ಕುಷ್ಟಗಿ: ಟೋಲ್ ಫ್ರೀ ಬಗ್ಗೆ ಪ್ರಶ್ನಿಸಿದ್ದಕ್ಕೆ ಟೋಲ್ ಕಲೆಕ್ಟರ್ ಮೇಲೆ ಮನಸೋಯಿಚ್ಚೆ ಥಳಿಸಿದ ಘಟನೆ ಸಮೀಪ ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ವಣಗೇರಾ ಟೋಲ್ ನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಥಳಿಸಿಕೊಂಡ ಯುವಕ ಯರಗೇರಾ ಮೂಲದ ಹಿರೇಮನ್ನಾಪೂರ ನಿವಾಸಿ, ಟೋಲ್ ಕಲೆಕ್ಟರ್ ದೊಡ್ಡಬಸವ ಎಂದು ಗುರುತಿಸಲಾಗಿದೆ.
ಕಳೆದ ಆ.28ರಂದು ತಡರಾತ್ರಿ ವಣಗೇರಾ ಮಿನಿ ಗೂಡ್ಸ್ ವಾಹನದ ಟೋಲ್ ಪ್ರವೇಶ ಸಂಧರ್ಭದಲ್ಲಿ ಟೋಲ್ ಕಲೆಕ್ಟರ್ ದೊಡ್ಡಬಸವ, ವಣಗೇರಾ ಗೂಡ್ಸ್ ವಾಹನ ಪ್ರವೇಶಕ್ಕೆ ಟೋಲ್ ಫೀ ಪ್ರಸ್ತಾಪಿಸಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ವಾಗ್ವಾದದ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಸ್ವಾಯಿಂಗ್ ಮಿಷನ್ ನಿಂದ ವ್ಯಕ್ತಿ ಮೇಲೆ ಹೊಡೆದಿದ್ದಾರೆ.
ಈ ಪರಿಣಾಮ ದಾಳಿ ಮಾಡಿದ ವ್ಯಕ್ತಿಗೆ ರಕ್ತ- ಗಾಯಗಳಾಗಿದ್ದು ಇದರಿಂದ ಸಿಟ್ಟಿಗೆದ್ದು ಹೊರಗೆ ಎಳೆದು ಥಳಿಸಿದ್ದಾರೆ. ಅಷ್ಟು ಮಾತ್ರವಲ್ಲದೆ ಮಿನಿ ಗೂಡ್ಸ್ ವಾಹನ ಚಾಲಕ ಸೇರಿದಂತೆ ಆತನ ಸ್ನೇಹಿತರು, ಗುಂಪು ಕಟ್ಟಿಕೊಂಡು ದೊಡ್ಡಬಸವನನ್ನು ಹೊರಗೆ ಎಳೆದು, ಮನಸೋ ಇಚ್ಚೆ ಥಳಿಸಿರುವುದಲ್ಲದೇ, ಕಾಲಿನಿಂದ ಒದ್ದಿದ್ದಾರೆ.
ಸೆಕ್ಯೂರಿಟಿ ಗಾರ್ಡ್ ರಕ್ಷಣೆಗೆ ಬಂದರೂ ಲೆಕ್ಕಿಸದೇ ಅಟ್ಟಾಡಿಸಿ ಹೊಡೆದಿದ್ದಾರೆ. ಥಳಿಸಿರುವುದು ಟೋಲ್ ಪ್ಲಾಜಾದ ಸಿಸಿ ಟಿವಿಯಲ್ಲಿ ದಾಖಲಾಗಿದೆ.
ತೀವ್ರ ಒಳಪೆಟ್ಟಿನ ಗಾಯಗೊಂಡಿರುವ ದೊಡ್ಡಬಸವ ಕೊಪ್ಪಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬುಧವಾರ ಸ್ಥಳೀಯ ಕುಷ್ಟಗಿ ಠಾಣೆಗೆ ದೂರು ನೀಡಿದ್ದಾರೆ.