್ ನಿರ್ಮಿಸಿಕೊಂಡಿದ್ದಾರೆ. ಕಾಮಗಾರಿ ಸಂಕೇತ ಸಂಖ್ಯೆ: 1520003015/ IF/93393042893147465 ಕೂಲಿ ಹಣ ರೂ.8092=00, ಸಾಮಗ್ರಿ ಹಣ ರೂ.57319=00 ಒಟ್ಟು ರೂ.65411=00 ಪಾವತಿಯಾಗಿದ್ದು 28 ಮಾನವ ದಿನಗಳನ್ನು ಸೃಜಿಸಲಾಗಿದೆ.
ವಿಭಿನ್ನ ಆಲೋಚನೆಯ ರೈತನಿಗೆ ಕೈಹಿಡಿದ ಮೇಕೆ, ಕೋಳಿ ಸಾಕಾಣಿಕೆ:
ಮೊದಲೆಲ್ಲ 02 ಎಕರೆ 07 ಗುಂಟೆ ಜಮೀನಿನಲ್ಲಿ ಸರಿಯಾದ ಬೆಳೆ ಬೆಳೆದರು ಕೂಡ 20 ರಿಂದ 25 ಕ್ವಿಂಟಲ್ ಗೋವಿನ ಜೋಳ ಬೆಳೆಯಬಹುದಿತ್ತು. ಇದರಿಂದ ಬರುವ ಆದಾಯ ಕೇವಲ ರೂ 20 ಸಾವಿರದಿಂದ 25,000 ಕೂಡ ಕೈಗೆ ಸಿಗುತ್ತಿರಲಿಲ್ಲ.
ಬಾಗಲಕೋಟೆ ನಗರದಲ್ಲಿ ಒಂದು ಮೇಕೆ ಗೆ ರೂ.11,000/-ರಂತೆ ಉಸ್ಮಾನಬಾದ್, ಬಿಟೆಲ್, ಶಿರೋಹಿ ತಳಿಯ ಮೇಕೆ ಗಳನ್ನು ಸಾಕಲು ನರೇಗಾದಡಿ ಮೇಕೆ ಶೆಡ್ ನಿರ್ಮಾಣ ಮಾಡಿಕೊಂಡು ಕುರಿಮರಿಗಳನ್ನು ಸಾಕಿ ಅವು ದೊಡ್ಡದಾದ ಮೇಲೆ ಮಾರಾಟ ಮಾಡುತ್ತಿರುವುದರಿಂದ ಆರು ತಿಂಗಳಿಗೆ ರೂ 1.20 ಲಕ್ಷ ಲಾಭ ಪಡೆದು ಒಂದು ವರ್ಷಕ್ಕೆ 2.5 ರಿಂದ 3 ಲಕ್ಷಗಳವರೆಗೆ ಆದಾಯ ಪಡೆಯುತ್ತಿದ್ದಾರೆ.
ಇದೇ ಶೆಡ್ ನಲ್ಲಿ ಕೆಳಗಡೆ 40 ಕೋಳಿಗಳನ್ನು ಸಾಕಾಣಿಕೆ ಮಾಡಿದ್ದಾರೆ. ಸುತ್ತಲೂ ತಂತಿ ಜಾಲರಿ ಮೂಲಕ ಕೋಳಿಗಳ ರಕ್ಷಣೆಗೆ ಮುಂದಾಗಿದ್ದಾರೆ. ಪ್ರತಿ 03 ತಿಂಗಳಿಗೊಮ್ಮೆ ಸ್ಥಳೀಯವಾಗಿ ಮಾರಾಟ ಮಾಡಿ ಕುಟುಂಬದ ಖರ್ಚಿಗೆ ಅನುಕೂಲವಾಗಿದೆ. ವಿಭಿನ್ನ ಆಲೋಚನೆಗಳ ರೈತ ಶರಣಪ್ಪ ಉಪಕಸಬುಗಳ ಮೂಲಕ ಆರ್ಥಿಕ ಸಬಲರಾಗಿದ್ದಾರೆ.
ಪ್ರಸ್ತುತ 23 ಮೇಕೆಗಳ ಒಡೆಯ
ಆರಂಭದಲ್ಲಿ 10 ಮೇಕೆ ಮರಿಗಳನ್ನು ಖರೀದಿಸಿದ ರೈತ ಶರಣಪ್ಪ ಪ್ರಸ್ತುತ 23 ಮೇಕೆ ಮರಿಗಳನ್ನು ಸಾಕಿ ಉತ್ತಮ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.60 ರಿಂದ 80,000 ಖರ್ಚು ಮಾಡಿ ಮೇಕೆ ಸಾಕಾಣಿಕೆಗೆ ಬೇಕಾದ ಸುಸಜ್ಜಿತ ಮೇಕೆ ದೊಡ್ಡಿಯನ್ನು ನಿರ್ಮಿಸಿಕೊಂಡಿದ್ದಾರೆ. ಆರಂಭಿಕ ಹಂತದಲ್ಲಿ ಖರೀದಿಸಿದ ಮರಿಗಳಿಗೆ ಚೆನ್ನಾಗಿ ಉಪಚಾರ ಮಾಡಿ ನೆಪಿಯರ್, ಕುದ್ರಿಮೆಂತೆ, ಹಿಪ್ಪುನೆರಳೆ ಮೂಲಕ ಮೇಯಿಸಿ ದೊಡ್ಡದಾದ ಮೇಲೆ ಮಾರಾಟ ಮಾಡಿದಾಗ ಲಕ್ಷಾಂತರ ರೂಪಾಯಿಗಳ ಆದಾಯ ಪಡೆದಿದ್ದಾರೆ.
ಕಳ್ಳರಿಂದ ಬಚಾವ್:
ಮೇಕೆ ಶೆಡ್ ನಿರ್ಮಾಣದಿಂದಾಗಿ ಮೇಕೆಗಳನ್ನು ರಕ್ಷಿಸಿಕೊಳ್ಳಬಹುದಾಗಿದೆ. ರಾತ್ರಿ ವೇಳೆ ಸೂಕ್ತ ಭದ್ರತೆಯಿಲ್ಲದೆ ಮನೆಯ ಮುಂಭಾಗದಲ್ಲಿ ಕಟ್ಟಿಹಾಕಿರುವ ಮೇಕೆಗಳನ್ನು ಟಾಟಾ ಏಸ್ ನಂಥ ವಾಹನಗಳಲ್ಲಿ ಬಂದು ಸದ್ದಿಲ್ಲದೆ ತುಂಬಿಕೊಂಡು ಹೋಗುವ ಪ್ರಕರಣಗಳು ನಡೆಯುತ್ತಿವೆ. ಶೆಡ್ ನಿರ್ಮಾಣವಾದರೆ ಅವುಗಳನ್ನು ಕಳ್ಳರಿಂದ ರಕ್ಷಣೆ ಮಾಡಲು ಸಾಧ್ಯವಾಗಲಿದೆ.
ಕುಟುಂಬಕ್ಕೆ ನೆರವಾದ ಮೇಕೆ ಸಾಕಾಣಿಕೆ:
ಬೇಸಾಯದ ಜತೆಗೆ ಮೇಕೆಗಳ ಸಾಕಾಣಿಕೆ ಮಾಡುವುದು ಹೆಚ್ಚು ಲಾಭದಾಯಕ. ಇನ್ನಷ್ಟು ವ್ಯವಸ್ಥಿತವಾಗಿ ಮೇಕೆಗಳನ್ನು ಸಾಕಾಣಿಕೆ ಮಾಡುವ ಉದ್ದೇಶ ಇದೆ. ರೈತ ಕುಟುಂಬಗಳ ಯುವಕರು ಉದ್ಯೋಗ ಹುಡುಕಿಕೊಂಡು ನಗರಗಳತ್ತ ಹೋಗುವ ಅಗತ್ಯವಿಲ್ಲ. ಬೇಸಾಯದ ಜೊತೆಯಲ್ಲಿ ಮೇಕೆ, ಕೋಳಿಗಳ ಸಾಕಾಣಿಕೆ ಮಾಡಿ ಹಣ ಗಳಿಸಿ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದು ಖುಷಿ ವ್ಯಕ್ತಪಡಿಸುತ್ತಾರೆ ರೈತ ಶರಣಪ್ಪ.