ಕುಷ್ಟಗಿ: ಕುಷ್ಟಗಿ ಪಟ್ಟಣ ಸಹಕಾರ ಬ್ಯಾಂಕಿನ ನಿವೇಶನ ಜಾಗ ಒತ್ತುವರಿಯಾಗಿದ್ದು, ಒತ್ತುವರಿ ತೆರವುಗೊಳಿಸುವಂತೆ ಪುರಸಭೆ ಮನವಿಗೆ ಮೀನಾ ಮೇಷಾ ಮುಂದುವರೆದಿದೆ.
ಕುಷ್ಟಗಿ ಪಟ್ಟಣದ ಗಜೇಂದ್ರಗಡ ರಸ್ತೆಯ ಪಕ್ಕದಲ್ಲಿರುವ ನಿವೇಶನ ಸಂಖ್ಯೆ 17/384, ವಿಸ್ತೀರ್ಣ 25×80 ಇದೆ. ಈ ನಿವೇಶನ ಪೂರ್ವಕ್ಕೆ ರಣಜಿತ್ ಪಾಲನಕರ್ ವಾಣಿಜ್ಯ ಮಳಿಗೆ, ಪಶ್ಚಿಮಕ್ಕೆ ವಿ.ಎಸ್.ಎಸ್.ಎನ್. ಜಾಗ, ಉತ್ತರಕ್ಕೆ ಗಜೇಂದ್ರಗಡ ರಸ್ತೆ, ದಕ್ಷಿಣಕ್ಕೆ ವಿ.ಎಸ್.ಎಸ್.ಎನ್ ಜಾಗ ಇದೆ.
ಕುಷ್ಟಗಿ ಪಟ್ಟಣ ಸಹಕಾರ ಬ್ಯಾಂಕಿನ ನಿಗದಿತ ಜಾಗದಲ್ಲಿ ಬ್ಯಾಂಕಿನ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಜಾಗ ಅತಿಕ್ರಮಗೊಂಡಿದ್ದು, ಬ್ಯಾಂಕ್ ಕಟ್ಟಡ ನಿರ್ಮಿಸಲು ಅಡ್ಡಿಯಾಗಿದೆ. ಈ ಜಾಗದ ಒತ್ತುವರಿ ಕಟ್ಟಡ ತೆರವುಗೊಳಿಸಲು ಪುರಸಭೆಗೆ ಕಳೆದ ಜುಲೈ 5ರಂದು ಹಾಗೂ ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ ಅವರಿಗೆ ಹಾಗೂ ಅಕ್ಟೋಬರ್ 16ರಂದು ನಗರಾಭಿವೃಧ್ಧಿ ಕೋಶ ಕೊಪ್ಪಳದ ಯೋಜನಾ ನಿರ್ದೇಶಕಿ ಕಾವ್ಯರಾಣಿ ಅವರಿಗೆ ಮನವಿ ಮಾಡಲಾಗಿದ್ದರೂ ಪ್ರಯೋಜನೆ ಆಗಿಲ್ಲ.
ಇತ್ತೀಚಿಗೆ ನಿವೇಶನದ ದಕ್ಷಿಣ ದಿಕ್ಕಿನ ಗಜೇಂದ್ರಗಡ ರಸ್ತೆಯ ಪಕ್ಕದಲ್ಲಿ ಚರಂಡಿ ನಿರ್ಮಿಸಿದ್ದು, ಇದು ಕೂಡ ಅತಿಕ್ರಮವಾಗಿದೆ. ನಿವೇಶನದ ಸುತ್ತಲೂ ಒತ್ತುವರಿ ತೆರವಿಗೆ ಪುರಸಭೆಯಿಂದ ಅಳತೆ ಮಾಡಿಕೊಡಬೇಕೆಂದು ಸಲ್ಲಿಸಿದ ಮನವಿಗೆ ಕ್ಯಾರೇ ಎಂದಿಲ್ಲ.
ಕುಷ್ಟಗಿ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷ ಪ್ರಕಾಶಗೌಡ ಬೆದವಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ ಪ್ರತಿಕ್ರಿಯಿಸಿ, ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷರು ಸಲ್ಲಿಸಿದ ಮನವಿಗೆ ಸದರಿ ನಿವೇಶನ ಅಳತೆ ಮಾಡಿಕೊಡಲು ಸಂಬಂಧಿಸಿದ ಇಲಾಖೆಗೆ ಆದೇಶಿಸಿದ್ದು ಅದರ ಫಾಲೋಅಪ್ ಬ್ಯಾಂಕಿನ ಅಧ್ಯಕ್ಷರು ಮಾಡಬೇಕಿತ್ತು ಎಂದಿದ್ದಾರೆ.