Advertisement

ಹದಗೆಟ್ಟು ಹೋಗಿದೆ ಬರೆಕಟ್ಟು ರಸ್ತೆ

12:37 PM Oct 21, 2022 | Team Udayavani |

ಕುಂದಾಪುರ: ಪುರಸಭೆ ವ್ಯಾಪ್ತಿಯ ಬರೆಕಟ್ಟು ರಸ್ತೆಯಿಂದ ರಂಗನಹಿತ್ಲು ರಸ್ತೆಯವರೆಗೆ ಮಳೆಗಾಲದಲ್ಲಿ ಎಕರೆಗಟ್ಟಲೆ ಜಾಗ ಮಣ್ಣು ತುಂಬಿಸುವ ಪರಿಣಾಮ ರಸ್ತೆಯೂ ಹೋಗಿದೆ. ಸ್ಥಳೀಯವಾಗಿಯೂ ಭೂಕುಸಿತದ ಆತಂಕ ಉಂಟಾಗಿದೆ.

Advertisement

ಕಳಿ ಜಾಗ

ನದಿ ಬದಿಯ ಹಸಿಮಣ್ಣಿನಂತಿರುವ ಕಳಿ ಜಾಗ ಈ ಭಾಗದಲ್ಲಿದೆ. ಇಲ್ಲಿ ಸಣ್ಣದಾದ ಚತುಶ್ಚಕ್ರ ವಾಹನ ಹೋಗುವಷ್ಟರ ಮಟ್ಟಿಗೆ ರಸ್ತೆಯೊಂದನ್ನು ನಿರ್ಮಿಸಲಾಗಿದೆ. ಈ ರಸ್ತೆಗೆ ಮಣ್ಣು ಹಾಕುವ ಮೂಲಕ ಅಗಲಗೊಳಿಸುವ ಪ್ರಯತ್ನ ಖಾಸಗಿಯಾಗಿ ನಡೆಯುತ್ತಿದೆ. ಇದಕ್ಕೆ ಪುರಸಭೆಯಿಂದಲಾಗಲೀ, ಕಂದಾಯ ಇಲಾಖೆಯಿಂದಲಾಗಲೀ ಅನುಮತಿ ಪಡೆದಿಲ್ಲ. ಹೀಗೆ ಮಣ್ಣು ತುಂಬಿಸುವ ಕುರಿತು ಸ್ಥಳೀಯರಿಗೆ ಆತಂಕವೂ ಇದೆ. ಇದು ಭೂಕುಸಿತದಂತಹ ಅಪಾಯಕ್ಕೆ ಆಹ್ವಾನವಾದರೆ ಎಂದು.

ರಸ್ತೆ ಹಾಳು

ಸಣ್ಣ ಚತುಶ್ಚಕ್ರ ವಾಹನ ಹೋಗಲು ಮಾಡಿದ ರಸ್ತೆಯಲ್ಲಿ 3 ಯುನಿಟ್‌ ಸಾಮರ್ಥ್ಯದ ದೊಡ್ಡ ಲಾರಿಗಳು ಮಣ್ಣಿನ ಲೋಡು ಹೊತ್ತು ಹೋಗುತ್ತಿತ್ತು. ಇದರಿಂದಾಗಿ ರಸ್ತೆ ಕುಲಗೆಟ್ಟು ಹೋಗಿದೆ. ದೊಡ್ಡ ದೊಡ್ಡ ಗಾತ್ರದ ಗುಂಡಿಗಳು ಬಿದ್ದಿವೆ. ಸಣ್ಣಪುಟ್ಟ ವಾಹನಗಳು ಸಂಚಾರ ಮಾಡದ ಸ್ಥಿತಿ ಬಂದಿದೆ. ಒಂದು ಅಂದಾಜಿನ ಪ್ರಕಾರ ಈ ರಸ್ತೆಯ ದುರಸ್ತಿಗೆ ಸುಮಾರು 30 ಲಕ್ಷ ರೂ. ಬೃಹತ್‌ ಮೊತ್ತವೇ ಬೇಕಾದೀತು. ಪುರಸಭೆಯಂತಹ ಸಣ್ಣ ಅನುದಾನದ ಆಡಳಿತ ಒಂದು ವಾರ್ಡ್‌ಗೇ 10-15 ಲಕ್ಷ ರೂ. ಅನುದಾನ ದೊರೆಯುವಾಗ ಇಷ್ಟು ದೊಡ್ಡ ಮೊತ್ತ ಹಾಕಿ ದುರಸ್ತಿ ಮಾಡುವಷ್ಟರ ಮಟ್ಟಿಗೆ ಅನುದಾನ ದೊರೆಯುವುದು ಕಷ್ಟದ ಮಾತೇ ಸರಿ. ಇದರಿಂದಾಗಿ ಜನರಿಗೆ ನೆಮ್ಮದಿ ಹಾಳಾಗಿದೆ. ಇದ್ದ ರಸ್ತೆಯೂ ಹೋಯಿತು ಮಣ್ಣಿನ ಲಾರಿಯ ದೆಸೆಯಿಂದ ಎಂದು ಶಪಿಸುತ್ತಿದ್ದಾರೆ.

Advertisement

ಮನೆಗೂ ಹಾನಿ

ಮಣ್ಣಿನ ಲಾರಿಗಳ ಓಡಾಟದಿಂದ ಹೊಂಡ ಗುಂಡಿಯ ರಸ್ತೆಯಾಗಿ ಮಾರ್ಪಾಡಾಗಿದೆ. ಅಷ್ಟಲ್ಲದೆ ಇಲ್ಲಿ ಕಾಂಕ್ರಿಟ್‌ ರಸ್ತೆಯ ಪಕ್ಕದಲ್ಲಿ ಎತ್ತರ ತಗ್ಗು ಸರಿಪಡಿಸಲು ವೆಟ್‌ಮಿಕ್ಸ್‌, ಜಲ್ಲಿಹುಡಿ ಹಾಕಲಾಗಿತ್ತು. ಲಾರಿಗಳು ಹೋಗುವ ಭರದಲ್ಲಿ ಅವುಗಳ ಚಕ್ರಕ್ಕೆ ಸಣ್ಣ ಜಲ್ಲಿಕಲ್ಲುಗಳು ಸಿಕ್ಕಿ ಅದು ಪಕ್ಕದ ಮನೆಯ ಗಾಜಿನ ಕಿಟಕಿಗಳಿಗೆ ತಾಗಿ ಅವೂ ಹಾನಿಗೀಡಾಗಿವೆ.

ದೂರು

ಕೃಷಿಭೂಮಿಯನ್ನು ಅನಧಿಕೃತವಾಗಿ ಮಣ್ಣು ಹಾಕಿ ತುಂಬಿಸುತ್ತಿರುವ ಕಾರಣ ಪುರಸಭೆ ಜಾಗದ ಮಾಲಕರಿಗೆ ನೋಟಿಸ್‌ ಮಾಡಿದೆ. ರಸ್ತೆ ಹಾನಿ ಮಾಡಿದ ಬಾಬ್ತು ನಷ್ಟ ಪರಿಹಾರ ಒದಗಿಸುವಂತೆ ಸೂಚಿಸಿದೆ. ಅನಧಿಕೃತವಾಗಿ ಕೃಷಿಭೂಮಿ ತುಂಬಿಸುತ್ತಿರುವ ಕಾರಣ ಕಂದಾಯ ಇಲಾಖೆಗೆ, ಸಹಾಯಕ ಕಮಿಷನರ್‌ ಅವರಿಗೆ ದೂರು ನೀಡಿದೆ. ಯಾವುದೇ ಟರ್ಪಾಲು ಇತ್ಯಾದಿ ಹಾಕದೇ ಮಣ್ಣು ಸಾಗಾಟ ಮಾಡಿದ ಕಾರಣ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯದ ಮಟ್ಟಿಗೆ ಮಣ್ಣು ಸಾಗಾಟ ನಿಂತಿದೆ. ರಸ್ತೆ ಹಾಳಾಗಿದೆ. ದುರಸ್ತಿ ಯಾವಾಗ ಗೊತ್ತಿಲ್ಲ.

25 ಮನೆಗಳಿಗೆ ಅಗತ್ಯ

ಕುಂದೇಶ್ವರ ದೇವಸ್ಥಾನದ ಹಿಂದಿನ ಈ ರಸ್ತೆ ದೊಡ್ಡ ಸಂಪರ್ಕ ರಸ್ತೆ. ಬರೆಕಟ್ಟು ತೋಡಿನ ಮೂಲಕ ಹೋದರೆ ಚರ್ಚ್‌ ರಸ್ತೆಗೆ ಸಂಪರ್ಕವಾಗುತ್ತದೆ. ಭಂಡಾರ್‌ ಕಾರ್ಸ್‌ ಕಾಲೇಜು ಕಡೆಗೆ ಹೋಗುತ್ತದೆ. ವಿಟ್ಠಲವಾಡಿಗೆ ಹೋಗಬಹುದು. ಅಂಬೇಡ್ಕರ್‌ ಕಾಲನಿಯನ್ನು ಸಂಪರ್ಕಿಸುತ್ತದೆ. ಚಟ್ಲಿಕೆರೆ ಸಮೀಪದ ಬರೆಕಟ್ಟು ಬಯಲು ರಸ್ತೆ ಹಾಳಾದರೆ ಸಮೀಪದ ಸುಮಾರು 25 ಮನೆಗಳಿಗೆ ಸಂಪರ್ಕ ಕಡಿತವಾಗಲಿದೆ. ಈ ರಸ್ತೆ ವಾರ್ಡ್‌ ವಿಂಗಡಣೆ ಬಳಿಕ ಮಂಗಳೂರು ಹೆಂಚು ಕಾರ್ಖಾನೆ ವಾರ್ಡ್‌ಗೆ ಸೇರುತ್ತದೆ.

ನೋಟಿಸ್‌ ನೀಡಲಾಗಿದೆ: ಮಣ್ಣು ಸಾಗಾಟ ಮಾಡದಂತೆ, ರಸ್ತೆಗೆ ಹಾನಿ ಮಾಡದಂತೆ ಪುರಸಭೆ ವತಿಯಿಂದ ನೋಟಿಸ್‌ ನೀಡಲಾಗಿದೆ. ಕಂದಾಯ ಇಲಾಖೆಗೂ ದೂರು ನೀಡಲಾಗಿದೆ. ಪ್ರಸ್ತುತ ರಸ್ತೆ ಹಾಳಾಗಿದ್ದು ಮಣ್ಣು ಸಾಗಾಟ ಸ್ಥಗಿತಗೊಂಡಿದೆ. –ಗೋಪಾಲಕೃಷ್ಣ ಶೆಟ್ಟಿ ಮುಖ್ಯಾಧಿಕಾರಿ, ಪುರಸಭೆ ಕುಂದಾಪುರ

ಸ್ಥಗಿತವಾಗಿದೆ: ಮಣ್ಣು ಸಾಗಾಟ ಈಗ ನಡೆಯುತ್ತಿಲ್ಲ. ಸ್ಥಳೀಯರಿಂದ ದೂರು ಬಂದ ತತ್‌ಕ್ಷಣ ಇದರ ವಿರುದ್ಧ ಪುರಸಭೆಯಿಂದ ಕ್ರಮ ಕೈಗೊಳ್ಳಲಾಗಿದೆ. ರಸ್ತೆ ಹಾಳಾಗಿದ್ದು ಅವರಿಂದಲೇ ದುರಸ್ತಿ ಮಾಡಲು ದಂಡ ವಸೂಲಿಗೆ ನೋಟಿಸ್‌ ನೀಡಲಾಗಿದೆ. –ಶ್ವೇತಾ ಸಂತೋಷ್‌ ಸದಸ್ಯರು, ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next