Advertisement

ಕುದ್ರು ನಿವಾಸಿಗಳಿಗೆ ಮತದಾನ ದಾರಿ ದೂರ

06:45 AM May 08, 2018 | |

ಕುಂದಾಪುರ: ಮತದಾನ ಪ್ರಮಾಣ ಹೆಚ್ಚಾಗಬೇಕು ಎಂದು ಚುನಾವಣಾ ಆಯೋಗ ಏನೆಲ್ಲ ಪ್ರಯೋಗಗಳನ್ನು ಮಾಡುತ್ತಿದೆ.
ಆದರೆ ಕುದ್ರು ನಿವಾಸಿಗಳ ಸಮಸ್ಯೆಗೆ ಇನ್ನೂ ಪರಿಹಾರ ದೊರೆತಿಲ್ಲ. ಕುಂದಾಪುರ ಹಾಗೂ ಬೈಂದೂರು ಕ್ಷೇತ್ರಗಳಲ್ಲಿ 10ಕ್ಕಿಂತ ಅಧಿಕ ಕುದ್ರು ಗಳಿದ್ದು, ಅಲ್ಲಿನ ಸುಮಾರು 4 ಸಾವಿರದಷ್ಟು ಮತದಾರರಿಗೆ ಚುನಾವಣೆಯಲ್ಲಿ ಭಾಗವಹಿಸುವ ಉತ್ಸಾಹ ಮೂಡಿಸ ಬೇಕಿದೆ. 

Advertisement

ಕುದ್ರುಗಳು
ಸುತ್ತಲೂ ಹಿನ್ನೀರು ಅಥವಾ ನದಿಯಿಂದ ಆವೃತವಾಗಿ ದ್ವೀಪದಂತಿ ರುವ ಕುದ್ರುಗಳಲ್ಲಿ ಭರ್ತಿ ಜನವಸತಿ ಯಿದೆ. ಪ್ರತೀ ಕುದ್ರುವಿನಲ್ಲಿ ಸುಮಾರು 50ರಿಂದ 400ರಷ್ಟು ಮಂದಿ ಇದ್ದಾರೆ. ಈ ಪೈಕಿ ಅರ್ಹ ಮತದಾರರೆಲ್ಲರೂ ಮತದಾನದಲ್ಲಿ ಭಾಗವಹಿಸಬೇಕೆಂಬ ಮಹದಿಚ್ಛೆ ಹೊಂದಿದ್ದಾರೆ. ಆದರೆ ಮತದಾನ ಕೇಂದ್ರ ತಲುಪುವುದೇ ಇವರಿಗೆ ಇರುವ ಸಮಸ್ಯೆ.

ಸಾರಿಗೆ ಸಮಸ್ಯೆ
ಕುದ್ರುಗಳಿಗೆ ಸೂಕ್ತ ಸೇತುವೆಗಳ ಸಂಪರ್ಕ ಇಲ್ಲದ ಕಾರಣ ಅವರು ದೋಣಿಯನ್ನೇ ಆಶ್ರಯಿಸಬೇಕು. ಬಹುತೇಕ ಎಲ್ಲ ಕುದ್ರುಗಳಲ್ಲೂ ಒಂದೊಂದೇ ದೋಣಿ ಇರುವ ಕಾರಣ ಅದೆಷ್ಟು ಮಂದಿ ಪ್ರಯಾಣಿಸಿ ಮತದಾನ ಕೇಂದ್ರ ತಲುಪುವುದು ಎಂಬ ಚಿಂತೆ ಅಲ್ಲಿನ ಜನರದು. ರಸ್ತೆ ಸಾರಿಗೆ ಅವಲಂಬಿಸಬಹುದು, ಆದರೆ ಅದು ಸುತ್ತುಬಳಸು. ಅದಕ್ಕೆ ವೆಚ್ಚವೂ ಹೆಚ್ಚು. ದೋಣಿಗೆ 5 -10 ರೂ. ನೀಡಿದರೆ ಸಾಕಾಗುತ್ತದೆ. ರಸ್ತೆ ಮೂಲಕವಾದರೆ ಒಬ್ಬೊಬ್ಬರೂ ಕನಿಷ್ಠ 50, 100 ರೂ. ವ್ಯಯಿಸಬೇಕು. ಹೀಗಾಗಿ ಕುದ್ರು ವಾಸಿಗಳು ಮತ ದಾನದಲ್ಲಿ ಭಾಗವಹಿಸಲು ಹಿಂದೇಟು ಹಾಕುವ ಸ್ಥಿತಿ ಇದೆ. ನೀರ ನಡುವಿನ ಬದುಕಿನ ಮಂದಿಗೆ ಮತದಾನ ಮಾಡುವ ಸುಲಭದ ದಾರಿ ಈವರೆಗೂ ಲಭ್ಯವಾಗಿಲ್ಲ. 

ಎಲ್ಲೆಲ್ಲಿ ?
ಕುಂದಾಪುರ ಕ್ಷೇತ್ರದಲ್ಲಿ ಬಸ್ರೂರು ಗ್ರಾ. ಪಂ. ವ್ಯಾಪ್ತಿಯ ಹಟ್ಟಿಕುದ್ರು, ಆನಗಳ್ಳಿ ಗ್ರಾಮದ ಅಮೊYàಲ್‌ ಕುದ್ರು, ಕೋಟ ಹೋಬಳಿಯ ಐಒಡಿ ಗ್ರಾಮದ ಕಿಣಿಯವರ ಕುದ್ರು, ಸೂಲ್‌ಕುದ್ರು, ನಂದನ ಕುದ್ರು, ರಾಮಣ್ಣನ ಕುದ್ರು, ಸಾಯºರ ಕುದ್ರು, ಕೋಡಿ ಹಿನ್ನೀರು ಕುದ್ರು, ಬೈಂದೂರು ತಾಲೂಕಿನ ನಾವುಂದ ಗ್ರಾಮದಲ್ಲಿ ಸಾಲ್ಪುಡ, ಮರವಂತೆ ಗ್ರಾಮದಲ್ಲಿ ಕುರು, ಹೆಮ್ಮಾಡಿ ಗ್ರಾಮದಲ್ಲಿ ಪಡುಕುದ್ರು ಮೊದಲಾದ ಕುದ್ರುಗಳಲ್ಲಿ ದೋಣಿಯೇ ಅನಿವಾರ್ಯ. ಇಲ್ಲ ದಿದ್ದರೆ ದೂರದಾರಿಯ ಸಾರಿಗೆ. ಇಲ್ಲಿಗೆ ಮತಯಾಚನೆಗೆ ಬರುವವರು ಕೂಡ ವಾಹನವಾದರೆ ದೂರದ ದಾರಿಯಲ್ಲಿ, ಸ್ಥಳೀಯರಾದರೆ ದೋಣಿ ಮೂಲಕವೇ ಬಂದು ಮತಯಾಚನೆ ನಡೆಸುತ್ತಾರೆ.

ಪರಿಶೀಲಿಸಿ ಕ್ರಮ: ಎಸಿ
ಕುದ್ರುಗಳಲ್ಲಿ ಜನತೆಗೆ ಮತದಾನ ಮಾಡಲು ಸಮಸ್ಯೆ ಯಾಗಿರುವುದು ಗಮನಕ್ಕೆ ಬಂದಿಲ್ಲ. ತತ್‌ಕ್ಷಣ ಈ ಬಗ್ಗೆ ಗಮನ ಹರಿಸಲಾಗುವುದು. ಕುಂದಾಪುರ ಕ್ಷೇತ್ರದ ವ್ಯಾಪ್ತಿಯ ಕುದ್ರುಗಳ ಮತದಾರರಿಗೆ ಮತಗಟ್ಟೆ ಕೇಂದ್ರಕ್ಕೆ ತೆರಳಲು ನಮ್ಮ ವತಿಯಿಂದಲೇ ವಾಹನ ಕಳುಹಿಸುವ ಏರ್ಪಾಟು ಮಾಡಲಾಗುವುದು. ಮತದಾನ ಪ್ರಮಾಣ ಹೆಚ್ಚಳಕ್ಕೆ ಇಲ್ಲಿ ಏನು ಅಗತ್ಯ ಕ್ರಮ ಕೈಗೊಳ್ಳಬೇಕೋ ಅದನ್ನು ಅಧಿಕಾರಿಗಳ ಮೂಲಕ ಮಾಡಲಾಗುವುದು. 
– ಟಿ. ಭೂಬಾಲನ್‌, ಸಹಾಯಕ ಆಯುಕ್ತರು, ಚುನಾವಣಾಧಿಕಾರಿ, ಕುಂದಾಪುರ

Advertisement

ಸುತ್ತು ಬಳಸಿ ಹೋಗಬೇಕು
ಎಲ್ಲರೂ ತಟ್ಟೆಯಿಂದ ನೇರ ತೆಗೆದು ಬಾಯಿಗಿಟ್ಟರೆ ನಾವು ತಟ್ಟೆಯಿಂದ ತುತ್ತು ತೆಗೆದು ತಲೆಗೊಂದು ಸುತ್ತು ಹಾಕಿ ಬಾಯಿಗೆ ತರಬೇಕು, ಹೀಗಿದೆ ನಮ್ಮ ಪ್ರಯಾಣದ ಅವಸ್ಥೆ. ಹತ್ತಿರದ ದಾರಿ, ಬೇಗನೇ ತಲುಪಲು ಇರುವ ಏಕೈಕ ಮಾಧ್ಯಮ ದೋಣಿ ಮಾತ್ರ. 
– ಪದ್ಮನಾಭ ಪೂಜಾರಿ, ಗುಜ್ಜಾಡಿ ಮನೆ, ಹಟ್ಟಿಕುದ್ರು ನಿವಾಸಿ

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next