Advertisement

Kundapura: ಗಾಂಧಿ ಮೈದಾನದಲ್ಲಿ ಸಮಸ್ಯೆಗಳದ್ದೇ ಆಟ!

01:26 PM Sep 19, 2024 | Team Udayavani |

ಕುಂದಾಪುರ: ತಾಲೂಕು ಕೇಂದ್ರದಲ್ಲಿ ಸಮರ್ಪಕವಾಗಿ ಇರುವುದು ಎರಡೇ ಮೈದಾನಗಳು. ಒಂದು ಗಾಂಧಿ ಮೈದಾನ, ಇನ್ನೊಂದು ನೆಹರೂ ಮೈದಾನ. ಗಾಂಧಿ ಮೈದಾನ ಯುವನಸೇವಾ ಮತ್ತು ಕ್ರೀಡಾ ಇಲಾಖೆ ಆಧೀನದಲ್ಲಿದೆ. ಇನ್ನು ನೆಹರೂ ಮೈದಾನದ ಅವಸ್ಥೆ ಕೇಳುವುದೇ ಬೇಡ. ಏಕೆಂದರೆ ಅತ್ತ ಪುರಸಭೆಗೂ ಹಸ್ತಾಂತರವಾಗಲಿಲ್ಲ. ಇತ್ತ ಕಂದಾಯ ಇಲಾಖೆಯೂ ಇದರ ಕುರಿತು ಗಮನ ಹರಿಸುವುದಿಲ್ಲ. ಪುರಸಭೆಗೆ ಹಸ್ತಾಂತರಿಸಬೇಕು ಎಂದು ಎಂದೋ ಆದೇಶವಾಗಿದ್ದರೂ, ಪುರಸಭೆ ನಿರ್ಣಯ ಮಾಡಿ, ಜಂಟಿ ಸರ್ವೆ ಮಾಡಿ, ಅಳತೆಯಾಗಿ ಕಂದಾಯ ಇಲಾಖೆಯಲ್ಲಿ ಕಡತ ಸಿದ್ಧವಾಗಿದ್ದರೂ ಹಸ್ತಾಂತರವಾಗಲೇ ಇಲ್ಲ.

Advertisement

ಗಾಂಧಿ ಮೈದಾನದಲ್ಲಿ ಆಟಕ್ಕೆ ಜಾಗವಿಲ್ಲ!
ಇದು ಹೆಸರಿಗೆ ಆಟದ ಮೈದಾನ. ಆದರೆ ಆಡಲು ಜಾಗವೇ ಇಲ್ಲ. ಇಲ್ಲಿ ಸಮಸ್ಯೆಗಳೇ ಆಡುತ್ತಿವೆಯೇನೋ ಎಂಬಂತೆ ಭಾಸವಾಗುತ್ತಿದೆ. ವಾರಾಂತ್ಯದಲ್ಲಿ ಇಲ್ಲಿ ಕ್ರಿಕೆಟ್‌ ಮತ್ತಿತರ ಪಂದ್ಯಗಳು ನಡೆಯುತ್ತವೆ. ಆದರೆ ಈಗ ಹುಲ್ಲು ತುಂಬಿದೆ. ಕಳೆ ಕೀಳಲಿಲ್ಲ. ಮಳೆ ಬಂದಾಗಲೆಲ್ಲ ಕೊಚ್ಚೆಯಾಗುತ್ತದೆ.   ವಾಲಿಬಾಲ್‌ ಕೋರ್ಟ್‌ ಸಮೀಪ ಬಿದ್ದರೆ ಕೈ ಕಾಲಿನ ಗಂಟು ಮುರಿಯಬಹುದು ಎಂಬಂತೆ ಹೊಂಡಗಳಿವೆ.

ಬೇರೆ ಮೈದಾನಗಳಿದ್ದರೂ…
ಭಂಡಾರ್‌ಕಾರ್ಸ್‌ ಕಾಲೇಜು ಪಕ್ಕದ ಗಾಂಧಿ ಕ್ರೀಡಾಂಗಣ, ಅದರ ಪಕ್ಕದಲ್ಲಿ ನೆಹರೂ ಮೈದಾನ ಎಂದು ವಿವಿಧ ಚಟುವಟಿಕೆಗಳಿಗೆ ಯೋಗ್ಯವಾದ ಮೈದಾನಗಳಿವೆ. ನೆಹರೂ ಮೈದಾನ ಪುರಸಭೆಯ ಹಿಡಿತದಲ್ಲಿ ಇಲ್ಲದೆ ಇರುವುದರಿಂದ ಅದು ಯಾವುದಕ್ಕೂ ಸಿಗುತ್ತಿಲ್ಲ.  ಗಾಂಧಿ ಮೈದಾನದಲ್ಲಿ ಸರಕಾರಿ ಕಾರ್ಯಕ್ರಮಗಳೂ ನಡೆಯುತ್ತವೆ.  ದಸರಾ ಕ್ರೀಡಾಕೂಟಕ್ಕೂ ಇದೇ ಜಾಗ ಬೇಕು.

ಹಿರಿಯರಿಗೆ ವಾಕಿಂಗ್‌, ಕಿರಿಯರಿಗೆ ಆಟ!
ಗಾಂಧಿ ಮೈದಾನದಲ್ಲಿ ಸಂಜೆ ವಾಕಿಂಗ್‌ಗೆ ಎಂದು ನೂರಾರು ನ ಆಗಮಿಸುತ್ತಾರೆ. ಅದೇ ಹೊತ್ತಿಗೆ ಯುವಕರು ಆಟವಾಡಲು ಬರುತ್ತಾರೆ! ಆದರೆ ಸಂಜೆ ಆರಾಗುತ್ತಿದ್ದಂತೆ ಇಲ್ಲಿ ಕತ್ತಲು ಆವರಿಸುತ್ತದೆ. ಇಲ್ಲಿನ ದೀಪಗಳೂ ಬೆಳಗುವುದಿಲ್ಲ. ಇದರಿಂದ ಹಿರಿಯರಿಗೆ, ಮಹಿಳೆಯರಿಗೆ ಅನಗತ್ಯ ಭಯದ ವಾತಾವರಣ ಸೃಷ್ಟಿಯಾಗುತ್ತದೆ.

ನೆಹರೂ ಮೈದಾನವೂ ಕಳಾಹೀನ!
ಪುರಸಭೆಯ ಸ್ವರ್ಣ ಮಹೋತ್ಸವದ ನೆನಪಿಗೆ ನೆಹರೂ ಮೈದಾನದ ಬಯಲಿನಲ್ಲಿ ಒಂದು ಸುಂದರ ರಂಗಮಂದಿರ ಕಟ್ಟಿಸಿದೆ. ಈ ಮೈದಾನದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ ಇಲ್ಲಿ ಯುಜಿಡಿ ಕಾಮಗಾರಿಗಾಗಿ ತಂದು ಹಾಕಿದ್ದ ದೊಡ್ಡ ಗಾತ್ರದ ಪೈಪುಗಳಿಂದಾಗಿ ಮೈದಾನ ಪಾಳು ಬೀಳಲಾರಂಭಿಸಿತು. ಮೈದಾನದ ಸುತ್ತ ಮಳೆಗಾಲದ ಕಳೆ ಬೆಳೆಯತೊಡಗಿತು. ಆಗೊಮ್ಮೆ ಈಗೊಮ್ಮೆ ಪುರಸಭೆ ಕಳೆ ತೆಗೆದರೂ ಮೈದಾನ ಮಾತ್ರ ‘ಕಳಾಹೀನ’ವಾಗಿ ‘ಕಲಾವಿಹೀನ’ವಾಗಿದೆ.

Advertisement

ಕೆಲವು ಪ್ರದರ್ಶನ ಮೇಳಗಳಿಗಾಗಿ ಇಲ್ಲಿ ಅಗೆಯಲಾಗಿದೆ.

ಘನ ಲಾರಿಗಳು ಮೈದಾನದೆಲ್ಲೆಡೆ ಎಗ್ಗಿಲ್ಲದೆ ಸಂಚರಿಸಿದ ಪರಿಣಾಮ ಹೊಂಡಗುಂಡಿಗಳು ಬಿದ್ದಿವೆ. ವಾಹನ ಚಾಲನೆ ಕಲಿಕೆಗೆ ಈ ಮೈದಾನ ಉಪಯೋಗವಾಗುತ್ತಿದೆ.

ಮೈದಾನದಲ್ಲಿರುವ ರಂಗಮಂದಿರ ಉಪಯೋಗಶೂನ್ಯವಾಗಿದೆ. ಮುಚ್ಚಿದ ಕಬ್ಬಿಣದ ಗೇಟು ತುಕ್ಕು ಹಿಡಿಯತೊಡಗಿದ್ದು, ಕೈಗೆ ಮಣ್ಣಿನ ಲೇಪನವಾಗುತ್ತಿದೆ.  ಸಾಂಸ್ಕೃತಿಕ ಚಟುವಟಿಕೆಗೆ ಇಂಬು ನೀಡಬೇಕಿದ್ದ ಈ ರಂಗಮಂದಿರ ಈಗ ದಿಕ್ಕುದೆಸೆಯಿಲ್ಲದಂತಾಗಿದೆ.

ಗಾಂಧಿ ಮೈದಾನ ನಾದುರಸ್ತಿಯಲ್ಲಿದೆ. ಇಲ್ಲಿ ವಾಲಿಬಾಲ್‌ಆಟವಾಡಿದರೆ ಕೈ ಕಾಲು ತುಂಡಾಗಬಹುದು. ಮೈದಾನ ಅಷ್ಟು ಹೊಂಡಗುಂಡಿಗಳಿಂದ ಕೂಡಿದೆ.
-ವಿಕಾಸ್‌ ಹೆಗ್ಡೆ, ಸ್ಥಳೀಯರು

ಗಾಂಧಿ ಮೈದಾನ ದುರಸ್ತಿಗೆ 5 ಲಕ್ಷ ರೂ. ಅನುದಾನ ದೊರೆತಿದ್ದು ದುರಸ್ತಿ ನಡೆಸಲಾಗುವುದು. ಆಟ ಆಡಲು ಯಾವುದೇ ಸಮಸ್ಯೆಗಳು ಇಲ್ಲ.
-ಕುಸುಮಾಕರ್‌ ಶೆಟ್ಟಿ, ತಾಲೂಕು ಯುವನ ಸೇವಾ ಮತ್ತು ಕ್ರೀಡಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next