ಕುಷ್ಟಗಿ: ಹಿಂಗಾರು ಹಂಗಾಮಿನ ಕಡಲೆ ಬೆಳೆಗೆ ಹಸಿರು ಕೀಟ ಬಾಧೆ ಕಾಣಿಸಿಕೊಂಡಿದ್ದು, ಈ ಕೀಟದ ನಿಯಂತ್ರಣಕ್ಕಾಗಿ ರೈತರು ಔಷಧಿ ಸಿಂಪಡಣೆಗೆ ಹರಸಹಾಸ ಪಡುತ್ತಿದ್ದಾರೆ.
ಈ ಬಾರಿ ಹಿಂಗಾರು ಹಂಗಾಮಿನಲ್ಲಿ ಅತಿವೃಷ್ಟಿ ಹಿನ್ನೆಲೆ ತಿಂಗಳು ವಿಳಂಬವಾಗಿ ಬಿತ್ತನೆ ಮಾಡಿದ್ದಾರೆ. ಸಕಾಲಿಕ ತಥಿಯಲ್ಲಿ ಬಿತ್ತನೆ ಮಾಡಿದ ರೈತರ ಕಡಲೆ ಬೆಳೆ ನಿರಂತರ ಮಳೆಗೆ ಸಿಲುಕಿ ಹಾಳಾದ ಹಿನ್ನೆಲೆ ಮುರಿದು ಬಿತ್ತನೆ ಮಾಡಿರುವುದು ರೈತರಿಗೆ ಹೊರೆಯಾಗಿದೆ. ಈ ಕಷ್ಟದ ಸಂಧರ್ಭದಲ್ಲಿ ಕಡಲೆ ಬೆಳೆಗೆ ಕಾಡುತ್ತಿರುವ ಹಸಿರು ಕೀಟ ನಿಯಂತ್ರಿಸಲು ರೈತ ಸಂಪರ್ಕ ಕೇಂದ್ರಗಳಲ್ಲಿ ಸಿಗುವ ಪ್ರಫೀನೋಫಾಸ್ ಕ್ರಿಮಿನಾಶಕ ಲಭ್ಯವಿಲ್ಲ ಎನ್ನುವುದು ರೈತರಿಗೆ ಮತ್ತಷ್ಟು ಹೊರೆಯಾಗಿದೆ.
ಸದ್ಯ ಈ ಬೆಳೆ 20 ರಿಂದ 25 ದಿನದ ಎಳೆಯ ಬೆಳೆ ಇದ್ದು, ಈಗಾಗಲೇ ವ್ಯಾಪಕವಾಗಿ ಕೀಟಬಾದೆ ಕಂಡು ಬಂದಿದ್ದು, ಈ ಸಂಧರ್ಭದಲ್ಲಿ ಸಿಂಪಡಿಸುವ ಪ್ರಫೀನೋಫಾಸ್ ಕೀಟನಾಶಕ ಸದ್ಯ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿಲ್ಲ. ರೈತರು ರೈತ ಸಂಪರ್ಕ ಕೇಂದ್ರದಲ್ಲಿ ಸಿಗುವ ನಿರೀಕ್ಷೆಯಲ್ಲಿದ್ದವರಿಗೆ ನಿರಾಶೆಯಾಗಿದ್ದು, ಖಾಸಗಿಯಾಗಿ ದುಬಾರಿ ಬೆಲೆಯಲ್ಲಿ ವಿವಿಧ ಕಂಪನಿಯ ಕ್ರಿಮಿನಾಶಕ ಖರೀದಿಸಿ ಕೀಟ ನಿಯಂತ್ರಿಸಲು ಮುಂದಾಗಿದ್ದಾರೆ.
ಸದ್ಯ ಎಳೆಯ ಎಲೆಗಳ ಮೇಲೆ ಮೊಟ್ಟೆ ಕಾಣಿಸಿಕೊಂಡಿದ್ದು, ಎಲೆಯ ಭಾಗ ಒಣಗಿದೆ. ಕೀಟದ ತೀವ್ರತೆ ಇದ್ದಲ್ಲಿ ಚಿಗುರಿನ ಭಾಗ ಎಲೆಯ ಭಾಗ ತಿಂದು ಹಾಕುತ್ತಿದೆ. ಅಲ್ಲಲ್ಲಿ ವ್ಯಾಪಿಸಿದ ಹಸಿರು ಹುಳುಗಳು ಕಂಡು ಬಂದಿದ್ದರಿಂದ ಸಾಮೂಹಿಕ ಕ್ರಿಮಿನಾಶಕ ಸಿಂಪರಣೆ ಕ್ರಮದಿಂದ ಕೀಟ ಬಾಧೆಯನ್ನು ನಿಯಂತ್ರಿಸದೇ ಇದ್ದಲ್ಲಿ ಖರ್ಚು ಮಾಡಿ ಬೆಳೆಸಿದ ಬೆಳೆ ಕೈಗೆಟುಕುವುದಿಲ್ಲ ಎನ್ನುವುದು ಗೊತ್ತಾಗಿದೆ.
ಕಡಲೆಗೆ ಹೆಲಿಕಾರ್ಪ ಅರ್ಮಿಜರ ಈ ಕೀಟವು ಈ ಹಂತದಲ್ಲಿ ಹಸಿರೆಲೆ ತಿನ್ನುತ್ತಿದ್ದು, ಇದರ ನಿಯಂತ್ರಣಕ್ಕೆ ಪ್ರಫೀನೋಪಾಸ್ ಪ್ರತಿ ಲೀಟರ್ ನೀರಿಗೆ 2 ಎಂ.ಎಲ್. ಸಿಂಪಡಿಸುವುದರಿಂದ ನಿಯಂತ್ರಣಕ್ಕೆ ಬರಲಿದೆ. ಈ ಕೀಟ ಬಾಧೆ ತೀವ್ರಗತಿಯಾದಲ್ಲಿ ಕೊರೋಜಿನ್ 3 ಎಂ.ಎಲ್.ಗೆ ಪ್ರತಿ ಲೀಟರ್ ನೀರಿಗೆ ಸಿಂಪಡಿಸಬೇಕು ಎಂದು ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ ತಿಳಿಸಿದ್ದಾರೆ.