Advertisement

ಮನೆ ಕಟ್ಟಲು ಲೈಸೆನ್ಸ್‌ ನೀಡುವ ಇನ್ನೊಂದು ಸಂಸ್ಥೆ ಇದೆಯೇ?

02:10 AM Jun 01, 2018 | Karthik A |

ಕುಂದಾಪುರ: ಪುರಸಭೆ ಗಮನಕ್ಕೆ ಬಾರದೇ ಮುಖ್ಯಾಧಿಕಾರಿ ಸಹಿ ಹಾಗೂ ಲೋಗೋ ಇರುವಂತಹ ಅನುಮತಿ ಪತ್ರವನ್ನು ಒಬ್ಬರಿಗೆ ಮನೆ ಕಟ್ಟಲು ನೀಡಲಾಗಿದ್ದು, ಹಾಗಾದರೆ ಮನೆ ಕಟ್ಟಲು ಲೈಸೆನ್ಸ್‌ ನೀಡುವ ಇನ್ನೊಂದು ಸಂಸ್ಥೆ ಇದೆಯೇ ಎಂದು ಗುರುವಾರ ನಡೆದ ಕುಂದಾಪುರ ಪುರಸಭೆಯ ಸಾಮಾನ್ಯ ಸಭೆಯಲ್ಲಿ  ಸದಸ್ಯೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.

Advertisement

ಕುಂದಾಪುರ ಪುರಸಭಾಧ್ಯಕ್ಷೆ ವಸಂತಿ ಮೋಹನ್‌ ಸಾರಂಗ ಅಧ್ಯಕ್ಷತೆಯಲ್ಲಿ ಜರಗಿದ ಸಾಮಾನ್ಯ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಔಈಸಿದ ಪುರಸಭಾ ಸದಸ್ಯೆ ಗುಣರತ್ನಾ ಅವರು, ಪುರಸಭೆಯ ವ್ಯಾಪ್ತಿಯಲ್ಲಿ ಮನೆ ಕಟ್ಟಲು ಅನುಮತಿ ನೀಡುವುದು ಪುರಸಭೆಯ ಆಡಳಿತದ ಜವಾಬ್ದಾರಿಯಾಗಿದ್ದು, ಆದರೆ ಇಲ್ಲಿ ಅವರ ಹೆಸರಲ್ಲಿ ಜಾಗವಿಲ್ಲದಿದ್ದರೂ, ಮನೆ ಕಟ್ಟಲು ಅನುಮತಿ ನೀಡಲಾಗಿದೆ. ಇಂತಹದ್ದೆ ಪ್ರಕರಣವೊಂದು ತಮ್ಮ ವಾರ್ಡ್‌ ವ್ಯಾಪ್ತಿಯಲ್ಲಿದ್ದು, ಆದರೆ ಅವರಿಗೆ ಕಾನೂನು ಪ್ರಕಾರ ಲೈಸೆನ್ಸ್‌ ನೀಡಲಾಗಿಲ್ಲ. ಆದರೆ ಈಗ ಮತ್ತೂಂದು ಪ್ರಕರಣದಲ್ಲಿ ನೀಡಲಾಗಿದೆ. ಅದರಲ್ಲಿ ಮುಖ್ಯಾಧಿಕಾರಿ ಸಹಿ ಕೂಡ ಇದೆ ಎಂದು ತಿಳಿಸಿದರು. ಈ ವಿಷಯದ ಕುರಿತಂತೆ ಮಾತನಾಡಿದ ಮುಖ್ಯಾಧಿಕಾರಿ ವಾಣಿ ಬಿ. ಆಳ್ವ ಅವರು, ಈ ಬಗ್ಗೆ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎನ್ನುವ ಭರವಸೆ ನೀಡಿದರು.

ಸಂಚಾರ ಸಮಸ್ಯೆ ಪ್ರಸ್ತಾಪ
ಸಭೆಯಲ್ಲಿ ಹಾಜರಿದ್ದ ಸಂಚಾರಿ ಪೊಲೀಸ್‌ ASI ಸುದರ್ಶನ್‌ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ಪಾರ್ಕಿಂಗ್‌ ಸ್ಥಳಾವಕಾಶ ಕಡಿಮೆಯಿದೆ ಎಂದಾಗ, ಮಧ್ಯಪ್ರವೇಶಿಸಿದ ಸದಸ್ಯರು, ಎಕ್ಸ್‌ಪ್ರೆಸ್‌ ಬಸ್‌ಗಳನ್ನು ಒಳಗೆ ಬಿಡದೆ, ಕೇವಲ ಸ್ಥಳೀಯ ಬಸ್‌ಗಳನ್ನು ಮಾತ್ರ ಬಿಡಬೇಕು. ಸರಕಾರಿ ಬಸ್‌ ಗಳನ್ನು ಕೂಡ ಖಾಸಗಿ ಬಸ್‌ ನಿಲ್ದಾಣಕ್ಕೆ ಬಾರದಂತೆ ತಡೆಯಬೇಕು ಎಂದಾಗ ಮಾತನಾಡಿದ ಮುಖ್ಯಾಧಿಕಾರಿ ಮಲ್ಟಿ ಪರ್ಪಸ್‌ ವಾಹನ ನಿಲ್ದಾಣಕ್ಕೆ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ಎಂಜಿನಿಯರ್‌ ವಿರುದ್ಧ ಆಕ್ರೋಶ
ಪುರಸಭೆಯ ಮುಖ್ಯ ಎಂಜಿನಿಯರ್‌ ಕಾರ್ಯವೈಖರಿ ಕುರಿತು ಹೆಚ್ಚಿನೆಲ್ಲ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ಪುರಸಭಾ ಉಪಾಧ್ಯಕ್ಷ ರಾಜೇಶ್‌ ಕಾವೇರಿ, ಸ್ಥಾಯಿ ಸಮಿತಿ ಅಧ್ಯಕ್ಷ ವಿಠಲ ಕುಂದರ್‌ ಉಪಸ್ಥಿತರಿದ್ದರು.

ಸಭೆ ನಡೆಸಬಹುದೇ?
ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಮುಗಿದಿದ್ದರೂ, ವಿಧಾನ ಪರಿಷತ್‌ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಿದ್ದಾಗ ಸಾಮಾನ್ಯ ಸಭೆ ನಡೆಸಬಹುದೇ ಎಂದು ಸದಸ್ಯ ಚಂದ್ರಶೇಖರ ಕೋಡಿ ಪ್ರಶ್ನಿಸಿದರು. ಇದಕ್ಕುತ್ತರಿಸಿದ ಮುಖ್ಯಾಧಿಕಾರಿ ಈ ಕುರಿತಂತೆ ಡಿಸಿಯವರೊಂದಿಗೆ ಸಲಹೆ ಕೇಳಿದ್ದು, ಮಳೆಗಾಲದ ಪೂರ್ವ ಸಿದ್ಧತೆ ಕುರಿತಂತೆ ಸಭೆ ನಡೆಸಿ, ಕ್ರಮಕೈಗೊಳ್ಳಬಹುದೆಂದು ತಿಳಿಸಿದ್ದಾರೆ ಎಂದರು.

Advertisement

ಯುಜಿಡಿ ಚರ್ಚೆಗೆ ವಿಶೇಷ ಸಭೆ
ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ ಶೇ. 75ರಷ್ಟು ಪೂರ್ಣಗೊಂಡಿದ್ದು, ಪಾರಿಜಾತ ಸರ್ಕಲ್‌ನಿಂದ ಚರ್ಚ್‌ ರಸ್ತೆ, ಶಾಸ್ತ್ರಿ ಸರ್ಕಲ್‌ ಬಳಿಯ ಮುಖ್ಯ ರಸ್ತೆಯಲ್ಲಿ ಕಾಮಗಾರಿ ನಡೆಸಲು ಬಾಕಿ ಇದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಪ್ರತಿಕ್ರಿಯಿಸಿದ ಸದಸ್ಯರು 5 ವೆಟ್‌ ವೆಲ್‌, 1 SDP ಕಾಮಗಾರಿ ಆರಂಭವೇ ಆಗಿಲ್ಲ ಎಂದಾಗ ಈ ಬಗ್ಗೆ ಜೂ. 15ರ ಅನಂತರ ಸಭೆ ಕರೆಯಲಾಗುವುದು ಎಂದು ಮುಖ್ಯಾಧಿಕಾರಿ ತಿಳಿಸಿದರು.

ಇಷ್ಟೊಂದು ಪುಸ್ತಕಗಳು ಯಾಕೆ?
ಪುರಸಭೆಯ ಸುಮಾರು 95 ಸಾವಿರ ರೂ. ಅನುದಾನದಿಂದ ಕಾನೂನು ಮಾಹಿತಿ ಸಹಿತ ಪೊಲೀಸ್‌ ಕಾಯ್ದೆಯಂತಹ ಪುಸ್ತಕಗಳನ್ನು ಖರೀದಿಸಿದ್ದು, ಆದರೆ ಅದಕ್ಕೆ ಯಾವುದೇ ಟೆಂಡರ್‌, ಕೊಟೇಶನ್‌ ಕರೆದಿಲ್ಲ ಎಂದು ಸದಸ್ಯೆ ಪುಷ್ಪಾ ಶೇಟ್‌ ಪ್ರಸ್ತಾವಿಸಿದರು. ಪುಸ್ತಕಗಳು ಇಲ್ಲಿನ ಅಧಿಕಾರಿಗಳಿಗೆ, ಸದಸ್ಯರಿಗೆ ಅನುಕೂಲವಾಗಲಿದೆ ಎಂದು ಮುಖ್ಯಾಧಿಕಾರಿ ಸ್ಪಷ್ಟನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next