Advertisement

ಕುಂದಾಪುರ; ನಮಗೆ ಬಸ್‌ ಬೇಕೇ ಬೇಕು-ಬಸ್ಸಿಲ್ಲ, ವಿದ್ಯಾರ್ಥಿಗಳ ಗೋಳು ಕೇಳುವವರಿಲ್ಲ!

03:10 PM Jun 12, 2024 | Team Udayavani |

ಕರಾವಳಿ ಈಗ ಶಿಕ್ಷಣ ಕಾಶಿ. ದೇಶದ ನಾನಾ ಭಾಗ ಗಳಿಂದ ಇಲ್ಲಿಗೆ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಆದರೆ, ದುರಂತವೆಂದರೆ, ಕರಾವಳಿಯ ಅದೆಷ್ಟೋ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯು ವುದೇ ಸವಾಲಾಗುತ್ತಿದೆ. ಅದರಲ್ಲೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಪಟ್ಟಣ, ಇಲ್ಲವೇ ನಗರದ ಶಾಲೆ, ಕಾಲೇಜಿಗೆ ಬರುವುದು ಹರಸಾಹಸ. ಇದಕ್ಕೆ ಕಾರಣ ಬಸ್‌ ಸೌಲಭ್ಯದ ಸಮಸ್ಯೆ. ಅದೆಷ್ಟೋ ಹಳ್ಳಿಗಳಿಗೆ ಬಸ್ಸೇ ಇಲ್ಲ. ಇರುವ ಬಸ್‌ ಗಳು ಬೆಳಗ್ಗೆ ಸಂಜೆ, ಫುಲ್‌ ಆಗಿರುತ್ತವೆ.

Advertisement

ಹೀಗಾಗಿ ಅದೆಷ್ಟೋ ಕಿ.ಮೀ. ಗಟ್ಟಲೆ ನಡೆದು, ದುಬಾರಿ ಹಣ ತೆತ್ತು ಶಿಕ್ಷಣ ಪಡೆಯಬೇಕಾಗಿದೆ. ನಗರಗಳಲ್ಲಿ ತುಂಬಿದ ಬಸ್‌ ಗಳಲ್ಲಿ ಅನುಭ  ವಿಸುವ ಕಿರಿಕಿರಿ, ನೇತಾಡಿಕೊಂಡೇ ಸಾಗುವ ಸಂಕಷ್ಟ . ಇಷ್ಟೆಲ್ಲ ಸಮಸ್ಯೆಗಳ ಸರಮಾಲೆ ಎದುರಿಸುತ್ತಿರುವ ನಮ್ಮದೇ ಮನೆಯ ಈ ಮಕ್ಕಳ ಕಷ್ಟಗ ಳಿಗೆ ಧ್ವನಿಯಾಗುವ ಮತ್ತು ಅವರ ಅಸುರಕ್ಷಿತ ಬದುಕಿನ ಕಥೆಯನ್ನು ಆಡ ಳಿತ ವರ್ಗ, ಜನಪ್ರತಿನಿಧಿಗಳಿಗೆ ತಲುಪಿಸಿ ಪರಿ ಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ನಿಮ್ಮ ಉದಯವಾಣಿ ಪತ್ರಿಕೆ ಹೊಸ ಅಭಿಯಾನ  ಶುರು ಮಾಡಿದೆ. ಇಂದಿನಿಂದ ಸುದಿನದಲ್ಲಿ ನಿಮ್ಮ ಕಷ್ಟಗಳು, ನಿಮ್ಮ ಧ್ವನಿ, ನಿಮ್ಮ ಆಕ್ರೋಶ, ನಿಮ್ಮ ಬೇಡಿಕೆಗಳು ತೆರೆದುಕೊಳ್ಳಲಿವೆ.

ಕುಂದಾಪುರ: ಒಬ್ಬೊಬ್ಬರದು ಒಂದೊಂದು ಬವಣೆ. 40-50 ಕಿ.ಮೀ. ದೂರದ ಗ್ರಾಮಾಂತರ ಪ್ರದೇಶದಿಂದ ಕುಂದಾಪುರದ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾರ್ಥಿಗಳು ಬರುತ್ತಾರೆ. ಕೆಲವರಿಗೆ ಬೆಳಗ್ಗೆ 6.30ಕ್ಕೆ ಬಸ್‌. ಇನ್ನು ಕೆಲವರಿಗೆ ಒಂದೂ ಮುಕ್ಕಾಲು ತಾಸಿನ ಬಸ್‌ ಪಯಣ. ಕೆಲವೂರಿಗೆ ಒಂದೇ ಬಸ್‌. ಅದು ತಪ್ಪಿದರೆ ಬಸ್ಸೇ ಇಲ್ಲ. ಇನ್ನು ಕೆಲವು ಊರಿಗೆ ಮಧ್ಯಾಹ್ನದ ವೇಳೆ
ಬಸ್ಸೇ ಇಲ್ಲ. ಶನಿವಾರ ಮಧ್ಯಾಹ್ನ ಕಾಲೇಜು ಬಿಟ್ಟರೆ ಸಂಜೆಯ ಬಸ್‌ಗೆ ಕಾಯಬೇಕು.  ಒಂದೊಮ್ಮೆ ಕಾಲೇಜು ಬಿಡುವುದು ಕೆಲವು
ನಿಮಿಷ ವಿಳಂಬವಾದರೂ ಮುಂದಿನ ಬಸ್‌ ಗಾಗಿ ತಾಸುಗಟ್ಟಲೆ ಕಾಯಬೇಕು. ರಾತ್ರಿ ವೇಳೆ ಕಾರ್ಗತ್ತಲಲ್ಲಿ, ಕಾಡು ದಾರಿಯಲ್ಲಿ ಒಂಟಿ ಹೆಣ್ಮಕ್ಕಳು ಸುರಕ್ಷಿತವಾಗಿ ಮನೆ ಸೇರಬೇಕು

ಕುಂದಾಪುರ, ಬೈಂದೂರು, ಕಾರ್ಕಳ ತಾಲೂಕಿನ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಸಣ್ಣ ನಿದರ್ಶನ ಇದು. ಶಾಲೆ,
ಕಾಲೇಜಿನಲ್ಲಿ ಪಾಠ ಕಲಿಯುವುದಕ್ಕಿಂತಲೂ ಕಾಲೇಜಿಗೆ ಹೋಗುವುದು ಹೇಗೆ ಎಂಬ ಚಿಂತೆಯೇ ದೊಡ್ಡದಾಗಿದೆ. ಇಲ್ಲಿ ಸಾಕಷ್ಟು
ಖಾಸಗಿ ಮತ್ತು ಸರಕಾರಿ ಬಸ್‌ಗಳು ಇವೆಯಾದರೂ ಬೆಳಗ್ಗೆ ಮತ್ತು ಸಂಜೆಯ ದಟ್ಟಣೆಯನ್ನು ನಿಭಾಯಿಸಲು ಆಗುತ್ತಿಲ್ಲ. ಹೀಗಾಗಿ ಹೆಚ್ಚುವರಿ ಬಸ್‌ಗಳ ಬೇಡಿಕೆಯನ್ನು ಇಡುತ್ತಿದ್ದಾರೆ.

ವಿದ್ಯಾ ರ್ಥಿಗಳು. ಸರಕಾರ ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಪ್ರಯಾಣ ಎನ್ನುತ್ತದೆ. ಅದರಲ್ಲಿ ಲಕ್ಷಗಟ್ಟಲೆ ವೇತನ ಇದ್ದವರೂ ನಿತ್ಯ ಉಚಿತ ಪ್ರಯಾಣ ಮಾಡುತ್ತಾರೆ. ಹಾಗಂತ ವಿದ್ಯಾರ್ಥಿಗಳ ಸಲುವಾಗಿ ಸರಕಾರಿ ಬಸ್‌ ಬಿಡಿ ಎಂದರೆ ಸ್ಪಂದನವೇ ಇರುವುದಿಲ್ಲ. ತಾಸುಗಟ್ಟಲೆ ನಡೆದು ಬಸ್ಸೇರಿ ಕಿಕ್ಕಿರಿದ ಜನರ ನಡುವೆ ಬಂದರೂ ಕಾಲೇಜಿಗೆ ವಿಳಂಬವಾಗುತ್ತದೆ. ಎಷ್ಟೇ ಬೇಗ
ಹೋಗಬೇಕೆಂದು ಬಯಸಿದರೂ ಮನೆ ತಲುಪುದು ತಡವಾಗುತ್ತದೆ. ಸರಕಾರಿ ಮಾತ್ರವಲ್ಲ, ಖಾಸಗಿ ಬಸ್‌ಗಳಲ್ಲೂ ವಿಪರೀತ ರಶ್‌, ಒತ್ತಡ. ಶಾಲಾ ಕಾಲೇಜಿನ ಸಮಯಕ್ಕೆ  ಅನುಕೂಲವಾಗುವಂತೆ ಹೆಚ್ಚುವರಿ ಬಸ್‌ ಓಡಾಟ ಮಾಡಿದರೆ ಮಕ್ಕಳಿಗೆ ಅನುಕೂಲ
ಎನ್ನುವುದು ವಿದ್ಯಾರ್ಥಿಗಳ ಅಭಿಮತ.

Advertisement

ಎಷ್ಟು ಬಸ್‌ಗಳಿವೆ?
ಕುಂದಾ ಪುರ ಮತ್ತು ಗ್ರಾಮಾಂತರ ಭಾಗದ ದೊಡ್ಡ ವರದಾನ ಎಂದರೆ ಖಾಸಗಿ ಬಸ್‌. ಕುಂದಾಪುರ ಬಸ್‌ ನಿಲ್ದಾಣದಿಂದ ಗ್ರಾಮಾಂತರಕ್ಕೆ ಸುಮಾರು 85 ಬಸ್‌ ಗಳು 300 ಟ್ರಿಪ್‌ ಬಸ್‌ ಹೊಡೆಯುತ್ತವೆ. ಕುಂದಾಪುರ, ಬೈಂದೂರು ತಾಲೂಕಿನ ಗ್ರಾಮಾಂತರ ಪ್ರದೇಶಕ್ಕೆ ಕೆಎಸ್‌ಆರ್‌ಟಿಸಿಯ 38 ಬಸ್‌ ಗಳು ನಿತ್ಯ ಓಡಾಟ ನಡೆಸುತ್ತವೆ. ಕೊರೊನಾ ವೇಳೆ ಅನೇಕ ಬಸ್‌
ಗಳ ಓಡಾಟ ನಿಲ್ಲಿಸಲ್ಪಟ್ಟಿದ್ದರೂ ಈಗ 5 ಬಸ್‌ಗಳ ಸಂಖ್ಯೆ ಹೆಚ್ಚಾಗಿದೆ. ಪ್ರತೀನಿತ್ಯ 15 ಸಾವಿರ ಪ್ರಯಾಣಿಕರು ಸಂಚರಿಸುತ್ತಾರೆ. ಆದರೆ ಇದು ಸಾಕಾಗುವುದಿಲ್ಲ. ಮಕ್ಕಳ ವಿದ್ಯಾಭ್ಯಾಸದ ಹಿತ ದೃಷ್ಟಿಯಿಂದ ಬೆಳಗ್ಗೆ ಮತ್ತು ಸಂಜೆ ಹೆಚ್ಚುವರಿ ಸರಕಾರಿ ಬಸ್‌ಗಳ ಓಡಾಟ ಬೇಕು ಎನ್ನುವುದು ವಿದ್ಯಾರ್ಥಿಗಳ ಬೇಡಿಕೆ.

ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತಕ್ಕೆ ಆಹ್ವಾನ
ಗ್ರಾಮಾಂತರದಿಂದ ಬರುವ ಎಲ್ಲ ಬಸ್‌ಗಳೂ ಜನರಿಂದ ಗಿಜಿಗುಡುತ್ತವೆ. ಶಾಲಾ ಕಾಲೇಜು ಮಕ್ಕಳು ಅದರೊಳಗೆ ನುಸುಳಿಕೊಂಡು ಬರುವುದೇ ಸಾಹಸ. ಅದರಲ್ಲೂ ಹೆಣ್ಮಕ್ಕಳೂ ಸೇರಿದಂತೆ ಬೋರ್ಡಿ ನಲ್ಲಿ ನೇತಾಡಿಕೊಂಡು, ಒಂದು ಕೈಯಲ್ಲಿ ಚೀಲ, ಕೊಡೆ, ಬುತ್ತಿ, ಇನ್ನೊಂದು ಕೈಯಲ್ಲಿ ಬಸ್‌ನ ಸರಳು ಹಿಡಿದು ಬ್ಯಾಲೆನ್ಸ್‌ ಮಾಡಬೇಕು. ಮಳೆ ಬಂದರೆ, ಕೆಸರು ನೀರು ಹಾರಿದರೆ, ಬಸ್‌ ದಿಢೀರ್‌ ಬ್ರೇಕ್‌ ಹಾಕಿದರೆ ಅವಘಡ ಕಟ್ಟಿಟ್ಟ ಬುತ್ತಿ. ಇದರ ಜತೆಗೆ ವಿದ್ಯಾ ರ್ಥಿನಿಯರು ಬಸ್‌ ಸಿಗದೆ ಊರು ತಲುಪುವುದು ರಾತ್ರಿಯಾದರೆ ನಿರ್ಜನ ರಸ್ತೆಗಳಲ್ಲಿ ಒಂಟಿ ಯಾಗಿ ಪಯಣಿಸುವ ಆತಂಕ ಇನ್ನೊಂದೆಡೆ. ಕುಂದಾಪುರ  ಗ್ರಾಮಾಂತರದಲ್ಲಿ ಒಂಟಿ ಯುವತಿಯರ ಮೇಲೆ ಹಲವು ಬಾರಿ ದೌರ್ಜನ್ಯ, ಕೊಲೆ ಗಳೇ ನಡೆದಿರುವುದು ಹೆತ್ತವರನ್ನು ಆತಂಕಕ್ಕೆ ತಳ್ಳಿದೆ.

ಹಳ್ಳಿಯಿಂದ ಕುಂದಾಪುರಕ್ಕೆ 9 ಸಾವಿರ ವಿದ್ಯಾರ್ಥಿಗಳು
ಕುಂದಾಪುರ ನಗರದ ಶಿಕ್ಷಣ ಸಂಸ್ಥೆಗಳಲ್ಲಿ ಸುಮಾರು 9 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಪೈಕಿ ಬಹುತೇಕ
ಮಂದಿ ಕುಂದಾಪುರ ಹಾಗೂ ಬೈಂದೂರಿನ ಗ್ರಾಮಾಂತರ ಪ್ರದೇಶಗಳಿಂದ ಬರುವವರು. ಬಸ್ರೂರು, ಹಾಲಾಡಿ, ಕೊಕ್ಕರ್ಣೆ, ಸಿದ್ದಾಪುರ, ಶಂಕರನಾರಾಯಣ, ಗೋಳಿಯಂಗಡಿ, ಹೆಬ್ರಿ, ತಲ್ಲೂರು ಮೂಲಕ ಕೊಲ್ಲೂರು, ಹೆಮ್ಮಾಡಿ ಮೂಲಕ ಕೊಲ್ಲೂರು, ನೂಜಾಡಿ, ಆಲೂರು, ಕೆರಾಡಿ, ಹಳ್ಳಿಹೊಳೆ, ಕಮಲಶಿಲೆ, ಶೇಡಿಮನೆ, ಉಳ್ಳೂರು 74, ನಾಡ, ವಕ್ವಾಡಿ, ಬೇಳೂರು, ಕೆದೂರು, ಗುಲ್ವಾಡಿ, ಉಪ್ಪಿನಕುದ್ರು, ಯಡಮೊಗೆ, ಅಮಾಸೆಬೈಲು, ಬೈಂದೂರು, ಯರುಕೋಣೆ ಹೀಗೆ ನಾನಾ ಊರುಗಳಿಂದ ಬರುತ್ತಾರೆ.

50 ಕಿ.ಮೀ. ದೂರ ಪ್ರಯಾಣ, ರಾತ್ರಿ7.30ಕ್ಕೆ ಮನೆಗೆ
ಬೈಂದೂರು ತಾಲೂಕಿನ ಶಿರೂರು ಕರಾವಳಿಯಿಂದ ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಕಾಲೇಜಿಗೆ ಬರುವ ನೇಹಾ ಅವರಿಗೆ ಒಂದೇ ಸರಕಾರಿ ಬಸ್‌ ಇರುವುದು. ಅದೂ ಬೆಳಗ್ಗೆ 7.30ಕ್ಕೆ. ತಪ್ಪಿದರೆ 1 ಖಾಸಗಿ ಬಸ್ಸಿದೆ. ಆಮೇಲೆ ಸಂಜೆಯೇ ಆ ಊರಿಗೆ ಬಸ್‌ ಬರುವುದು. ಪರೀಕ್ಷೆ ಇದ್ದರೆ ಬೇಗ ಬರುವಂತಿಲ್ಲ, ಬೇಗ ಬಿಟ್ಟರೆ ಮನೆಗೆ ಹೋಗುವಂತಿಲ್ಲ. ಸಂಜೆ ಸಂಗಮ್‌ ಬಳಿ ಬಸ್ಸೇರಲು ಸಾಧ್ಯವೇ ಇಲ್ಲ. ಅಂತಹ ರಶ್‌. ಖಾಸಗಿ ಬಸ್‌ನಲ್ಲಿ ಬಸ್‌ಸ್ಟಾಂಡ್‌ಗೆ ಬಂದು ಬಸ್ಸೇರಬೇಕು. ಆದರೂ ಕೂರಲೂ ಕಷ್ಟ, ನಿಲ್ಲಲೂ ಕಷ್ಟ ಎಂಬಂತೆ ಜನ ತುಂಬಿರುತ್ತಾರೆ. ಮಳೆಬಂದರೆ, ಜಾರಿ ಬಿದ್ದರೆ ಎಂಬ ಭಯದ ನಡುವೆ ಬಾಗಿಲಿನಲ್ಲಿ ನೇತಾಡಿಕೊಂಡು ಹೋಗಬೇಕು. ಶಿರೂರಿನಲ್ಲಿ ಬಸ್‌ ಇಳಿದರೆ 5 ಕಿ.ಮೀ. ನಡೆಯಬೇಕಾಗುತ್ತದೆ. ಮನೆ ತಲುಪುವಾಗ ರಾತ್ರಿ 7.30! ಒಂಟಿ ಸಂಚಾರ. ಭಯ ಬೀಳುವ ವಾತಾವರಣ. ಈ ಭಾಗದಲ್ಲಿ ನನ್ನಂತೆ ಐಎಂಜೆ, ಭಂಡಾರ್ಕಾರ್‌, ಕಾಳಾವರ ಹೀಗೆ ವಿವಿಧ ಕಾಲೇಜುಗಳಿಗೆ 100ಕ್ಕೂ ಅಧಿಕ ಮಕ್ಕಳು ಕುಂದಾಪುರಕ್ಕೆ ಆಗಮಿಸುತ್ತಾರೆ. ಕಾಲೇಜಿಗೆ ಬರಲು, ಮನೆಗೆ ಹೋಗಲು ನೂರಾರು ಮಕ್ಕಳಿಗೆ ಅನುಕೂಲವಾಗುವಂತೆ ಹೆಚ್ಚುವರಿ ಬಸ್‌ನ ಅಗತ್ಯವಿದೆ ಎನ್ನುತ್ತಾರೆ.

ಸಮಸ್ಯೆಗಳು ಹತ್ತಾರು!
01) ವಿದ್ಯಾರ್ಥಿಗಳ ಬೇಡಿಕೆಯಷ್ಟು ಬಸ್‌ ಸೌಲಭ್ಯ ಇಲ್ಲ.

02) ಹಲವಾರು ಗ್ರಾಮಾಂತರ ಭಾಗಗಳಿಗೆ ಬಸ್‌ ಸೌಕರ್ಯವೇ ಇಲ್ಲ.

03) ಪೀಕ್‌ ಅವರ್‌ ನಲ್ಲಿ ತುಂಬಿ ತುಳುಕುವ ಬಸ್‌, ಮಕ್ಕಳಿಗೆ ಜಾಗವಿಲ್ಲ.

04) ಬಸ್‌ ನಿಲ್ಲಿಸಿದರೂ ಬ್ಯಾಗ್‌ ಹೊತ್ತು ಒಳ ಹೋಗುವುದೇ ಕಷ್ಟ.

05) ಬಸ್‌ ಗಳು ಸಕಾಲದಲ್ಲಿ ಸಿಗದೆ ಹೋದರೆ ಮೊದಲ ಪೀರಿಯೆಡ್‌ ಮಿಸ್‌

06) ಕಿಕ್ಕಿರಿದ ಬಸ್‌ ಗಳಲ್ಲಿ ಹೆಣ್ಣು ಮಕ್ಕಳಿಗಂತೂ ಯಮ ಯಾತನೆ

07) ಕೆಲವೊಮ್ಮೆ ನೇತಾಡಿಕೊಂಡೇ ಹೋಗಬೇಕು.

08) ಬೆಳಗ್ಗೆ ಮಾತ್ರವಲ್ಲ, ಸಂಜೆ ಮನೆಗೆ ಮರಳುವಾಗಲೂ ಇದೇ ಕತೆ.

09) ವಿದ್ಯಾರ್ಥಿನಿಯರಿಗೆ ಬಸ್ಸಿಂದ ಇಳಿದು ನಿರ್ಜನ ಪ್ರದೇಶದಲ್ಲಿ ಸಾಗುವ ಸವಾಲು ಬೇರೆ.

10) ಬಸ್‌ ವ್ಯವಸ್ಥೆ ಸಮರ್ಪಕವಾಗಿಲ್ಲದೆ ಅದೆಷ್ಟೋ ಹೆಣ್ಮಕ್ಕಳ ಶಿಕ್ಷಣವೇ ಮೊಟಕು.

*ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next