Advertisement

ಕುಂಕುಮ ಕಿರಿಕಿರಿ 

02:42 PM Oct 14, 2017 | |

ಧಾರವಾಡದಿಂದ ಹತ್ತು ಕಿ.ಮೀ.ದೂರದಲ್ಲಿರುವ ಮನಗುಂಡಿ ಗ್ರಾಮದ ಕೆಂಚಮ್ಮನ ಹಣೆ ಮತ್ತು ಹಣೆಬರಹಕ್ಕೆ ಒಂದು ವರ್ಷದಿಂದ ಗರ ಬಡಿದಂತಿದೆ. ಮಂಗಳವಾರ, ಶುಕ್ರವಾರ ಸವದತ್ತಿ ಎಲ್ಲಮ್ಮನ ಹೆಸರಿನ ಮೇಲೆ ಜೋಗತಿಯಾಗಿ ಕೈಯಲ್ಲಿ ಹಡ್ಡಲಗಿ (ಚಿಕ್ಕ ಬಿದರಿನ ಬುಟ್ಟಿ) ಹಿಡಿದುಕೊಂಡು, ಹತ್ತೂ ಇಪ್ಪತ್ತೋ ಮನೆಗೆ ಜೋಗ್ಯಾಡಿಕೊಂಡು (ಧಾನ್ಯಭಿಕ್ಷೆ)ಬಂದ ಅಕ್ಕಿ, ಜೋಳದ ಹಿಟ್ಟಿನಲ್ಲೇ ಒಂದಿಷ್ಟು ಗಂಜಿ ಮಾಡಿ ಕುಡಿದು ಬದುಕುವ ಕೆಂಚಮ್ಮಳ ಬಗ್ಗೆ ಊರ ಜನರೆಲ್ಲಾ ಮಾತನಾಡೋದಕ್ಕೆ ಇರುವ ಏಕೈಕ ವಿಷಯ ಅಂದ್ರೆ, ಅವಳು ಹಣೆಗೆ ಹಚ್ಚುವ ದೊಡ್ಡ ಕುಂಕುಮದ ಬೊಟ್ಟು ಮಾತ್ರ. ಅದೊಂದು ಥರಾ ಪೂರ್ಣಚಂದ್ರನ ಸ್ವರೂಪದ್ದು.ಹೀಗಾಗಿ ಕೆಂಚಮ್ಮ ಅಂದ್ರೆ ಕುಂಕುಮ…, ಕುಂಕುಮ ಅಂದ್ರೆ ಕೆಂಚಮ್ಮ ಎನ್ನುವಂತಾಗಿದೆ.  

Advertisement

ಆದರೆ ಕೆಂಚಮ್ಮನಿಗೆ 87 ವರ್ಷ ಮುಗೀತಾ ಬಂದಿದೆ.  ಅವಳು ಈ ಪೈಕಿ 80 ವರ್ಷದಿಂದ ಸವದತ್ತಿ ಎಲ್ಲಮ್ಮನ ಜಾತ್ರೆಗೆ ಮತ್ತು ಗುಡ್ಡದ ಮೈಲಾರ ದೇವರ ಜಾತ್ರೆಗೆ ತಪ್ಪದೇ ಹೋಗಿದ್ದಾಳೆ. ಜಾತ್ರೆಯಲ್ಲಿ ಈ ವರೆಗೂ ಅವಳು ಕೊಂಡದ್ದು ಕುಂಕುಮ ಮತ್ತು ಭಂಡಾರವನ್ನಷ್ಟೇ. ನಾಲ್ಕೋ, ಐದೋ ಕೆ.ಜಿ.ಯಷ್ಟು ತರುತ್ತಿದ್ದ ಕುಂಕುಮವನ್ನಂತೂ ಊರಿನಲ್ಲಿರುವ ಎಲ್ಲರ ಮನೆಗೂ ಸಣ್ಣ ಸಣ್ಣ ಚೀಟಿಯಲ್ಲಿ ಕಟ್ಟಿ ಕೊಡುತ್ತಿದ್ದ ಅವಳ ಉದಾರ ಗುಣಕ್ಕೆ ಮುತ್ತೈದೆಯರು ಪರಾಕು ಹೇಳಿ, ಅದನ್ನು ಶ್ರದ್ಧೆಯಿಂದ ಹಣೆಗೆ ಇಟ್ಟುಕೊಂಡು, ಮನದಲ್ಲಿಯೇ ದೇವಿ ಸ್ವರೂಪಳಾದ ಎಲ್ಲಮ್ಮನನ್ನ ನೆನೆಯುತ್ತಿದ್ದರು.

ಓಣಿಯಲ್ಲಿ ಖಾಲಿ ಹಣೆ ಇಟ್ಟುಕೊಂಡು ಓಡಾಡುವ ಪ್ಯಾಶನ್‌ ಹುಡುಗಿಯರಿಗೆ, “ಏ ಫ್ಯಾಶನ್‌ ಮುಂಡೇದೇ…ಹಣಿಗೆ ಚಲೋತ್ನಾಗೆ ಕುಂಕಮಾ ಇಟಗೊ… ಇಲ್ಲಾ ಅಂದ್ರ ದೆವ್ವಾ ಬಡಕೊತಾವು…ಅಂತಾ ಕೆಂಚಮ್ಮ ತರಾಟೆ ತೆಗೆದುಕೊಳ್ಳೋದನ್ನ ನೋಡಿ ಕುಂಕುಮ ಹಚ್ಚದ ಹೆಣ್ಣು ಮಕ್ಕಳು ಅವಳ ಎದುರು ದಾಟುವಾಗ ತಲೆ ಕಳಗೆ ಹಾಕಿಕೊಂಡು ಹೋಗುತ್ತಿದ್ದರು. ಅರಿಶಿನ, ಕುಂಕುಮ ಅಂದ್ರೆ ಸೌಭಾಗ್ಯಇದ್ದಾಂಗೆ, ಇನ್ನಾದರೂ ನೆಟ್ಟಗೆ ಹಣಿಗೆ ಕುಂಕಮಾ ಹಚ್ಚಕೊಳಿ ಅಂತಾ ಬೋಧನೆ ಮಾಡುತ್ತಿದ್ದ ಕೆಂಚಮ್ಮಳಿಗೆ ಇತ್ತೀಚೆಗೆ ಯಾಕೋ ಗೊತ್ತಿಲ್ಲ,  ಹಣೆಗೆ ಕುಂಕುಮ ಇಡೋದಕ್ಕೆ ಮನಸ್ಸಾಗುತ್ತಿರಲಿಲ್ಲ. 

ಇದಕ್ಕೆ ಕಾರಣ ಕುಂಕುಮ ಹಚ್ಚಿದ ಹಣೆಯ ಭಾಗದಲ್ಲಿ ತುರಿಕೆ ಕಾಣಿಸಿಕೊಂಡು ತೀವ್ರ ಕಿರಿಕಿರಿಯಾಗಿತ್ತು. ಇದ್ಯಾವುದೋ ವಯಸ್ಸಾದವರ ಕಾಯಿಲೆಯೇ ಇರಬೇಕು ಅಂದುಕೊಂಡಿದ್ದ ಅವಳಿಗೆ, ನಕಲಿ ಕುಂಕುಮದ ನಿಜಸ್ವರೂಪ ಗೊತ್ತಾಗಿದ್ದು, ಹಣೆಯಲ್ಲಿ ಕುಂಕುಮವಿಟ್ಟ ಜಾಗ ನೋವಾಗಿ, ಮಾತ್ರೆ, ಮುಲಾಮು ಹಚ್ಚಿಕೊಂಡರೂ ಕಡಿಮೆಯಾಗದೇ, ಧಾರವಾಡದ ಜಿಲ್ಲಾಸ್ಪತ್ರೆಯ ವೈದ್ಯರು ಹಣೆಯಲ್ಲೇ ಸೂಜಿ ಇಟ್ಟು ಇಂಜಕ್ಷನ್‌ ಕೊಟ್ಟಾಗ. ಇದಾದ ಮೇಲೆ ಸಂತೆಯಲ್ಲಿ ಮೂಲೆಯಲ್ಲಿ ಕೂತು, ಅಡಿಕೆ ಎಲೆ ಜಗಿಯುತ್ತಾ ಕುಂಕುಮ ಮಾರುತ್ತಿದ್ದ ಚಂದ್ರಕ್ಕನ ಮೇಲೆ ಎಲ್ಲರ ಗುಮಾನಿ ತಿರುಗಿದೆ. 

 ಈ ಚೋಲೋ, ಕುಂಕುಮ ಕೊಡ್ತಿದ್ದಳು. ಏನೋ ಮಾಡ್ಯಾಳ ಮಾಟಗಾತಿ’ ಅನ್ನೋ ರೀತಿ ನೋಡೋಕೆ ಶುರುಮಾಡಿದ್ದಾರೆ.  ಈಕೆಗೆ ಕುಂಕುಮ, ಅರಿಷಿಣದ ಮಾರಾಟದಿಂದಲೇ ಬದುಕು. ಬೆರಕೆಯಾದದ್ದು ಆಕೆಗೂ ತಿಳಿದಿಲ್ಲ. ಹೀಗೆ ಬೆರಕೆ ಮಾಡಿ ಮಾರಿ ಬದುಕ ಬೇಕು ಅನ್ನೋ ಉದ್ದೇಶವೂ ಆಕೆಗಿಲ್ಲ. ಆದರೂ, ಆಕೆಯ ಮೇಲಿನ ನಂಬಿಕೆಯಿಂದ ಎಲ್ಲರೂ ಕೊಳ್ಳುತ್ತಿದ್ದರು. ಬೆರೆಕೆ ಶುರುವಾದ ಮೇಲೆ ಬರೀ ಕುಂಕುಮದ ಬಗೆಗೆ ಅಸಡ್ಡೆ ಬೆಳೆಯಲಿಲ್ಲ. ಚಂದ್ರಕ್ಕನ ವ್ಯವಹಾರದ ಮೇಲೆಯೇ ಗುಮಾನಿ ಎದ್ದಿದೆ. ಆದರೆ ಚಂದ್ರಕ್ಕ ಏನು ಮಾಡಿಯಾಳು? ಬದುಕಿನ ಸಂತೆಯಲ್ಲಿ ಯಾರು ಹೇಗೆ ಆಟವಾಡಿಸುತ್ತಾರೋ ಹಾಗೆ ಆಡುವುದು ಕರ್ಮ ಅಲ್ಲವೇ? 

Advertisement

ನಿಜ ಏನೆಂದರೆ, ಕುಂಕುಮದಿಂದ ತುರಿಕೆ ಉಂಟಾಗುವ ಕ್ರಿಯೆ, ಸಾರ್ವತ್ರಿಕವಾಗಿ ರಾಜ್ಯದ ಎಲ್ಲ ಕಡೆ ಹರಡಿದೆ. ಈವರೆಗೂ ದಶಕಗಳ ಕಾಲ ಮುತ್ತೈದೆಯರು ಅರಿಶಿನ ಕುಂಕುಮ ಇಟ್ಟುಕೊಂಡರೂ ಹಣೆಗೆ ಏನೂ ಆಗುತ್ತಿರಲಿಲ್ಲ. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಕುಂಕುಮ ಅಲರ್ಜಿ ಶುರುವಾಗಿದೆ. ಅದಕೆ ಕಾರಣ ಏನು? ದುಡ್ಡು ಮಾಡುವ ದಂಧೆ.  ಕುಂಕುಮ ಅಂದರೆ ನಂಬಿಕೆ. ಕುಂಕುಮ ಅಂದರೆ ನಮ್ಮ ಸಂಸ್ಕೃತಿ. ಆದರೆ ಇವರಿಗೆ ಕುಂಕುಮವೇ ಹಣ ಮಾಡುವ ಹಾದಿ. ಈಗ, ವಂಚಕರ ಜಾಲವೊಂದು ರಾಸಾಯನಿಕ ತುಂಬಿ ನಕಲಿ ಕುಂಕುಮವನ್ನು ಎಲ್ಲರ ಹಣೆಗೆ ಇಟ್ಟು ನಾಮಹಾಕುತ್ತಿದೆ.  

ಅದು ನೋಡಲು ಕೆಂಪು ಬಣ್ಣವಷ್ಟೇ. ಆದರೆ ಅಸಲಿ ಕುಂಕುಮವಲ್ಲ.  ಜಾತ್ರೆ, ಮಾರುಕಟ್ಟೆಯಲ್ಲಿ ಕೆಂಪು ಬಣ್ಣದ ಉತ್ಪನ್ನವನ್ನೇ ಕುಂಕುಮ ಎಂದು ಮಾರಾಟ ಮಾಡುವ ವ್ಯಾಪಾರಿಗಳು ಭರಪೂರ ಲಾಭ ಮಾಡಿಕೊಂಡು ಎದ್ದು ಹೋಗುತ್ತಾರೆ. ಆದರೆ ಸೌಭಾಗ್ಯದ ಸಂಕೇತ ಮತ್ತು ಸಂಸ್ಕೃತಿಯ ಪ್ರತಿಬಿಂಬವಾಗಿ ಶ್ರದ್ಧೆ ಮತ್ತು ಸಂಭ್ರಮದಿಂದ ಕುಂಕುಮ ಇಡುವ ಹೆಣ್ಣು ಮಕ್ಕಳು ಮಾತ್ರ ಇದರಿಂದ ಆಗುತ್ತಿರುವ ಅಡ್ಡ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ.

ಟಿಕಳಿ ಬಂತೋ 
ಮತ್ತೈದೆ ಹೆಣ್ಣು ಮಕ್ಕಳು, ಅದರಲ್ಲೂ ಹಿಂದೂ ಸಂಪ್ರದಾಯ ಅನುಸರಿಸುವ ಕುಟುಂಬಗಳಲ್ಲಿನ ಎಲ್ಲಾ ಹೆಣ್ಣು ಮಕ್ಕಳಿಗೂ ಇದೀಗ ಕುಂಕುಮಭಾಗ್ಯವೇ ಚರ್ಮದ ಅಲರ್ಜಿಗೆ ಕಾರಣವಾಗುತ್ತಿದೆ.  ಹಾನಿಕಾರಕ ರಾಸಾಯನಿಕಗಳು ಮಹಿಳೆಯರ ಮುಖದ ಮಂದಹಾಸವನ್ನೇ ಕಿತ್ತುಕೊಳ್ಳುತ್ತಿವೆ. ಈ ಸಮಸ್ಯೆ ಹೊಸದೇನಲ್ಲವಾದರೂ, ಕಳೆದ ಎರಡು ವರ್ಷಗಳಲ್ಲಿ ಹಣೆಯ ಭಾಗದಲ್ಲಿ ತೀವ್ರತರದ ಅಲರ್ಜಿ, ನೋವು ಅಷ್ಟೇ ಅಲ್ಲ, ಕೆಲವು ಮಹಿಳೆಯರ ಕಣ್ಣಿನ ಅನಾರೋಗ್ಯಕ್ಕೂ ರಾಸಾಯನಿಕ ಕುಂಕುಮ ಕಾರಣವಾಗುತ್ತಿದೆ.

ಈ ಆತಂಕಕಾರಿ ವಿಚಾರವನ್ನು ವೈದ್ಯರೂ ಮನಗಂಡಿದ್ದು, ಜಾತ್ರೆಗಳಲ್ಲಿ, ಬಣ್ಣದ ಅಂಗಡಿಗಳಲ್ಲಿ ಸಿಕ್ಕುವ ಕುಂಕುಮವನ್ನು ಹಚ್ಚಿಕೊಳ್ಳದಂತೆ ಗೃಹಿಣಿಯರಿಗೆ ಸಲಹೆ ನೀಡುತ್ತಿದ್ದಾರೆ. ಕರ್ನಾಟಕದಲ್ಲಿ ನಡೆಯುವ ದೊಡ್ಡ ದೊಡ್ಡ ಜಾತ್ರೆಗಳಲ್ಲಿ ಭಕ್ತಿಯಿಂದ ಕೊಳ್ಳುವ ಕುಂಕುಮ ಸಾಂಸ್ಕೃತಿಕ ಮತ್ತು ಧಾರ್ಮಿಕ ವಿಧಾನಗಳ ಭಾಗವಾಗಿದೆ. ಆದರೆ ಇದು ಸೃಷ್ಟಿಸುತ್ತಿರುವ ಈ ಆವಾಂತರಕ್ಕೆ ರೋಸಿ ಹೋಗಿರುವ ಮಹಿಳೆಯರು ಸಿದ್ದವಾಗಿ ಲಭಿಸುವ ಚುಕ್ಕೆ (ಟಿಕಳಿ)ಯನ್ನೇ ಹಣೆಗೆ ಹಚ್ಚಿಕೊಳ್ಳುತ್ತಿದ್ದಾರೆ. 

ಅದಕ್ಕೂ ಮಕೂರಿ ಸಲ್ಫೆಟ್‌ 
ಪೂನಾ,ಮುಂಬೈ ಸೇರಿದಂತೆ ಮಹಾರಾಷ್ಟ್ರ ಭಾಗದಿಂದ ಕರ್ನಾಟಕದ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ರಾಸಾಯನಿಕ ಕುಂಕುಮ, ಅಲ್ಲಿನ ಕೆಲವು ಕಾರ್ಖಾನೆಗಳಿಂದ ಹೊರ ಚೆಲ್ಲುವ ತ್ಯಾಜ್ಯದ ರೂಪದ ಮರ್ಕ್ನೂರಿ ಸಲ್ಪೇಟ್‌. ರಾಸಾಯನಿಕವಾಗಿ ಇದು ಮನುಷ್ಯ ಮಾತ್ರವಲ್ಲ, ಪರಿಸರಕ್ಕೂ ಮಾರಕವೇ ಆಗಿದೆ. ಹೀಗಾಗಿ ಅಗ್ಗಕ್ಕೆ ಸಿಕ್ಕುವ ಇಂತಹ ವಸ್ತುಗಳನ್ನು ಬಣ್ಣದೊಂದಿಗೆ ಸೇರಿಸಿ, ಅಥವಾ ಈ ಅಗ್ಗದ ಸಲ್ಪೇಟ್‌ಗೆ ಕೊಂಚ ಬಣ್ಣ ಸೇರಿಸಿ ಇದೀಗ ಕುಂಕುಮ ಎಂದು ಮಾರಾಟ ಮಾಡಲಾಗುತ್ತಿದೆ. 

ಗುಣವಾಗಲು ಬೇಕು 2 ವರ್ಷ 
ಕುಂಕುಮ ಅಲರ್ಜಿಯಿಂದ ಬಳಲುತ್ತಿರುವ ಹೆಣ್ಣು ಮಕ್ಕಳಿಗೆ ಇದು  ಪೂರ್ಣಗುಣಮುಖವಾಗಲು ಒಮ್ಮೊಮ್ಮೆ ಎರಡು ಮೂರು ವರ್ಷಗಳೇ ಬೇಕಾಗುತ್ತದೆ. ಚರ್ಮರೋಗ ತಜ್ಞರು ಹೇಳುವಂತೆ, ನಕಲಿ ಕುಂಕುಮದಲ್ಲಿ ಬೆರೆಸಿದ ರಾಸಾಯನಿಕಗಳು ಎಷ್ಟು ಹಾನಿಕಾರಕವಾಗಿರುತ್ತವೆ ಎಂದರೆ, ಅವು ಚರ್ಮದ ಏಳು ಪದರವನ್ನು ಸೇರಿಕೊಂಡು ಅಲರ್ಜಿಗೆ ಕಾರಣವಾಗುತ್ತವೆ. ಹೀಗಾಗಿ ಅನಿವಾರ್ಯವಾಗಿ ಕುಂಕುಮ ಇಡದೇ ಇರುವ ಸ್ಥಿತಿ ಕೆಲವು ಹೆಣ್ಣುಮಕ್ಕಳಿಗೆ ಉಂಟಾಗಿದೆ. ಇದಕ್ಕೆ ವೈದ್ಯರು ಮಾತ್ರೆ, ಮುಲಾಮು ಮತ್ತು ಕೊನೆಗೆ ನೇರವಾಗಿ ಇಂಜಕ್ಷನ್‌ ನೀಡಿ ಅಲರ್ಜಿಯನ್ನು ಗುಣಪಡಿಸಬೇಕಾಗುತ್ತದೆ. 

ಕುಂಕುಮ ತಯಾರು ಮಾಡೋದು ಹೇಗೆ?
ಶುದ್ಧವಾದ ಅರಿಷಿನದ ಬೇರುಗಳನ್ನು ಪುಡಿ ಮಾಡಿ, ಅದಕ್ಕೆ ಲಿಂಬೆ ಹಣ್ಣಿನ ರಸ ಮತ್ತು ತುಪ್ಪ ಹಾಕಿ ಒಣಗಿಸಿದರೆ ಶುದ್ಧ ಕುಂಕುಮ ಸಿದ್ದಗೊಳ್ಳುತ್ತದೆ. ಇದನ್ನು ಸಿದ್ದಪಡಿಸುವಾಗ ಕೆಲವರು ಧಾರ್ಮಿಕ ವಿಧಾನಗಳನ್ನು ಅನುಸರಿಸುವುದು ಉಂಟು. ಪ್ರಾತಃಕಾಲ, ಬ್ರಾಹ್ಮಿ ಮುಹೂರ್ತ, ಗಾಯತ್ರಿ ಮಂತ್ರ ಪಠಣ ಸೇರಿದಂತೆ ಕೆಲವು ಧಾರ್ಮಿಕ ಅಂಶಗಳು ಕುಂಕುಮ ತಯಾರಿಕೆಯಲ್ಲಿ ಸೇರಿಕೊಂಡಿವೆ. ಇನ್ನು ಕೆಲವು ಧಾನ್ಯಗಳ ಹಿಟ್ಟನ್ನು ಕೂಡ ಬಳಸಿಕೊಂಡ ಮಾಡಿದ ಕುಂಕುಮದಿಂದಲೂ ಅಲರ್ಜಿಯಾಗುವುದಿಲ್ಲ.

ನಕಲಿ ಕುಂಕುಮ ಪತ್ತೆ ಹೇಗೆ ? 
ಕುಂಕುಮದಲ್ಲಿ ಅಸಲಿ, ನಕಲಿ ಪತ್ತೆ ಮಾಡುವುದು ತುಂಬಾ ಸುಲಭ. ಸಣ್ಣ ಬಿಳಿ ಕಾಗದದ ಮೇಲೆ ಕುಂಕುಮ ಹಾಕಿ ಕೊಂಚ ಹೊತ್ತು ಉಜ್ಜಿದರೆ ಅದು ಹಳದಿ ಬಣ್ಣಕ್ಕೆ ತಿರುಗಬೇಕು. ಅಲ್ಲದೇ ಕಾಗದಕ್ಕೆ ತುಪ್ಪದ ಅಂಶವು ಅಂಡಿಕೊಳ್ಳುವುದು ಗೊತ್ತಾಗುತ್ತದೆ. ಇದು ನಿಜವಾದ ಕುಂಕುಮ.ಇದರಲ್ಲಿ ಯಾವುದೇ ರೀತಿಯ ರಾಸಾಯನಿಕ ಸೇರಿರುವುದಿಲ್ಲ. 

ಇಂಥ ಯಾವ  ಫ‌ಲಿತಾಂಶವೂ ಕಾಣದೇ ಹೋದರೆ ಅದು ನಕಲಿ ಕುಂಕುಮವೇ ಆಗಿರುತ್ತದೆ. ಸಾಮಾನ್ಯವಾಗಿ ನಕಲಿ ಕುಂಕುಮವನ್ನು ಹಣೆ ಅಥವಾ ಕೈಗೆ ಅಂಟಿಕೊಂಡರೆ ಮೂರು ನಾಲ್ಕು ದಿನಗಳ ಕಾಲ ಸ್ವತ್ಛವಾಗುವುದೇ ಇಲ್ಲ. ಎಷ್ಟೇ ತೊಳೆದರೂ ಬಣ್ಣದ ಅಂಶ ಚರ್ಮಕ್ಕೆ ಅಂಟಿಕೊಂಡೇ ಇದ್ದು, ಅಲರ್ಜಿಗೆ ಕಾರಣವಾಗುತ್ತದೆ.ಇದನ್ನು ಸುಲಭವಾಗಿ ಪತ್ತೆ ಮಾಡಬಹುದು. 

ಬಣ್ಣಗಳೆಲ್ಲವೂ ರಾಸಾಯನಿಕವೇ 
ದೇವರ ಹಣೆಗೆ, ಗುರುಗಳ ಪಾದಕ್ಕೆ, ಸ್ವತಃ ಭಕ್ತಿಗಾಗಿ ಮತ್ತು ಸಂಸ್ಕೃತಿ ಸಂಕೇತಕ್ಕಾಗಿ ಕುಂಕುಮ ಬಳಕೆಯಾಗುತ್ತ ಬಂದಿದೆ. ಆದರೆ ಇಂದು ಬರೀ ಕುಂಕುಮ ಮಾತ್ರವಲ್ಲ, ಕೆಲವು ದೇವಸ್ಥಾನಗಳಲ್ಲಿ ಗುಲಾಬಿ ಬಣ್ಣವನ್ನೂ, ಹಸಿರು ಬಣ್ಣವನ್ನು ಕೂಡ ಬಳಕೆ ಮಾಡುತ್ತಾರೆ. ಸದ್ದಿಲ್ಲದೇ ಇವು ಪೂಜಾಬುಟ್ಟಿ ಸೇರಿ ಮನೆಗೆ ಬಂದು ಬಿಡುತ್ತವೆ.

ಕಂಕುಮದಲ್ಲಿ ಮಕ್ಯುರಿ ಸಲ್ಫೆಟ್‌ ಇದ್ದು, ಚರ್ಮದ ರೋಗಕ್ಕೆ ಕಾರಣವಾದರೆ, ನೇರಳೆ ಬಣ್ಣದಲ್ಲಿ ಕ್ರೋಮಿಯಮ್‌ ಅಯೋಡೈಡ್‌, ಕಪ್ಪು ಬಣ್ಣದಲ್ಲಿ ಸೀಸವಿದ್ದು, ಇದು ಕಿಡ್ನಿ ವೈಫಲ್ಯಕ್ಕೆ ಕಾರಣವಾಗುತ್ತದೆ. ಹಸಿರು ಬಣ್ಣದಲ್ಲಿ ಸಲ್ಫೆಟ್‌ ಇದ್ದು, ದೃಷ್ಟಿದೋಷಕ್ಕೆ ಕಾರಣವಾಗುತ್ತಿದೆ. ಬೆಳ್ಳಿ ಬಣ್ಣದಲ್ಲಿ ಅಲ್ಯೂಮಿನಿಯಂ ಸೇರುತ್ತಿದ್ದು ಚರ್ಮ ಮತ್ತು ಮುಖದ ಬಾವು ಬರುವಿಕೆಗೆ ಕಾರಣವಾಗುತ್ತದೆ ಎಂದು ವೈದ್ಯರು ಆತಂಕವ್ಯಕ್ತ ಪಡಿಸುತ್ತಿದ್ದಾರೆ.

ಇನ್ನು ಮೈಲಾರ ದೇವರ ಸಂಕೇತವಾದ ಭಂಡಾರ ಸ್ವರೂಪದ ಅರಿಶಿನಕ್ಕೆ ಬದಲು ಹಳದಿ ಬಣ್ಣವನ್ನೇ ಪೂಜೆಗೆ ಮತ್ತು ಹಣೆಗೆ ಹಚ್ಚಲು ಬಳಸುತ್ತಿದ್ದು ಅದು ಕೂಡ ಕೆಲವರಲ್ಲಿ ಚರ್ಮದ ಅಲರ್ಜಿಗೆ ಕಾರಣವಾಗುತ್ತಿದೆ. ಹೀಗಾಗಿ ಕುಂಕುಮ ಮಾತ್ರವಲ್ಲ, ಇತರ ಎಲ್ಲಾ ಬಣ್ಣಗಳು ಕೂಡ ರಾಸಾಯನಿಕಯುಕ್ತವಾಗಿದ್ದು,ಜನರಿಗೆ ಮಾತ್ರವಲ್ಲ, ಪರಿಸರಕ್ಕೂ ಹಾನಿಯನ್ನುಂಟು ಮಾಡುತ್ತಿವೆ. 

ಕಠಿಣ ಕಾನೂನು ಬೇಕು 
ಕಳೆದ ಎರಡು ವರ್ಷಗಳಿಂದ ಕುಂಕುಮದ ಅಲರ್ಜಿಯಿಂದ ಬಳಲುವ ಮಹಿಳೆಯರ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದೆ. ನಾವು ಚಿಕಿತ್ಸೆ ನೀಡುವುದರ ಜೊತೆಗೆ ರಾಸಾಯನಿಕ ಮಿಶ್ರಿತ ನಕಲಿ ಕುಂಕುಮದ ಹಾವಳಿ ಬಗ್ಗೆ ಮಹಿಳೆಯರಿಗೆ ತಿಳುವಳಿಕೆ ನೀಡುತ್ತಿದ್ದೇವೆ.ಮಾತ್ರೆ, ಮುಲಾಮು ಮೀರಿ ಇಂಜಕ್ಷನ್‌ ವರೆಗೂ ಅಲರ್ಜಿ ಬೆಳೆಯುತ್ತಿದೆ.ಇದರಿಂದ ಮಹಿಳೆಯರು ತುಂಬಾ ಕಿರಿಕಿರಿ ಅನುಭವಿಸುತ್ತಿದ್ದಾರೆ. ರಾಸಾಯನಿಕ ಕುಂಕುಮ ಮಾರಾಟ ನಿಷೇಧಕ್ಕೆ ಕಠಿಣ ಕ್ರಮ ಜಾರಿಯಾದರೆ ಉತ್ತಮ ಎನ್ನುತ್ತಾರೆ ಖ್ಯಾತ ಚರ್ಮರೋಗ ತಜ್ಞರಾದ ಡಾ|ರಾಜೇಂದ್ರ ದೊಡಮನಿ. 

* ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next