ಚಿಂಚೋಳಿ: ತೆಲಂಗಾಣ ಗಡಿಪ್ರದೇಶಕ್ಕೆ ಹೊಂದಿಕೊಂಡಿರುವ, ಶೈಕ್ಷಣಿಕವಾಗಿ ಹಿಂದು ಳಿದ ಪ್ರದೇಶ ಕುಂಚಾವರಂದಲ್ಲಿ ಪದವಿ ಪೂರ್ವ ಕಾಲೇಜು ಮಂಜೂರಿ ಮಾಡಬೇಕು ಎಂದು ಆಗ್ರಹಿಸಿ ಕುಂಚಾವರಂ ಗ್ರಾಮಸ್ಥರು ತಾಂಡೂರ-ಜಹಿರಾಬಾದ ರಾಜ್ಯ ಹೆದ್ದಾರಿಯಲ್ಲಿ ರಸ್ತೆತಡೆ, ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕುಂಚಾವರಂ ಗ್ರಾಮದ ಡಾ| ಬಿ.ಆರ್. ಅಂಬೇಡ್ಕರ್ ಸರ್ಕಲ್‌ದಲ್ಲಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯ ನರಸಿಂಹಲು ಕುಂಬಾರ ಮಾತನಾಡಿ, ಕುಂಚಾವರಂ ಗಡಿಪ್ರದೇಶವು ಸರ್ಕಾರದ ಮೂಲಭೂತ ಸೌಲಭ್ಯಗಳಿಂದ ಕಳೆದ 60 ವರ್ಷಗಳಿಂದ ವಂಚಿತವಾಗುತ್ತಲೆ ಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗಡಿಪ್ರದೇಶದಲ್ಲಿ ಅನಕ್ಷರತೆ, ಬಡತನವಿದೆ. ಹೆಣ್ಣು ಹಸುಗೂಸು ಮಾರಾಟ ಪ್ರಕರಣಗಳು ಕುಂಚಾವರಂದಲ್ಲಿ ಈ ಹಿಂದೆ ನಡೆದಿವೆ. ಇದಕ್ಕೆ ಮುಖ್ಯ ಕಾರಣ ಶೈಕ್ಷಣಿಕ ಪ್ರಗತಿ ನಿರೀಕ್ಷೆಗೆ ತಕ್ಕಂತೆ ಆಗದೇ ಇರುವುದು. ಕುಂಚಾವರಂ ಜಿಪಂ, ತಾಪಂ, ಗ್ರಾಪಂ ಕೇಂದ್ರ ಸ್ಥಾನವಾಗಿದೆ.ಪೊಲೀಸ್ ಠಾಣೆ, ಸಮುದಾಯ ಆರೋಗ್ಯ ಕೇಂದ್ರ, ವನ್ಯಜೀವಿಧಾಮ, ಅರಣ್ಯ ಇಲಾಖೆ, ಸರ್ಕಾರಿ ಐಟಿಐ ಕಾಲೇಜು, ವಿದ್ಯುತ್ ವಿತರಣೆ ಕೇಂದ್ರ, ಪಶು ಆಸ್ಪತ್ರೆ ಈ ಗ್ರಾಮದಲ್ಲಿವೆ. ಕುಂಚಾವರಂ ಗಡಿಪ್ರದೇಶ 30 ತಾಂಡಾ, ಗ್ರಾಮಗಳನ್ನು ಒಳಗೊಂಡಿದೆ. ಹೀಗಾಗಿ ಸರ್ಕಾರಿ ಕಾಲೇಜು ಒದಗಿಸಬೇಕು ಎಂದು ಎರಡು ದಶಕಗಳಿಂದಲೂ ಒತ್ತಾಯಿಸುತ್ತಾ ಬರಲಾಗಿದೆ. ಆದರೂ ಬೇಡಿಕೆ ಈಡೇರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಲೇಜು ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು 30 ಕಿ.ಮೀ ದೂರದಲ್ಲಿರುವ ಚಿಂಚೋಳಿಗೆ ಹೋಗಿಬರಬೇಕಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಕಾಲೇಜು ಮಂಜೂರಿ ಮಾಡಬೇಕು ಎಂದು ಆಗ್ರಹಿಸಿದರು.
ಮುಖಂಡ ಜನಾರ್ಧನ ಪಾಟೀಲ ಮಾತನಾಡಿ, ಶಾದೀಪುರ, ಕುಂಚಾವರಂ ಪ್ರೌಢಶಾಲೆಗಳಲ್ಲಿ 400 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಓದುತ್ತಿದ್ದಾರೆ. ಆದ್ದರಿಂದ ಕಾಲೇಜು ಮಂಜೂರಿಗೆ ಕೇಂದ್ರ ಸಚಿವ ಭಗವಂತ ಖೂಬಾ, ಕಲಬುರಗಿ ಸಂಸದ ಡಾ| ಉಮೇಶ ಜಾಧವ, ಶಾಸಕ ಡಾ| ಅವಿನಾಶ ಜಾಧವ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಕಂದಾಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಜಗನ್ನಾಥ, ಸಲೀಂ, ಮೌಲಾನಾ, ಚಂಟಿ, ಮೊಗಡು ಜನಾರ್ಧನ, ಎ. ಶ್ರೀನಿವಾಸ, ಮಲ್ಲೇಶಂ, ಬಿಚ್ಚಪ್ಪ, ಅರ್ಜುನ ಶಿವರಾಮಪುರ ಇನ್ನಿತರು ಪಾಲ್ಗೊಂಡಿದ್ದರು.