Advertisement

Kushtagi: 6 ಎಕರೆ ಕಡಲೆ ಬೆಳೆ ರಕ್ಷಿಸಿಕೊಳ್ಳಲು ಬೋರ್ವೆಲ್ ಕೊರೆಸಿದ ರೈತ

01:03 PM Nov 02, 2023 | Team Udayavani |

ಕುಷ್ಟಗಿ: ಕೈಲಾಗದು ಎಂದು ಕೈ ಕಟ್ಟಿ ಕುಳಿತರೆ ಆಗದು ಕೆಲಸವು ಮುಂದೆಂದು ಎನ್ನುವ ಅಣ್ಣಾವ್ರ (ಡಾ.ರಾಜಕುಮಾರ) ಜನಪ್ರಿಯ ಹಾಡು ಜನಜನಿತವಾಗಿದೆ. ಅವರ ಸ್ಪೂರ್ತಿಯ ಹಾಡನ್ನು ಅದೆಷ್ಟೋ ಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನದಲ್ಲಿ ಮುಂದೆ ಬಂದಿದ್ದಾರೆ.

Advertisement

ಬರದ ಈ ದಿನಗಳಲ್ಲಿ ಅಂತಹುದೇ ಉದಾಹರಣೆ ತಾಲೂಕಿನ ಗುಮಗೇರಾದಲ್ಲಿ ನಡೆದಿದೆ. ಮುಂಗಾರು- ಹಿಂಗಾರು ಹಂಗಾಮಿನಲ್ಲಿ ಮಳೆ ಕೈ ಕೊಟ್ಟ ಪರಿಣಾಮ ತಾಲೂಕು ಬರದ ದಿನಗಳನ್ನು ಎದುರಿಸುತ್ತಿದೆ. ಹಿಂಗಾರು ಮಳೆಯಿಂದ ಉತ್ತಮ‌ ಇಳುವರಿ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆಯ ಅಭಾವ ಬೆಳೆ ಬಾಡುವ ಸ್ಥಿತಿಯಲ್ಲಿ ಶಾಕ್ ನೀಡಿದೆ.

ವಾರಾಂತ್ಯದಲ್ಲಿ ಮಳೆಯಾಗದೇ ಇದ್ದರೆ ಸದ್ಯದ ಬೆಳೆ ಮಣ್ಣು ಪಾಲಾಗುವ ಸಂಭವ ಇದೆ. ಇಂತಹ ವಿಷಮ ಸ್ಥಿತಿಯಲ್ಲಿ ಗುಮಗೇರಾ ಯುವ ರೈತ ಸಹಾಸಕ್ಕೆ ಕೈ ಹಾಕಿ ಅದರಲ್ಲಿ ಯಶಸ್ವಿಯಾಗುವ ಮೂಲಕ ಬರಕ್ಕೆ ದಿಟ್ಟ ಉತ್ತರ ಕೊಟ್ಟಿದ್ದಾನೆ.

ಗುಮಗೇರಾದ ಹನಮಂತ ಕಂಬಳಿ ಎಂಬ ರೈತ ತಮ್ಮ 6 ಎಕರೆಯಲ್ಲಿ ಮಳೆಯಾಶ್ರೀತವಾಗಿ ಕಡಲೆ ಬೆಳೆ ಬೆಳೆದಿದ್ದಾರೆ. ಸದ್ಯ ಬೆಳೆ ಉತ್ತಮವಾಗಿದ್ದು ಮುಂದಿನ ದಿನಗಳಲ್ಲಿ ಮಳೆ ಬರುವುದು ಅನುಮಾನವಾಗಿದೆ.

Advertisement

ಈಗಿರುವ ಕಡಲೆಬೆಳೆ ಉಳಿಸಿಕೊಳ್ಳಲು ಸ್ಥಳೀಯ ರೈತರೊಬ್ಬರಿಂದ 60 ಪೈಪ್(1,200 ಅಡಿ ಉದ್ದ) ಹಾಕಲು ಮುಂದಾಗಿದ್ದರು. ಆದರೆ ಹೊಂದಾಣಿಕೆಯಾಗದ ಹಿನ್ನೆಲೆ ತಮ್ಮ ಜಮೀನಿನಲ್ಲಿ‌ ನ.1ರ ಬುಧವಾರ ರಾತ್ರಿ ಬೋರವೆಲ್ ಕೊರೆಸುವ ಧೈರ್ಯ ಮಾಡಿದ್ದಾರೆ.

ಕೇವಲ 100 ಅಡಿಗೆ ಅಂತರ್ಜಲ ಸಿಕ್ಕಿದ್ದು ಈ ರೈತ 220 ಅಡಿ ಕೊರೆಯಿಸಿದ್ದು ರೈತನ ಅದೃಷ್ಟಕ್ಕೆ ಎರಡೂವರೆ ಇಂಚು ನೀರು ಸಿಕ್ಕಿದೆ. ಈ ನೀರನ್ನು ಬಳಸಿಕೊಂಡು ಮೊದಲ ಹಂತದಲ್ಲಿ ಸ್ಪಿಂಕ್ಲೇರ್ (ತುಂತುರು) ನೀರಾವರಿ ಮೂಲಕ ನೀರುಣಿಸಿ ಬೆಳೆ ರಕ್ಷಿಸಿಕೊಂಡು ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದಾರೆ.

ಈ ರೈತ ಹನಮಂತ‌ ಮಳೆ ಬರಲಿಲ್ಲ ಅಂತ ಕೈ ಹೊತ್ತು ಕೂರದೇ ಬೊರ್ವೆಲ್ ಕೊರೆಸಿರುವುದು ಸಕಾಲಿಕ ನಿರ್ಧಾರಕ್ಕೆ ಅದೃಷ್ಟ ಕೈ ಹಿಡಿದಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

-ಮಂಜುನಾಥ ಮಹಾಲಿಂಗಪುರ‌

 

Advertisement

Udayavani is now on Telegram. Click here to join our channel and stay updated with the latest news.

Next