Advertisement

ಕುಂದಾಪುರ: ಹಡಿಲು ಭೂಮಿ ಹಸನಾಗಿಸಿದ ಯುವಪಡೆ

11:39 PM Jun 22, 2020 | Sriram |

ಕುಂದಾಪುರ: ಭತ್ತದ ಬೇಸಾಯ ಕ್ಷೀಣಿಸುತ್ತಿದ್ದು, ಅನ್ನದ ಬಟ್ಟಲುಗಳಾಗಿದ್ದ ಕರಾವಳಿಯ ಗದ್ದೆಗಳು ಈಗ ಹಡಿಲು ಬಿದ್ದಿವೆ. ಇದಕ್ಕೆ ಯುವ ಸಮೂಹ ಕೃಷಿಯಿಂದ ವಿಮುಖವಾಗುತ್ತಿರುವುದು ಸಹಿತ ಹಲವು ಕಾರಣಗಳಿವೆ.

Advertisement

ಈಗ ಪಡುಕೋಣೆಯ ಡಿವೈಎಫ್‌ಐ ಘಟಕದ ಯುವಕರ ತಂಡವೊಂದು ಕೃಷಿಯತ್ತ ಯುವ ಸಮುದಾಯವನ್ನು ಆಕರ್ಷಿಸಬೇಕು, ಹಡಿಲು ಭೂಮಿಯನ್ನು ಹಸನು ಮಾಡಬೇಕು ಎನ್ನುವ ಸದುದ್ದೇಶದಿಂದ ಊರವರ ಸಹಕಾರದೊಂದಿಗೆ ಹಡಿಲು ಭೂಮಿಯಲ್ಲಿ ಸಾಗುವಳಿ ಮಾಡುವ ಯೋಜನೆಯನ್ನು ಕಾರ್ಯ ರೂಪಕ್ಕಿಳಿಸಿ ಮಾದರಿ ಯಾಗಿದೆ.

ಈ ತಂಡವು ಕಳೆದ ವರ್ಷ ಮೊದಲ ಬಾರಿಗೆ ಸಣ್ಣದಾಗಿ ಪ್ರಯತ್ನ ಮಾಡಿದ್ದು, ಅದು ಯಶಸ್ವಿಯಾದ ನಿಟ್ಟಿನಲ್ಲಿ ಈಗ ದೊಡ್ಡ ಮಟ್ಟದಲ್ಲಿ ಗದ್ದೆಗಿಳಿಯುವ ಸಂಕಲ್ಪ ಮಾಡಿದೆ. ಸುಮಾರು 50ಕ್ಕೂ ಹೆಚ್ಚು ಮಹಿಳೆಯರು ನಾಟಿ ಕಾರ್ಯದಲ್ಲಿ ಭಾಗಿಯಾದರು.

3 ಎಕ್ರೆ ಪ್ರದೇಶದಲ್ಲಿ ನಾಟಿ
ಪಡುಕೋಣೆಯ ಸುತ್ತಮುತ್ತಲಿನ ಪರಿಸರದಲ್ಲಿ ನಾನಾ ಕಾರಣಗಳಿಂದಾಗಿ ಕಳೆದ 7-8 ವರ್ಷಗಳಿಂದ ಸುಮಾರು 5 ಮುಡಿ (3 ಎಕರೆ)ಯಷ್ಟು ಗದ್ದೆಗಳು ಹಡಿಲು ಬಿದ್ದಿದ್ದವು. ಈ ತಂಡವು ಗದ್ದೆಗಳ ಮಾಲಕರನ್ನು ಸಂಪರ್ಕಿಸಿ, ಅನುಮತಿ ಪಡೆದು, ವೈಜ್ಞಾನಿಕವಾಗಿ ಮಣ್ಣು ಪರೀಕ್ಷೆ ನಡೆಸಿ, ಅಗತ್ಯ ಪೋಷಕಾಂಶಗಳನ್ನು ಬಳಸಿ, ವೈಜ್ಞಾನಿಕ ಹಾಗೂ ಸಾಂಪ್ರದಾಯಿಕ ಪದ್ಧತಿಯಿಂದ ಸಾಲು ನಾಟಿ ಮಾಡಲಾಯಿತು.

ಪಡುಕೋಣೆ ವ್ಯ. ಸೇ. ಸ. ಸಂಘದ ಅಧ್ಯಕ್ಷ ರಾಜೀವ ಪಡುಕೋಣೆ, ನಾಡ ಗ್ರಾ.ಪಂ. ಸದಸ್ಯರಾದ ರಾಜೇಶ ಪಡುಕೋಣೆ, ಡಿವೈಎಫ್‌ಐ ಪಡುಕೋಣೆ ಘಟಕದ ಅಧ್ಯಕ್ಷ ನಾಗರಾಜ ಕುರು, ಕಾರ್ಯದರ್ಶಿ ಕಿರಣ್‌ ಪಡುಕೋಣೆ, ಸದಸ್ಯರು ಉಪಸ್ಥಿತರಿದ್ದರು.

Advertisement

ಉತ್ಸಾಹ, ಸಂಭ್ರಮ
ರವಿವಾರ ಬೆಳಗ್ಗಿನಿಂದಲೇ ಇಲ್ಲಿನ ಮಾರಸ್ವಾಮಿ ದೇವಸ್ಥಾನದ ಹಿಂಭಾಗದ ವಿಶಾಲ ಗದ್ದೆಯಲ್ಲಿ ಜನಜಂಗುಳಿ. ಟಿಲ್ಲರ್‌ಗಳು ಉಳುಮೆ ಮಾಡುತ್ತಿದ್ದರೆ, ಮತ್ತೂಂದೆಡೆ ನಾಟಿ ಮಾಡುವ ಮಹಿಳೆಯರ ಸಾಲು. ಇದು ಹಿಂದಿನ ಕಂಬಳಗದ್ದೆ ನಾಟಿಯ ನೆನಪನ್ನು ಮೆಲುಕು ಹಾಕಿತ್ತು.

ಕೃಷಿಗೆ ಉತ್ತೇಜನ ಉದ್ದೇಶ
ಯುವಜನರನ್ನು ಕೃಷಿಯತ್ತ ಸೆಳೆಯಬೇಕು ಎನ್ನುವುದು ನಮ್ಮ ಉದ್ದೇಶ. ಆ ನೆಲೆಯಲ್ಲಿ ನಮ್ಮ ತಂಡ ಕಳೆದ ವರ್ಷದಿಂದ ಈ ಪ್ರಯತ್ನ ಮಾಡುತ್ತಿದೆ. ಹಡಿಲು ಬಿದ್ದಿರುವ ಭತ್ತದ ಗದ್ದೆಗಳನ್ನು ಕೃಷಿಗೆ ಸಿದ್ಧಪಡಿಸಿ ಕಳೆದ ವರ್ಷ ನಾಟಿ ಮಾಡಿದೆವು. ಅದೇ ಸ್ಫೂರ್ತಿಯಿಂದ ಈ ವರ್ಷವೂ ಅದನ್ನು ಮುಂದುವರಿಸಿದ್ದೇವೆ. ಪಡುಕೋಣೆ ಡಿವೈಎಫ್‌ಐಯ ಸದಸ್ಯರು, ಊರವರು ಇದರಲ್ಲಿ ಸಂತೋಷದಿಂದ ಪಾಲ್ಗೊಂಡಿದ್ದಾರೆ. -ನಾಗರಾಜ ಕುರು, ಅಧ್ಯಕ್ಷರು, ಡಿವೈಎಫ್‌ಐ ಪಡುಕೋಣೆ ಘಟಕ

Advertisement

Udayavani is now on Telegram. Click here to join our channel and stay updated with the latest news.

Next