Advertisement

ಕುಂದಾಪುರ ಪುರಸಭೆ: ಅಧ್ಯಕ್ಷೆ ಆಯ್ಕೆಗೆ ಕಸರತ್ತು

06:00 AM Oct 11, 2018 | |

ಕುಂದಾಪುರ: ಕಡೆಗೂ ನ್ಯಾಯಾಲಯದ ತೀರ್ಪಿನಿಂದ ಬಹುಮತ ಪಡೆದ ಬಿಜೆಪಿ ಸದಸ್ಯರು ನಿಟ್ಟುಸಿರು ಬಿಟ್ಟಿದ್ದಾರೆ. 40 ದಿನಗಳ ಕಾಯುವಿಕೆಗೆ ಅಂತ್ಯ ಕಾಣಲಿದೆಯೇ, ಚುನಾವಣಾ ನೀತಿ ಸಂಹಿತೆಯ ಗುಮ್ಮ ಕಾಡಲಿದೆಯೇ ಎಂಬ ಗೊಂದಲದಲ್ಲಿದ್ದಾರೆ.

Advertisement

ವಿವಾದ ಕೊನೆ
ಪುರಸಭೆ ಅಧ್ಯಕ್ಷತೆಗೆ ಈ ಮೊದಲು ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷತೆಗೆ ಪರಿಶಿಷ್ಟ ಜಾತಿ ವರ್ಗಕ್ಕೆ ಮೀಸಲಾಗಿ ಆದೇಶ ಬಂದಿತ್ತು. ನಂತರ ಬದಲಾದ ಮೀಸಲಾತಿಯಲ್ಲಿ ಅಧ್ಯಕ್ಷ ಹುದ್ದೆ ಹಿಂದುಳಿದ ವರ್ಗ ಬಿ ಮಹಿಳೆಗೆ ತಿದ್ದುಪಡಿಯಾಗಿ ಬಂದಿತು. ಈ ವರ್ಗದ ಸದಸ್ಯೆ ಬಹುಮತ ಬಂದ ಬಿಜೆಪಿಯಲ್ಲಿ ಇಲ್ಲ. 

ಕಾಂಗ್ರೆಸ್‌ನಲ್ಲಿ ಮಾತ್ರ ಇರುವುದು. ಈ ರಾಜಕಾರಣದ ವಿರುದ್ಧ ಮೀಸಲಾತಿ ಬದಲಾವಣೆ ಸರಿಯಲ್ಲ ಎಂದು ಬಿಜೆಪಿ ಸದಸ್ಯರು ರಾಜ್ಯ ಉತ್ಛ ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ಸರಕಾರವೇ ಹಳೆ ಮೀಸಲಾತಿಗೆ ಬದ್ಧ ಎಂದು ನ್ಯಾಯಾಲಯಕ್ಕೆ ಹೇಳುವ ಮೂಲಕ ವಿವಾದ ಕೊನೆಗೊಂಡಿದೆ. ಆದರೆ ಸಂಸತ್‌ ಚುನಾವಣೆಯ ನೀತಿ ಸಂಹಿತೆ ಜಿಲ್ಲೆಯಾದ್ಯಂತ ಇರುವ ಕಾರಣ ಆಯ್ಕೆ ಪ್ರಕ್ರಿಯೆ ಇನ್ನೊಂದು ತಿಂಗಳು ಮುಂದೂಡುವ ಕುರಿತು ಅನುಮಾನ ಇದೆ.

ಈ ಮೂಲಕ ರಾಜಕೀಯ ಚದುರಂಗದ ಇನ್ನೊಂದು ದಾಳ ಕವುಚಿಬಿದ್ದಿದೆ. ಮೀಸಲಾತಿ ಬದಲಾಗಿ ಬಹುಮತ ಬಂದರೂ ಅಧಿಕಾರ ದೊರೆಯದ ಸಂಕಟ, ಮೀಸಲಾತಿ ಬಂದರೂ ಕೋರ್ಟಿಗೆ ಹೋದ ಕಾರಣ ಅಧಿಕಾರ ದೊರೆಯದ ನೋವು, ಗೆದ್ದರೂ ಇನ್ನೂ ಆಡಳಿತ ಮಂಡಳಿಯಾಗದ ವೇದನೆ ಸದಸ್ಯರಲ್ಲಿತ್ತು. 

ಕೇಸು ನ್ಯಾಯಾಲಯದಲ್ಲಿ ಇದ್ದರೂ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಚುನಾವಣಾಧಿಕಾರಿಗಳನ್ನು ನೇಮಿಸಿ ಸೆ.24ರಂದು ಆಯ್ಕೆ ನಿಗದಿ ಮಾಡಲಾಗಿತ್ತು. ನಂತರ ಅದಕ್ಕೂ ನ್ಯಾಯಾಲಯದಿಂದ ತಡೆ ಬಂದಿತ್ತು.  

Advertisement

ಈ ಹಿಂದೆಯೂ ಇತ್ತು 
ಇಂತಹ ಮೀಸಲಾತಿ ಬಂದುದು ಇದೇ ಮೊದಲಲ್ಲ. ಈ ಹಿಂದೆಯೂ ಬಂದಿತ್ತು. 2013ರಲ್ಲಿ ಬಿಜೆಪಿ ಬಹುಮತ ಇದ್ದಾಗ ಪರಿಶಿಷ್ಟ ಜಾತಿ ಮಹಿಳೆಗೆ ಅಧ್ಯಕ್ಷತೆ ಮೀಸಲಾತಿ ಬಂದಿತ್ತು. ಆಡಳಿತ ಸಿಪಿಐಎಂ ಪಾಲಾಗಿತ್ತು. ಅದಾದ ಬಳಿಕ 2016ರಲ್ಲಿ ಕೂಡಾ ಹಿಂದುಳಿದ ವರ್ಗ “ಎ’ ಮಹಿಳೆಗೆ ಅಧ್ಯಕ್ಷ ಮೀಸಲಾತಿ ಬಂದಿತ್ತು. ಆಗಲೂ ಬಿಜೆಪಿಗೆ ಪೂರಕ ವಾತಾವರಣ ಇರಲಿಲ್ಲ. ಆದರೆ ಮಾಜಿ ಸಚಿವ, ಮಾಜಿ ಸಂಸದ ಜಯಪ್ರಕಾಶ್‌  ಹೆಗ್ಡೆ ಅವರು ಬಿಜೆಪಿಗೆ ಬಂದಾಗ ಅವರ ಜತೆಗಿದ್ದ ನಾಲ್ವರು ಸದಸ್ಯರನ್ನು ಬಿಜೆಪಿಗೆ ಬರಮಾಡಿಕೊಂಡು ಅಧ್ಯಕ್ಷತೆ ನೀಡಲಾಗಿತ್ತು. 

ಮೀಸಲಾತಿ ಬದಲಾಗಿದ್ದರೂ ರೋಸ್ಟರ್‌ ಪದ್ಧತಿಗೆ ಅಡಚಣೆಯಾಗಿಲ್ಲ. ಇಲ್ಲಿನ ಪುರಸಭೆಯಲ್ಲಿ ಹಿಂದುಳಿದ ವರ್ಗ ಬಿ ಮಹಿಳಾ ಮೀಸಲಾತಿ ಈವರೆಗೆ ಬಂದಿಲ್ಲ. ಆದ್ದರಿಂದ ಸಂವಿಧಾನಾತ್ಮಕ ಹಕ್ಕಾದ ಮೀಸಲಾತಿ ಕುರಿತು ಟೀಕೆ ಸಲ್ಲ ಎನ್ನುತ್ತಾರೆ ಕಾಂಗ್ರೆಸ್‌ನವರು. ಬಹುಮತ ಇದ್ದ ಪಕ್ಷಕ್ಕೆ ಆಡಳಿತ ನಡೆಸುವಂತಾಗಬೇಕಾದ್ದೇ ಸಂವಿಧಾನ ಎನ್ನುತ್ತಾರೆ ಬಿಜೆಪಿಯವರು. ಒಟ್ಟಿನಲ್ಲಿ ಚುನಾವಣೆಯಲ್ಲಿ ಗೆದ್ದು 40 ದಿನಗಳ ಬಳಿಕ ಅಧಿಕಾರ ಚಲಾಯಿಸಲು ಸಿದ್ಧತೆ ನಡೆಸಬೇಕಿದೆ. ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಇನ್ನೆಷ್ಟು ಸಮಯ ಕಾಯಬೇಕು ಎಂದು ಸದಸ್ಯರು ಕೇಳುತ್ತಿದ್ದಾರೆ. 

ಹಿಂಬಾಗಿಲ ಅಧಿಕಾರ
ಒಟ್ಟು 23 ಸ್ಥಾನಗಳಲ್ಲಿ ಬಿಜೆಪಿ 14, ಕಾಂಗ್ರೆಸ್‌ 8, ಪಕ್ಷೇತರ 1 ಸದಸ್ಯರ ಆಯ್ಕೆಯಾಗಿದೆ. ಹಳೆ ಮೀಸಲಾತಿ ಪ್ರಕಾರ ಅಧ್ಯಕ್ಷತೆಗೆ ಬಿಜೆಪಿಯಲ್ಲಿ 6 ಮಂದಿ, ಹೊಸ ಮೀಸಲಾತಿ ಪ್ರಕಾರ ಬಿಜೆಪಿಯಲ್ಲಿ  ಇಲ್ಲದೆ ಕಾಂಗ್ರೆಸ್‌ನಲ್ಲಿ ಮಾತ್ರ ಏಕೈಕ ಸದಸ್ಯರು ಅರ್ಹತೆ ಪಡೆದಿದ್ದರು. ಬಿಜೆಪಿಗೆ ಬಹುಮತ ಇದ್ದರೂ ಮೀಸಲಾತಿ ತರುವಲ್ಲಿ ಕಾಂಗ್ರೆಸ್‌ ಪಾತ್ರ ವಹಿಸಿ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯಲು ನೋಡಿತ್ತು. ಬಹುಮತ ಇರುವ ಪಕ್ಷಕ್ಕೆ ಅಧ್ಯಕ್ಷತೆ ದೊರೆಯದಂತೆ ಮಾಡಲಾಗಿದೆ ಎಂದು ಬಿಜೆಪಿಯವರು ಆರೋಪಿಸಿದ್ದರು. ಅಂತಹದ್ದೇನೂ ಇಲ್ಲ, ಮೀಸಲಾತಿ ಇಲ್ಲದ ವರ್ಗಕ್ಕೆ ನಿಗದಿ ಮಾಡಲಾಗಿತ್ತು ಎನ್ನುತ್ತಾರೆ ಕಾಂಗ್ರೆಸ್‌ನವರು.

4 ಸ್ಥಾನಗಳಷ್ಟೇ ಕಡಿಮೆ 
ನಮ್ಮ ನಿರೀಕ್ಷೆಯಷ್ಟು ಸ್ಥಾನ ಬಂದಿಲ್ಲ, 12 ಸ್ಥಾನಗಳು ಬರುವಲ್ಲಿ ಎಡವಿದ್ದೇವೆ. 4 ಸ್ಥಾನಗಳಷ್ಟೇ ಕಡಿಮೆ ಬಂದಿವೆ. ಹಾಗಂತ ಜನ ನಮ್ಮನ್ನು ತಿರಸ್ಕರಿಸಿದ್ದು ಅಲ್ಲವಲ್ಲ. 8 ಸ್ಥಾನಗಳು ಬಂದಿವೆಯಲ್ಲ !. 
– ಮಲ್ಯಾಡಿ ಶಿವರಾಮ ಶೆಟ್ಟಿ, 
ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು

ಒಮ್ಮತದ ಅಭ್ಯರ್ಥಿ
ನ್ಯಾಯಾಂಗ ವ್ಯವಸ್ಥೆ ಮೇಲೆ ಇಟ್ಟ ನಂಬಿಕೆ ಹುಸಿಯಾಗಿಲ್ಲ. ಸರಕಾರವೇ ಹಳೆ ಮೀಸಲಾತಿಗೆ ಬದ್ಧ ಎಂದಿದೆ. ಅಧ್ಯಕ್ಷತೆಗೆ ಆರು ಮಂದಿ ಕೂಡಾ ಅರ್ಹರೇ ಆದ ಕಾರಣ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು.
– ಕಾಡೂರು ಸುರೇಶ್‌ ಶೆಟ್ಟಿ, 
ಅಧ್ಯಕ್ಷರು, ಬಿಜೆಪಿ

Advertisement

Udayavani is now on Telegram. Click here to join our channel and stay updated with the latest news.

Next