Advertisement
ಆದೇಶಕೆರೆ ಸಂರಕ್ಷಣೆ ಕುರಿತು “ಸಿಟಿಜನ್ ಆ್ಯಕ್ಷನ್ ಫೋರಂ’ ಸೇರಿ ಮೂವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿ, ರಾಜ್ಯದ ಎಲ್ಲ ಕೆರೆಗಳ ಸರ್ವೆ ನಡೆಸಲು ಒಂದು ತಿಂಗಳಲ್ಲಿ ಜಿಲ್ಲಾ ಮಟ್ಟದ ಕೆರೆ ಸಂರಕ್ಷಣಾ ಸಮಿತಿ ರಚಿಸಬೇಕು’ ಎಂದು ರಾಜ್ಯ ಸರಕಾರಕ್ಕೆ ಆದೇಶಿಸಿದೆ.
ರಾಜ್ಯ ಮಟ್ಟದಲ್ಲಿ ಉನ್ನತ ಸಮಿತಿ ಹಾಗೂ ಜಿಲ್ಲಾ ಮಟ್ಟದಲ್ಲಿ ಕೆರೆ ಸಂರಕ್ಷಣಾ ಸಮಿತಿ ರಚಿಸಬೇಕು. ಈ ಸಮಿತಿಗಳು ಕೆರೆಗಳ ಸರ್ವೆ ನಡೆಸಿ, ಗಡಿ ಗುರುತಿಸಬೇಕು, ಬೇಲಿ ಅಳವಡಿಸಬೇಕು. ಸಮಿತಿ ರಚನೆ ಮಾಡಿದ ಬಗ್ಗೆ ಸಾರ್ವಜನಿಕರಿಗೆ ವ್ಯಾಪಕ ಪ್ರಚಾರ ನೀಡಬೇಕು. ಕೋರ್ಟ್‌ಗೆ ಅನುಪಾಲನಾ ವರದಿ ಸಲ್ಲಿಸಬೇಕು ಎಂದ ಪೀಠ; ಕೆರೆಗಳ ನಿರ್ವಹಣೆ ಜವಾಬ್ದಾರಿಯನ್ನು ಖಾಸಗಿ ಮತ್ತು ಕಾರ್ಪೊರೇಟ್ ಸಂಸ್ಥೆಗಳಿಗೆ ವಹಿಸಿ ಆ ಕುರಿತಂತೆ ಒಪ್ಪಂದ ಮಾಡಿಕೊಂಡಿರುವ ಸರಕಾರದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಕೆರೆಗಳ ಅಭಿವೃದ್ಧಿ ಹಾಗೂ ಪುನರುಜ್ಜೀವನಕ್ಕೆ ಕಾರ್ಪೊರೇಟ್ ಸಂಸ್ಥೆಗಳು ಸರಕಾರಕ್ಕೆ ಹಣ ನೀಡುವುದಕ್ಕೆ ಈ ಆದೇಶ ಅಡ್ಡಿ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಹಳೆ ಆದೇಶ
ಹಿಂದೊಮ್ಮೆ ಈ ಕುರಿತು ಆದೇಶ ಬಂದಿತ್ತು. ಆದರೆ ಅನುಷ್ಠಾನವಾಗಿರಲಿಲ್ಲ. 2008ರಲ್ಲೇ ರಾಜ್ಯದ ಎಲ್ಲ ಕೆರೆಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿತ್ತು. ಅದಾದ ಬಳಿಕ ಕೆರೆ ಪ್ರದೇಶದ 30 ಮೀಟರ್ ಒಳಗಿರುವ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು 2012ರ ಎ. 11ರಂದು ಆದೇಶಿಸಿತ್ತು. ಈ ದಿಸೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಆದರೆ, ಈ ಸಮಿತಿ ಈ ತನಕ ಕೇವಲ ಐದು ಸಭೆ ನಡೆಸಿದೆ. ಕೆರೆ ಅಭಿವೃದ್ಧಿ ಪ್ರಾಧಿಕಾರ ರದ್ದು ಮಾಡಿದ್ದರೂ ಸಹ ರಾಜ್ಯ ಮಟ್ಟದ ಸಮಿತಿ ಹಾಗೂ ಜಿಲ್ಲಾ ಸಮಿತಿಗಳು ಏಕೆ ಸಭೆ ಸೇರಿ ಕೆರೆಗಳ ಸಂರಕ್ಷಣೆ, ಒತ್ತುವರಿ ತೆರವು, ಪುನರುಜ್ಜೀವನಕ್ಕೆ ಯೋಜನೆಗಳನ್ನು ರೂಪಿಸಿಲ್ಲ ಎನ್ನುವುದು ಒಗಟಾಗಿದೆ.
Related Articles
ಬಯಲು ಪ್ರದೇಶಗಳಲ್ಲಿ ಕೆರೆಗಳ ಸಂಪ್ರದಾಯ ಹಳೆಯದು. ಪಶ್ಚಿಮಘಟ್ಟದ ತಪ್ಪಲಿನಲ್ಲಿ ಕೃಷಿಗೆ ನೀರು, ಮನೆಗೆ ನೀರು, ದನಕರುಗಳು, ಪ್ರಾಣಿಗಳು, ಪಕ್ಷಿಗಳಿಗೆ ಕುಡಿಯಲು ಮತ್ತು ಮೇವಿಗೆ ವರ್ಷಪೂರ್ತಿ ನೀರು ಒದಗಿಸಲು ಈ ಕೆರೆಗಳು ಜಲಾಶ್ರಯ ತಾಣಗಳಾಗಿದ್ದವು. ಜತೆಗೆ ಜನವಸತಿಗೆ, ಜಮೀನು ಹಾಗೂ ಗೋಮಾಳಕ್ಕೆ ಅವಶ್ಯವಾಗಿದ್ದವು. ತಾಲೂಕಿನ ಶೇ. 45 ಕೆರೆಗಳೀಗ ಒತ್ತುವರಿಗೆ ಒಳಗಾಗಿವೆ. ಅಭಿವೃದ್ಧಿ ಚಟುವಟಿಕೆಗಳಿಗಾಗಿ ಕೆಲವೆಡೆ ಕೆರೆಗಳನ್ನು ಭೂ ಪರಿವರ್ತನೆಗೊಳಿಸಲಾಗಿದೆ. ಇನ್ನು ಹಲವು ಕೆರೆಗಳು ಅಭಿವೃದ್ಧಿ ಚಟುವಟಿಕೆಗಳಿಗಾಗಿ ಮಾಯವೇ ಆಗಿವೆ!.
Advertisement
ರಕ್ಷಣೆ ಹೊಣೆಕೆರೆಗಳ ರಕ್ಷಣೆಯ ಜವಾಬ್ದಾರಿಯನ್ನು ಸ್ಥಳೀಯಾಡಳಿತ ಸಂಸ್ಥೆಗಳಿಗೆ ವಹಿಸಲಾಗಿದೆ. ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ 25 ಕೆರೆಗಳಿದ್ದು ಅವುಗಳ ಸರ್ವೆ ನಡೆದ ಬಳಿಕ ಅವುಗಳ ಒತ್ತುವರಿ ತೆರವಿಗೆ ಕ್ರಮ ನಡೆಯಲಿದೆ. ಅದಾದ ಬಳಿಕ ಅವುಗಳಿಗೆ ಅಗತ್ಯವಿದ್ದಲ್ಲಿ ತಡೆಗೋಡೆ ರಚನೆ, ಹೂಳೆತ್ತುವಿಕೆ, ಇನ್ನು ಮುಂದೆ ಒತ್ತುವರಿಯಾಗದಂತೆ ರಕ್ಷಣೆಯ ಜವಾಬ್ದಾರಿ ಸ್ಥಳೀಯಾಡಳಿತದ ಪಾಲಿಗೆ ಲಭಿಸಿದೆ. ಇತಿಹಾಸ ಸೇರಿದ ಕೆರೆಗಳು
ಕೆರೆಗಳು ಪ್ರಕೃತಿಯ ರಮ್ಯ ವಾತಾವರಣಕ್ಕೆ , ಹಸಿರು ಸಿರಿಗೆ, ಜೈವಿಕ ತಾಣಕ್ಕೆ, ಜೀವವೈವಿಧ್ಯಕ್ಕೆ ದೊಡ್ಡ ಕೊಡುಗೆಗಳಾಗಿವೆ. ಇದರಿಂದಲೇ ಸುತ್ತಲಿನ ಪರಿಸರ ಅದೆಷ್ಟೋ ಕಡೆ ಹಸಿರಾಗಿದೆ. ಹಿಂದೆ ನಾಡು ಬರಗಾಲದಿಂದ ತತ್ತರಿಸಿದ ಪರಿಣಾಮವೇ ಅಲ್ಲಲ್ಲಿ ಜಲಸೆಲೆ ಕೆರೆಗಳ ನಿರ್ಮಾಣ. ಹಳ್ಳಿ ಹಳ್ಳಿಗಳಲ್ಲಿ ಅಂದಿದ್ದ ಕೆರೆಗಳಲ್ಲಿ ಇಂದು ಬಹಳಷ್ಟು ಕೆರೆಗಳು ಕಣ್ಮರೆಯಾಗಿ ಕಾಲಗರ್ಭದಲ್ಲಿ ಹೂತು ಹೋಗಿದ್ದರೆ, ಕೆಲವು ಕೆರೆಗಳ ಹೆಸರು ಆಯಾಯ ಜಾಗಕ್ಕೆ ಇಂದಿಗೂ ಇರುವುದನ್ನು ಉದಾಹರಣೆಯಾಗಿ ಕಾಣಬಹುದು. ಸಮಿತಿ ರಚಿಸಲಾಗಿದೆ
ಕುಂದಾಪುರ ತಾಲೂಕಿನಲ್ಲಿ 740 ಕೆರೆಗಳಿದ್ದು ಕೆರೆಗಳ ಸರ್ವೆಗೆ ಸಂಬಂಧಿಸಿದಂತೆ ಸಮಿತಿ ರಚಿಸಲಾಗಿದೆ. ಕೆರೆಗಳ ಅಂಕಿಅಂಶಗಳ ಮಾಹಿತಿ ಕಂದಾಯ ಇಲಾಖೆ ಬಳಿ ಇದ್ದು ಸರ್ವೆ ಇತ್ಯಾದಿಗಳನ್ನು ಸಣ್ಣ ನೀರಾವರಿ ಇಲಾಖೆ ನಡೆಸುತ್ತದೆ. ರಕ್ಷಣೆ ಹಾಗೂ ನಿರ್ವಹಣೆಯ ಜವಾಬ್ದಾರಿ ಸ್ಥಳೀಯಾಡಳಿತಕ್ಕೆ ಸೇರುತ್ತದೆ.
-ತಿಪ್ಪೇಸ್ವಾಮಿ
ತಹಶೀಲ್ದಾರ್, ಕುಂದಾಪುರ ಸ್ಥಳೀಯಾಡಳಿತಕ್ಕೆ ಮಾಹಿತಿ
ಪುರಸಭೆ ವ್ಯಾಪ್ತಿಯಲ್ಲಿ 25 ಕೆರೆಗಳಿದ್ದು ಅವುಗಳ ಸರ್ವೆ ನಡೆದ ಬಳಿಕ ನಿರ್ವಹಣೆ ಕಾರ್ಯ ನಡೆಯಲಿದೆ. ಈ ಬಗ್ಗೆ ಕಂದಾಯ ಇಲಾಖೆಯಿಂದ ಮಾಹಿತಿ ಬಂದಿದೆ.
-ಗೋಪಾಲಕೃಷ್ಣ ಶೆಟ್ಟಿ
ಮುಖ್ಯಾಧಿಕಾರಿ, ಪುರಸಭೆ, ಕುಂದಾಪುರ -ಲಕ್ಷ್ಮೀ ಮಚ್ಚಿನ