ಹೊಸದಿಲ್ಲಿ : ಕರ್ನಾಟಕದಲ್ಲೀಗ ಅಧಿಕಾರರೂಢವಾಗಿರುವ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುವ ವಿಷಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಲ್ಲಿ ವಾಕ್ಸಮರ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಅವರಿಂದು ಸೋಮವಾರ ದಿಲ್ಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾದರು.
ರಾಹುಲ್ ಜತೆಗಿನ ಭೇಟಿಯ ವೇಳೆ ಕುಮಾರಸ್ವಾಮಿ ಅವರೊಂದಿಗೆ ಹಿರಿಯ ಜೆಡಿಎಸ್ ನಾಯಕ ದಾನಿಶ್ ಅಲಿ ಮತ್ತು ಕೆ ಸಿ ವೇಣುಗೋಪಾಲ್ ಅವರು ಕೂಡ ಉಪಸ್ಥಿತರಿದ್ದರು.ರಾಹುಲ್ ಜತೆಗಿನ ಈ ಭೇಟಿಯ ವಿವರಗಳು ಇನ್ನಷ್ಟೇ ಗೊತ್ತಾಗಬೇಕಿದೆ.
ಹಾಗಿದ್ದರೂ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ ಅವರು “ನಮ್ಮದು ಸೌಹಾರ್ದದ ಭೇಟಿಯಾಗಿತ್ತು. ಕರ್ನಾಟಕದಲ್ಲಿನ ಸಮ್ಮಿಶ್ರ ಸರಕಾರಕ್ಕೆ ಸಂಪೂರ್ಣ ಬೆಂಬಲ ಕೊಡುವುದಾಗಿ ರಾಹುಲ್ ಗಾಂಧಿ ಭರವಸೆಕೊಟ್ಟರು” ಎಂದು ಹೇಳಿದರು.
ಸಮ್ಮಿಶ್ರ ಸರಕಾರದ ಸಿಎಂ ಕುಮಾರಸ್ವಾಮಿ ಹೊಸ ಬಜೆಟ್ ಮಂಡಿಸುವುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಈಚೆಗೆ ತೀವ್ರ ಆಕ್ಷೇಪ ಎತ್ತಿದ್ದರು; ಕೇವಲ ಪೂರಕ ಬಜೆಟ್ ಸಾಕು; ಪೂರ್ಣ ಪ್ರಮಾಣದ ಹೊಸ ಬಜೆಟ್ ಅಗತ್ಯವಿಲ್ಲ ಎಂದು ಹೇಳಿದ್ದರು.
ಸಿದ್ಧರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ಎಂಬಂತೆ ದಿಲ್ಲಿಯಲ್ಲಿ ಕುಮಾರಸ್ವಾಮಿ, “ಹೊಸ ಸಮ್ಮಿಶ್ರ ಸರಕಾರದ ಧ್ಯೇಯೋದ್ದೇಶಗಳು ಏನೆಂಬುದನ್ನು ಜನರಿಗೆ ತಿಳಿಸುವ ಸಲುವಾಗಿ ಹೊಸ ಬಜೆಟ್ ಮಂಡನೆಯ ಅಗತ್ಯವಿದೆ’ ಎಂದು ಹೇಳಿದರು.