ಹೊಸದಿಲ್ಲಿ: ಕರ್ನಾಟಕ – ಗೋವಾ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66ನ್ನು ಚತುಷ್ಪಥ ಹೆದ್ದಾರಿಯಾಗಿ ಪರಿವರ್ತಿಸುವ ಕಾರ್ಯ ಭರದಿಂದ ಸಾಗಿದ್ದು, ಕರ್ನಾಟಕ - ಗೋವಾ ಗಡಿಯಿಂದ ಕುಂದಾಪುರದವರೆಗಿನ ಕಾಮಗಾರಿ ಮುಕ್ತಾಯದ ಹಂತ ತಲುಪಿದೆ ಎಂದು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಈ ಕುರಿತಂತೆ ಫೇಸ್‌ಬುಕ್‌ನಲ್ಲಿ ಫೋಟೋ ಸಹಿತ ವಿವರಣೆ ನೀಡಿರುವ ಅವರು, “ಹೆದ್ದಾರಿಯ ಒಂದು ಬದಿಯಲ್ಲಿ ಪಶ್ಚಿಮ ಘಟ್ಟಗಳ ಸೌಂದರ್ಯ ಮತ್ತೊಂದು ಬದಿಯಲ್ಲಿ ಮನಮೋಹಕ ಅರಬಿ ಸಮುದ್ರವಿದೆ. ಇದರ ನಡುವೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರ ಕರ್ನಾಟಕ-ಗೋವಾ ಗಡಿಯಿಂದ ಕುಂದಾಪುರದವರೆಗಿನ ರಸ್ತೆಯ ಮೇಲ್ದರ್ಜೆಯ ಕಾಮಗಾರಿ ಬಹುತೇಕ ಮುಕ್ತಾಯದ ಹಂತ ತಲುಪಿದೆ.
187 ಕಿ.ಮೀ. ದೂರದ ಈ ಹೆದ್ದಾರಿಯ ಚತುಷ್ಪಥ ಕಾಮಗಾರಿ ಪೂರ್ಣಗೊಂಡ ಅನಂತರ ಪಶ್ಚಿಮ ಭಾರತ ಹಾಗೂ ದಕ್ಷಿಣ ಭಾರತವನ್ನು ಬೆಸೆ ಯುವ ಪ್ರಮುಖ ಸಂಪರ್ಕಕೊಂಡಿಯಾಗಲಿದೆ’ ಎಂದು ಬಣ್ಣಿಸಿದ್ದಾರೆ. ಈ ಹೆದ್ದಾರಿಯಲ್ಲಿ 45 ಕಿ.ಮೀ. ಸಣ್ಣಪುಟ್ಟ ದಿನ್ನೆಗಳನ್ನು ಹತ್ತಿಳಿಯುವಂಥ ಮಾರ್ಗಗಳಲ್ಲಿ ಸಾಗಿದರೆ, 24 ಕಿ.ಮೀ. ದೂರದ ಹೆದ್ದಾರಿಯು ಪರ್ವತವನ್ನು ಕೊರೆದು ಮಾಡಲಾಗಿರುವ ದಾರಿಯಲ್ಲಿ ಸಾಗುತ್ತದೆ. ಈ ಇಡೀ ಯೋಜನೆಯು ಡಿಸೆಂಬರ್‌ನೊಳಗೆ ಪೂರ್ಣಗೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.
ಹಲವು ನಗರಗಳಿಗೆ ಸಂಪರ್ಕ: ಈ ಹೆದ್ದಾರಿ ಮೇಲ್ದರ್ಜೆಗೇರಿದ ಅನಂತರ ಕನ್ಯಾಕುಮಾರಿ, ತಿರುವನಂತಪುರ, ಕೊಚ್ಚಿ, ಕೋಯಿಕ್ಕೋಡ್, ಮಂಗಳೂರು, ಸುರತ್ಕಲ್, ಉಡುಪಿ, ಕಾರವಾರ, ಮಾರ್ಗೋವಾ, ಪಣಜಿ, ರತ್ನಾಗಿರಿ, , ಪನ್ವೆಲ್ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ವಿಶ್ವದರ್ಜೆಯ ಅನುಭವ
ಈ ರಸ್ತೆಯಲ್ಲಿ ಪ್ರಯಾಣಿಸುವ ಪಯಣಿ ಗರಿಗೆ ವಿಶ್ವ ದರ್ಜೆಯ ಸಾರಿಗೆ ಅನುಭೂತಿ ಉಂಟಾಗಲಿದೆ ಎಂದು ಗಡ್ಕರಿ ಭರವಸೆ ನೀಡಿದ್ದಾರೆ. ಈ ಹೆದ್ದಾರಿಯನ್ನು ವಾಣಿಜ್ಯ ಹಾಗೂ ಕೈಗಾರಿಕ ಸ್ನೇಹಿಯನ್ನಾಗಿಯೂ ರೂಪಿಸಲಾಗಿದೆ. ಅದರಿಂದ ಹೆದ್ದಾರಿಗೆ ಸಮೀಪದಲ್ಲಿರುವ ನಗರಗಳು, ಊರುಗಳ ಯುವ ಜನತೆಗೆ ನೇರ ಹಾಗೂ ಪರೋಕ್ಷ ಉದ್ಯೋಗಗಳು ಲಭಿಸುತ್ತವೆ ಎಂದು ಸಚಿವರು ತಿಳಿಸಿದ್ದಾರೆ.