ಶಂಕರನಾರಾಯಣ (ಕುಂದಾಪುರ): ಮನೆಯವರ ಒತ್ತಾಯದ ಮೇರೆಗೆ ಒಲ್ಲದ ಮನಸ್ಸಿನಿಂದ ಮದುವೆಯಾದ ಯುವತಿ ಪತಿ ಮತ್ತು ಆತನ ಕುಟುಂಬದವರಿಗೆ ವಂಚಿಸಿದ ಘಟನೆ ಕುಂದಾಪುರ ತಾಲೂಕಿನ ಶಂಕರನಾರಾಯಣದಲ್ಲಿ ನಡೆದಿದೆ.
ಕುಂದಾಪುರ ತಾಲೂಕಿನ ಸಂಪಿಗೇಡಿ ಉಳ್ಳೂರು 74 ರ ನಿವಾಸಿ ಸಂಕೇತ್ ಶೆಟ್ಟಿ (31) ಸ್ಪೂರ್ತಿ ಶೆಟ್ಟಿ ಅವರನ್ನು ಮೇ. 21ರಂದು ವಿವಾಹವಾಗಿದ್ದರು. ವಿವಾಹದ ಬಳಿಕ ಕೇವಲ 4 ದಿನ ಮಾತ್ರ ಮನೆಯಲ್ಲಿ ಇದ್ದ ಸ್ಪೂರ್ತಿ ಶೆಟ್ಟಿ ಆ ಬಳಿಕ ಆಕೆ ಪದೇ ಪದೇ ತವರು ಮನೆಗೆ ಹೋಗುತ್ತಿದ್ದರು. ಈ ಬಗ್ಗೆ ಪತಿಯ ಕಡೆಯವರು ವಿಚಾರಿಸಿದಾಗ ತಾನು ಮನೆಯವರ ಒತ್ತಾಯದ ಮೇರೆಗೆ ಒಲ್ಲದ ಮನಸ್ಸಿನಿಂದ ಮದುವೆಯಾಗಿದ್ದು, ತನಗೆ ಹೊಂದಾಣಿಕೆ ಮಾಡಿಕೊಳ್ಳಲು ಸ್ವಲ್ಪ ಸಮಯ ಬೇಕು ಎಂದು ತಿಳಿಸಿದ್ದಾರೆ. ಅದಕ್ಕೆ ಪತಿ ಸಂಕೇತ್ ಶೆಟ್ಟಿ ಒಪ್ಪಿಗೆ ಸೂಚಿಸಿದ್ದರು.
ದಿನ ಕಳೆದಂತೆ ಆಕೆ ಯಾರೊಂದಿಗೋ ಮೊಬೈಲ್‌ನಲ್ಲಿ ಮಾತನಾಡುತ್ತಿರುವುದು, ವೀಡಿಯೋ ಕಾಲಿಂಗ್ ಮಾಡುವುದನ್ನು ಗಮನಿಸಿದ ಪತಿ ವಿಚಾರಿಸಿದಾಗ ನಾನು ನವೀನ್ ಎಂಬಾತನನ್ನು ಇಷ್ಟ ಪಟ್ಟಿದ್ದೆ. ಆತನನ್ನು ಮದುವೆಯಾಗಲು ಬಯಸಿದ್ದೆ. ಈ ವಿಷಯ ಮನೆಯವರಿಗೂ ಗೊತ್ತಿತ್ತು ಎಂದು ತಿಳಿಸಿದ್ದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಂಕೇತ್ ಶೆಟ್ಟಿ ನಿನಗೆ ಈಗ ಮದುವೆಯಾಗಿದ್ದು ಇನ್ನು ಆ ರೀತಿ ಇರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಸಂಕೇತ್ ಶೆಟ್ಟಿ ಆಕೆಯ ಮನೆಯವರಲ್ಲಿ ತಿಳಿಸಿದಾಗ ಆಕೆ ಹೇಳಿದಂತೆ ನೀನು ಇದ್ದುಬಿಡು. ಇಲ್ಲವಾದರೆ ನೀನು ಆಕೆಗೆ ಹಿಂಸೆ ನೀಡಿದ್ದೀಯಾ ಎಂದು ಕೇಸು ನೀಡಿ ಜೈಲಿಗಟ್ಟುತ್ತೇವೆ ಎಂದು ಬೆದರಿಸಿದ್ಧಾರೆ. ಆ ಬಳಿಕ ಸ್ಪೂರ್ತಿ ಶೆಟ್ಟಿ ಮದುವೆ ಸಂದರ್ಭದಲ್ಲಿ ತನಗೆ ನೀಡಿದ್ದ 10 ಲಕ್ಷ ಮೌಲ್ಯದ ಚಿನ್ನ, ವಜ್ರದ ಆಭರಣಗಳ ಸಮೇತ ಗಂಡನ ಮನೆ ಮನೆ ತೊರೆದಿದ್ದಾರೆ.
ಈ ಕುರಿತು ಸಂಕೇತ್ ಶೆಟ್ಟಿ ಅವರು ಪತ್ನಿ ಸ್ಪೂರ್ತಿ ಶೆಟ್ಟಿ ಮತ್ತು ಆಕೆಯ ಮನೆಯವರ ವಿರುದ್ಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: 26/11 ಬೆದರಿಕೆ; ಸೀಮಾ ಹೈದರ್ ಹಿಂತಿರುಗದಿದ್ದರೆ…: ಮುಂಬೈ ಪೊಲೀಸರಿಗೆ ಉರ್ದು ಕರೆ