ಕುಷ್ಟಗಿ: ಚಿಕೂನ್ ಗುನ್ಯಾಕ್ಕೆ ತತ್ತರಿಸಿದ್ದ ನೆರೆಬೆಂಚಿ ಗ್ರಾಮದಲ್ಲಿ ಸದ್ಯ ರೋಗ ನಿಯಂತ್ರಿಸಲು ಆರೋಗ್ಯ ಇಲಾಖೆ ತಾತ್ಕಾಲಿಕ ಕ್ಲಿನಿಕ್ ಆರಂಭಿಸಿದ್ದರಿಂದ ಚಿಕೂನ್ ಗುನ್ಯಾ ಪೀಡಿತರನ್ನು ಅಪಾಯದಿಂದ ಪಾರು ಮಾಡಿದೆ. ಆದರೆ ದೈನಂದಿನ ಆರೋಗ್ಯ ಸಮಸ್ಯೆಗಳಿಗೆ ಆರೋಗ್ಯ ಇಲಾಖೆಯ ನಿಯಾಮವಳಿಗೆ ಪಕ್ಕದಲ್ಲಿ ಕುಷ್ಟಗಿ ಆಸ್ಪತ್ರೆ ಇದ್ದರೂ ಸೌಲಭ್ಯಗಳಿಂದ ವಂಚಿತವಾಗಿದೆ.
ನೆರೆಬೆಂಚಿ ಗ್ರಾಮದಿಂದ ಕುಷ್ಟಗಿ ಪಟ್ಟಣ ಕೇವಲ ಐದು ಕಿ.ಮೀ. ದೂರ ಇದೆ. ಸಣ್ಣ ಪುಟ್ಟ ಕಾಯಿಲೆಗಳಿಗೆ ಹಾಗೂ ಕುಷ್ಟಗಿ ಪಟ್ಟಣದಲ್ಲಿ ಸಂತೆ ಪೇಟೆಗೆ ಹೋಗಿ ಬರುವುದರ ಜೊತೆಗೆ ಸರ್ಕಾರಿ ಆಸ್ಪತ್ರೆಗೆ ಹೋಗಿ ಆರೋಗ್ಯ ಸಮಸ್ಯೆಗೆ ಪರಿಹರಿಸಿಕೊಳ್ಳುವುದೇ ಚಿಂತೆಯಾಗಿದೆ.
ಯಾಕೆಂದರೆ ಕುಷ್ಟಗಿ ಸರ್ಕಾರಿ ಆಸ್ಪತ್ರೆಯವರು ಚಿಕಿತ್ಸೆಗೆ ನಿರಾಕರಿಸಿ ಹಿರೇಮನ್ನಾಪೂರ ಪ್ರಾಥಮಿಕ ಆರೋಗ್ಯ ಕೇಂದ್ರದೆಡೆಗೆ ಬೆರಳು ಮಾಡುತ್ತಿದ್ದಾರೆ. ನೆರೆಬೆಂಚಿ ಗ್ರಾಮದಿಂದ ಹಿರೇಮನ್ನಾಪೂರ 14 ಕಿ.ಮೀ. ದೂರ ಇದೆ. ಈ ಗ್ರಾಮಕ್ಕೆ ಹೋಗಲು ಕುಷ್ಟಗಿ ಮೂಲಕವೇ ಹೋಗಬೇಕು.
ಕಂದಕೂರ ಗ್ರಾ.ಪಂ. ವ್ಯಾಪ್ತಿಯ ನೆರೆಬೆಂಚಿ ಗ್ರಾಮ ಹಿರೇಮನ್ನಾಪೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿರುವುದು ಈ ಸಮಸ್ಯೆಗೆ ಕಾರಣ. ಕುಷ್ಟಗಿ- ಕೊಪ್ಪಳ ರಸ್ತೆಗೆ ಹೊಂದಿಕೊಂಡಿರುವ ನೆರೆಬೆಂಚಿ ಗ್ರಾಮಕ್ಕೆ ಬಸ್ಸಿನ ಸೌಲಭ್ಯ ಜೊತೆಗೆ ಖಾಸಗಿ ವಾಹನಗಳ ಸೇವೆ ಸಾಕಷ್ಟಿವೆ. ನೆಗಡಿ, ಕೆಮ್ಮಿ 14 ಕಿ.ಮೀ. ಯಾಕೆ ಹೋಗಬೇಕೆಂದು ಕುಷ್ಟಗಿ ಸರ್ಕಾರಿ ಆಸ್ಪತ್ರೆಗೂ ಹೋಗದೇ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೆರೆಬೆಂಚಿ ಗ್ರಾಮದವರಿಗೆ ಕುಷ್ಟಗಿ ತಾಲೂಕಾ ಸರ್ಕಾರಿ ಆಸ್ಪತ್ರೆ ಪಕ್ಕದಲ್ಲಿದ್ದರು ಸೇವೆಗೆ ಅಲಭ್ಯವಾಗಿದೆ.
ಶುದ್ದ ನೀರಿನ ಘಟಕ: ಶುದ್ದ ನೀರಿನ ಘಟಕ ಗ್ರಾಮದಿಂದ ಕೂಗಳತೆಯ ದೂರದಲ್ಲಿದೆ. ಗ್ರಾಮದಲ್ಲಿ ಸ್ಥಳಾಂತರಿಸಿ ಎನ್ನುವುದು ಬಹುದಿನದ ಬೇಡಿಕೆ ಆದರೆ ಪಂಚಾಯತಿಯವರು ಇದಕ್ಕೆ ಸ್ಪಂದಿಸಿಲ್ಲ. ಹೀಗಾಗಿ ಗ್ರಾಮ ಪಂಚಾಯತಿ ಪೂರೈಸಿದ ನೀರನ್ನೇ ಕುಡಿಯಲು ಬಳಸುತ್ತಿದ್ದಾರೆ. ಈ ಕೂಡಲೇ ಗ್ರಾಮದ ಬೀರಲಿಂಗೇಶ್ವರ ದೇವಾಲಯ ಹಿಂಭಾಗದಲ್ಲಿ ಸ್ಥಳಾಂತರಿಸಲು ಬೇಡಿಕೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸ್ಪಂಧಿಸಿರುವ ತಾ.ಪಂ. ಸಹಾಯಕ ನಿರ್ದೇಶಕ ನಿಂಗಪ್ಪ ಹಿರೇಹಾಳ ಅವರು, ಎನ್ನೆರೆಡು ದಿನದಲ್ಲಿ ಸ್ಥಳಾಂತರಿಸುವುದಾಗಿ ಉದಯವಾಣಿ ಪ್ರತಿನಿಧಿಗೆ ತಿಳಿಸಿದ್ದಾರೆ.