Advertisement

ಹಚ್ಚ ಹಸುರಿನಿಂದ ರೂಪುಗೊಂಡಿದೆ ವಿಶ್ರಾಂತಿ ತಾಣ

05:42 PM Feb 08, 2022 | Team Udayavani |

ವಿಶೇಷ ವರದಿ- ಸುಳ್ಯ: ಸುತ್ತಲಿನ ಹಚ್ಚ ಹಸುರಿನ ಪ್ರಕೃತಿಯ ರಮಣೀಯತೆ, ತೋಟಗಳ ಸೌಂದರ್ಯ ರಾಶಿ. ಜತೆಗೆ ನಗರದ ವಿಹಂ ಗಮ ನೋಟ ಹೊಂದಿರುವ ಸುಳ್ಯ ನಗರದ ಅತೀ ಎತ್ತರದ ಕುರುಂಜಿಗುಡ್ಡೆ ಉದ್ಯಾನ ಹೊಸತನದೊಂದಿಗೆ ಕಂಗೊ ಳಿಸುತ್ತಿದ್ದು, ಜನತೆಯನ್ನು ಕೈ ಬೀಸಿ ಕರೆಯುತ್ತಿದೆ.

Advertisement

ಸದಾ ಕೆಲಸಗಳ ಒತ್ತಡದ ಮಧ್ಯೆ ಮನಃಶಾಂತಿಗಾಗಿ ಪೇಟೆಯ ಜನತೆ ಪ್ರಕೃತಿ ಸೌಂದರ್ಯ ಸವಿಯಲು ಇಂತಹ ಪ್ರದೇಶಗಳನ್ನು ಅರಸುತ್ತಾ ಹೋಗುವುದು ಸಾಮಾನ್ಯ. ಇದೀಗ ಸುಳ್ಯದ ಜನತೆಗೂ ಇಂತಹ ಅವಕಾಶವನ್ನು ಸುಳ್ಯದ ಸ್ಥಳೀಯ ಆಡಳಿತ ಒದಗಿಸಿದೆ.

ದೂರವಾದ ಕೊರಗು:
ಸುಳ್ಯ ನಗರಕ್ಕೆ ಎಲ್ಲವೂ ಇದ್ದರೂ ಆರಾಮವಾಗಿ ಕುಳಿತು ವಿಶ್ರಾಂತಿ ಪಡೆಯಲು, ನಾಲ್ಕು ಹೆಜ್ಜೆ ನಡೆದಾಡಲು ಒಂದು ಒಳ್ಳೆಯ ಉದ್ಯಾನವನ ಇಲ್ಲ ಎಂಬ ಕೊರಗು ಹಲವು ವರ್ಷಗಳಿಂದ ಇಲ್ಲಿನ ಜನತೆಯನ್ನು ಕಾಡಿತ್ತು. ಹಲವು ವರ್ಷಗಳ ಯೋಚನೆ, ಯೋಜನೆಯ ಬಳಿಕ ಚೊಕ್ಕದಾದ ಉದ್ಯಾನವೊಂದು ಕುರುಂಜಿಗುಡ್ಡೆಯ ನೆತ್ತಿಯಲ್ಲಿ ತಲೆ ಎತ್ತಿದೆ.

ಸುಳ್ಯ ನಗರ ಪಂಚಾಯತ್‌ ವತಿಯಿಂದ ಸುಮಾರು 12 ಲಕ್ಷ ರೂ. ವೆಚ್ಚದಲ್ಲಿ ಉದ್ಯಾನ ರೂಪುಗೊಂಡಿದೆ. ಒಳಾಂಗಣ ಕ್ರೀಡಾಂಗಣದ ಮುಂಭಾಗದಲ್ಲಿ ಪಾರ್ಕ್‌ ನಿರ್ಮಿಸಲಾಗಿದೆ. ಮರ, ಗಿಡಗಳನ್ನು ನೆಟ್ಟು ಬೆಳೆಸಲಾಗಿದೆ.
ಹುಲ್ಲು ಹಾಸು, ಹಲವು ವಿಧದ ಗಿಡಗಳನ್ನು ಬೆಳೆಸಿ ಹಸುರು ಲೋಕ ಸೃಷ್ಟಿಸಲಾಗಿದೆ. ಪಾರ್ಕ್‌ನಲ್ಲಿ ಕುಳಿತುಕೊಳ್ಳಲು ಬೆಂಚ್‌ಗಳು, ನಡೆದಾಡಲು ಪಥ ಗಳನ್ನು ನಿರ್ಮಿಸಲಾಗಿದೆ. ರಕ್ಷಣಾ ಬೇಲಿಗಳನ್ನು ಅಳವಡಿಸಲಾಗಿದೆ.

ಪಾರ್ಕ್‌ನ ಮಧ್ಯೆ ಅಲ್ಲಲ್ಲಿ ಇಂಟರ್‌ ಲಾಕ್‌ ಅಳವಡಿಸಲಾಗಿದೆ. ಮೆಟ್ಟಿಲುಗಳನ್ನು ನಿರ್ಮಿಸಲಾಗಿದ್ದು, ಮಕ್ಕಳಿಗಾಗಿ ಪ್ರತ್ಯೇಕ ಪಾರ್ಕ್‌ ಮಾಡಲಾಗಿದೆ. ಇಲ್ಲಿ ಉಯ್ನಾಲೆ, ಜಾರುಬಂಡಿ, ತಿರುಗು ಬಂಡಿ ಮತ್ತಿತರ ಆಡುವ ವ್ಯವಸ್ಥೆಗಳನ್ನು ಒದಗಿಸಲಾಗಿದೆ.

Advertisement

ಆಗಬೇಕಿದೆ ಅಭಿವೃದ್ಧಿ
ಪಾರ್ಕ್‌ ಪೂರ್ಣಗೊಳ್ಳಲು ಇನ್ನೂ ಕೆಲವು ಕಾಮಗಾರಿಗಳು ಆಗಬೇಕಾಗಿದ್ದು, ಪಾರ್ಕ್‌ಗೆ ಸೋಲಾರ್‌ ದೀಪ, ಒಳಾಂಗಣ ಕ್ರೀಡಾಂಗಣದ ಕೆಳಭಾಗಲ್ಲಿ ವಾಕಿಂಗ್‌ ಪಾತ್‌ ನಿರ್ಮಾಣ, ಪಾರ್ಕ್‌ ಮುಂಭಾಗದಲ್ಲಿ ಕಮಾನು ನಿರ್ಮಾಣ ಮತ್ತಿತರ ಕೆಲವು ಕಾಮಗಾರಿಗಳು ಆಗಬೇಕಿದೆ.

ಒಳಾಂಗಣ ಕ್ರೀಡಾಂಗಣದ ಮುಂಭಾಗದಲ್ಲಿಯೂ ಉತ್ತಮ ಪಾರ್ಕ್‌ ನಿರ್ಮಾಣವಾಗಲಿದ್ದು, ಸುತ್ತಲೂ ಬೆಂಚ್‌ ನಿರ್ಮಿಸಿ, ಹುಲ್ಲು ಹಾಸು ಹಾಕಿ ಪಾರ್ಕ್‌ ಮಾಡಿ ಮಧ್ಯದಲ್ಲಿ ಒಂದು ಚಿಮ್ಮುವ ಕಾರಂಜಿ ಮಾಡುವ ಬಗ್ಗೆ ಯೋಚನೆ ಇದೆ ಎಂದು ಆಡಳಿತ ಹೇಳಿದೆ.

ಸಿಬಂದಿ ನಿಯೋಜನೆ
ಕುರುಂಜಿಗುಡ್ಡೆ ಪಾರ್ಕ್‌ ವಿರಾಮದ ವೇಳೆ ಯನ್ನು ಕಳೆಯಲು, ವಿಶ್ರಾಂತಿ ಪಡೆಯಲು ಸೂಕ್ತ ಸ್ಥಳ. ವಾಕಿಂಗ್‌ ಮಾಡುವವರಿಗೂ ಅನುಕೂಲವಾಗಲಿದೆ. ಕೆಲವು ಕೆಲಸಗಳು ಬಾಕಿ ಇದೆ. ಪಾರ್ಕ್‌ ಅನ್ನು ನಿರ್ವಹಣೆ ಮಾಡಲು ಸಿಬಂದಿ ನಿಯೋಜನೆ ಮಾಡಲಾಗುವುದು.
-ವಿನಯ ಕುಮಾರ್‌ ಕಂದಡ್ಕ,
ಅಧ್ಯಕ್ಷರು, ನಗರ ಪಂಚಾಯತ್‌ ಸುಳ್ಯ

ಅಭಿವೃದ್ಧಿ ಯೋಜನೆೆ
ಕುರುಂಜಿಗುಡ್ಡೆಯಲ್ಲಿ ಲಭ್ಯವಿರುವ ಸ್ಥಳವನ್ನು ಬಳಸಿ ಇನ್ನಷ್ಟು ಅಭಿವೃದ್ಧಿ ಕಾರ್ಯ ನಡೆಸಲು ಯೋಜನೆ ರೂಪಿಸಲಾಗುವುದು.
-ಶಿವಕುಮಾರ್‌,
ಇಂಜಿನಿಯರ್‌, ನಗರ ಪಂಚಾಯತ್‌ ಸುಳ್ಯ

 

Advertisement

Udayavani is now on Telegram. Click here to join our channel and stay updated with the latest news.

Next