Advertisement

ಕೂಳೂರು ರಾ.ಹೆದ್ದಾರಿ: ಷಟ್ಪಥ ಸೇತುವೆ ಕಾಮಗಾರಿ ಚುರುಕು

09:50 PM Sep 26, 2021 | Team Udayavani |

ಮಹಾನಗರ: ನಗರದ ಕೂಳೂರಿನಲ್ಲಿ ರಾ.ಹೆದ್ದಾರಿ 66ರಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿರುವ 69 ವರ್ಷಗಳ ಹಳೆಯ ಕಮಾನು ಸೇತುವೆಯ ಪಕ್ಕದಲ್ಲಿ ಆರು ಪಥಗಳ ಮಂಗಳೂರಿನ ಮೊದಲ ಅತ್ಯಂತ ಅಗಲದ ಸೇತುವೆ ನಿರ್ಮಾಣ ಕಾಮಗಾರಿ ಇದೀಗ ಚುರುಕು ಪಡೆದುಕೊಂಡಿದೆ.

Advertisement

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ಮೂಲಕ 69.02 ಕೋ.ರೂ. ವೆಚ್ಚದಲ್ಲಿ 182.50 ಮೀ. ಉದ್ದದ ಸೇತುವೆ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಪುಣೆ ಮೂಲದ ಗುತ್ತಿಗೆದಾರ ಸಂಸ್ಥೆ ಕಾಮಗಾರಿ ನಡೆಸುತ್ತಿದ್ದು, ಫೈಲ್‌ ಫೌಂಡೇಶನ್‌ ಮಾದರಿಯಲ್ಲಿ ಕಾಮ ಗಾರಿ ಕೈಗೊಳ್ಳಲಾಗಿದೆ. ಸದ್ಯ ಇರುವ ಎರಡು ಏಕಮುಖ ಸೇತುವೆಯ ಮಧ್ಯೆ ಹೊಸದಾಗಿ 6 ಲೇನ್‌ನಲ್ಲಿ ಸೇತುವೆ ನಿರ್ಮಾಣ ಈಗಾಗಲೇ ಶೇ.20ರಷ್ಟು ಮುಕ್ತಾಯವಾಗಿದೆ. ಕಳೆದ ವರ್ಷ ಡಿ. 19ರಂದು ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ಅವರು ವೀಡಿಯೋ ಕಾನ್ಫರೆನ್ಸ್‌ ಮೂಲಕ ಈ ಯೋಜನೆಗೆ ಶಿಲಾನ್ಯಾಸ ನಡೆಸಿದ್ದರು. 18 ತಿಂಗಳುಗಳೊಳಗೆ ಕಾಮಗಾರಿ ಪೂರ್ಣವಾಗಲಿದೆ.

ಗರಿಷ್ಠ ಮುನ್ನೆಚ್ಚರಿಕೆ ಅಗತ್ಯ
ಕೂಳೂರು ಹೊಸ ಸೇತುವೆ ನಿರ್ಮಾಣ ಸಂದರ್ಭ ಗರಿಷ್ಠ ಸುರಕ್ಷೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಈಗಾಗಲೇ ಮರವೂರು ಹಳೆ ಸೇತುವೆ ಬಳಿಯಲ್ಲಿ ಹೊಸ ಸೇತುವೆಯ ಕಾಮಗಾರಿ ನಡೆಯುವ ವೇಳೆ ನದಿಗೆ ಮಣ್ಣು ಹಾಕುವ ಸಂದರ್ಭ ಒತ್ತಡದಿಂದಾಗಿ ಸೇತುವೆಯ ಒಂದು ಬದಿಯಲ್ಲಿ ಬಿರುಕು ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು. ಕೂಳೂರಿನಲ್ಲಿಯೂ ನದಿಗೆ ಮಣ್ಣುಹಾಕಿ ಕಾಮಗಾರಿ ನಡೆಸುವುದು ಹಾಗೂ 2 ಸೇತುವೆಯ ಮಧ್ಯೆ ಕಾಮಗಾರಿ ಆಗುವುದರಿಂದ ಗರಿಷ್ಠ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಜೆಡಿಎಸ್‌ ಹೆಸರಿಗಷ್ಟೇ ಜಾತ್ಯತೀತ, ಅವರದ್ದು ಅವಕಾಶವಾದಿ ರಾಜಕಾರಣ : ಸಿದ್ದರಾಮಯ್ಯ

1952ರ ಹಳೆಯ ಕಮಾನು ಸೇತುವೆ
ಕೂಳೂರಿನಲ್ಲಿರುವ ಹಳೆ ಕಮಾನು ಸೇತುವೆ 1952ರ ಸೆಪ್ಟಂಬರ್‌ 21ರಂದು ಆರಂಭ ವಾಗಿತ್ತು. ಈ ಸೇತುವೆಯನ್ನು ಮದ್ರಾಸ್‌ ಪ್ರಾಂತ್ಯದ ಸಾರ್ವಜನಿಕ ಕಾರ್ಯ ವಿಭಾಗದ ಸಚಿವ ಎನ್‌. ರಂಗರೆಡ್ಡಿ ಉದ್ಘಾಟಿಸಿದ್ದರು. ಅನಂತರ ಹತ್ತಿರದ ಹೊಸ ಸೇತುವೆ ನಿರ್ಮಿಸಲಾಗಿತ್ತು. ಆದರೆ ಇತ್ತೀಚೆಗೆ ಖಾಸಗಿ ಸಂಸ್ಥೆಯೊಂದು ನಡೆಸಿದ ಸರ್ವೆಯ ಪ್ರಕಾರ ಕಮಾನು ಸೇತುವೆ ಪ್ರಯಾಣಕ್ಕೆ ಅಯೋಗ್ಯವಾಗಿದೆ ಎಂಬ ವರದಿ ನೀಡಿತ್ತು. ಆದರೂ ಈ ಸೇತುವೆಯನ್ನು ದುರಸ್ತಿ ಮಾಡಿ ಪ್ರಯಾಣ ಯೋಗ್ಯವನ್ನಾಗಿಸಲಾಗಿದೆ.

Advertisement

2018ರ ಪ್ರಸ್ತಾವನೆ
ಬಿ.ಸಿ. ರೋಡ್‌ ಹಾಗೂ ಸುರತ್ಕಲ್‌ ಮಧ್ಯೆ 8 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಗೆ ಷಟ್ಪಥ ಸೇತುವೆ ನಿರ್ಮಾಣಕ್ಕಾಗಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪ್ರಾಧಿ ಕಾರದಿಂದ 2018ರಲ್ಲಿ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅನಂತರ 2-3 ಬಾರಿ ತಿದ್ದುಪಡಿ ಬಳಿಕ ಕೂಳೂರು ಷಟ್ಪಥ ಸೇತುವೆ ನಿರ್ಮಾಣಕ್ಕೆ 2019ರ ಅಕ್ಟೋಬರ್‌ನಲ್ಲಿ ಸಲ್ಲಿಸಿದ್ದ ಪ್ರಸ್ತಾವನೆಗೆ ಮಂಜೂರಾತಿ ದೊರಕಿತ್ತು.

2 ಸರ್ವಿಸ್‌ ರಸ್ತೆ
ನೂತನವಾಗಿ ನಿರ್ಮಾಣವಾಗಲಿರುವ 3-3 ಏಕಮುಖ ಪಥಗಳ ಸೇತುವೆಯ ಪೂರ್ವ ಭಾಗದಲ್ಲಿ ಹಳೆಯ ಕಮಾನು ಸೇತುವೆ ಇದೆ. ಈ ಭಾಗಕ್ಕೆ ಹೊಸ ಸರ್ವಿಸ್‌ ಸೇತುವೆ ನಿರ್ಮಾಣವಾಗಲಿದೆ. ಪಶ್ಚಿಮ ಭಾಗದಲ್ಲಿ ಈಗಿರುವ ಸೇತುವೆಯನ್ನೇ ಸರ್ವಿಸ್‌ ರಸ್ತೆಯಾಗಿ ಬಳಕೆ ಮಾಡಲು ಹೆದ್ದಾರಿ ಇಲಾಖೆ ನಿರ್ಧರಿಸಿದೆ.

ಹಂತ ಹಂತವಾಗಿ ಕಾಮಗಾರಿ
ಕೂಳೂರಿನಲ್ಲಿ ಷಟ್ಪಥ ಸೇತುವೆ ನಿರ್ಮಾಣ ಯೋಜನೆಯ ಕಾಮಗಾರಿ ಈಗಾಗಲೇ ಆರಂಭಗೊಂಡು ಹಂತ ಹಂತವಾಗಿ ನಡೆಯುತ್ತಿದೆ. ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣವಾಗಲಿದೆ.
-ಶಿಶುಮೋಹನ್‌,
ಯೋಜನ ನಿರ್ದೇಶಕರು, ರಾ.ಹೆದ್ದಾರಿ ಪ್ರಾಧಿಕಾರ

Advertisement

Udayavani is now on Telegram. Click here to join our channel and stay updated with the latest news.

Next