Advertisement

ಕುಲಶೇಖರ-ಕಣ್ಣ ಗುಡ್ಡೆ  ರಸ್ತೆ ಅಭಿವೃದ್ಧಿ ಕಾಮಗಾರಿಗೆ ಇಂದು ಚಾಲನೆ

09:29 AM Feb 04, 2018 | |

ಮಹಾನಗರ: ನಾಲ್ಕು ದಶಕಗಳಿಂದ ರೈಲ್ವೇ ಇಲಾಖೆಯ ತಾಂತ್ರಿಕ ಕಾರಣಗಳಿಂದಾಗಿ ಅಭಿವೃದ್ಧಿ ಕಾಣದೆ ಕೇವಲ ಬೇಡಿಕೆಯಾಗಿ ಉಳಿದಿದ್ದ ನಗರದ ಕುಲಶೇಖರ- ಕಣ್ಣಗುಡ್ಡೆ ರಸ್ತೆಯ ಅಭಿವೃದ್ಧಿಗೆ ಚಾಲನೆ ದೊರೆಯಲಿದ್ದು, ಆರಂಭದಲ್ಲಿ 1 ಕಿ.ಮೀ. ಉದ್ದದ ರಸ್ತೆಯು 70 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿದೆ.

Advertisement

ರಸ್ತೆಯು ಡಾಮರು ರಸ್ತೆಯಾಗಿ ಅಭಿವೃದ್ಧಿಗೊಳ್ಳಲಿದ್ದು, ಫೆ. 4ರಂದು ಬೆಳಗ್ಗೆ 11ಕ್ಕೆ ಶಾಸಕ ಜೆ.ಆರ್‌. ಲೋಬೋ ಅವರ ನೇತೃತ್ವದಲ್ಲಿ ಇತರ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಶಿಲಾನ್ಯಾಸ ನೆರವೇರಲಿದೆ. ಮುಂದೆ ಸರಕಾರದ ವಿಶೇಷ ಅನುದಾನದಿಂದ ಸುಮಾರು 4 ಕಿ.ಮೀ. ಉದ್ದದ ರಸ್ತೆಯು 10 ಕೋ. ರೂ.ಗಳಲ್ಲಿ ಮೇಲ್ದರ್ಜೆಗೇರಲಿದ್ದು, ಕಣ್ಣ ಗುಡ್ಡೆ ರಸ್ತೆಯು ನೇರವಾಗಿ ಪಡೀಲ್‌- ಕಣ್ಣೂರನ್ನು ಸಂಪರ್ಕಿಸಲಿದೆ. ಆದರೆ ಇದರ ಮಧ್ಯೆ ರೈಲ್ವೇ ಅಂಡರ್‌ಪಾಸ್‌ ಒಂದು ನಿರ್ಮಾಣವಾಗಬೇಕಿದ್ದು, ಅದಕ್ಕೆ ಮುಂದಿನ ದಿನಗಳಲ್ಲಿ ಅನುದಾನ ಬಿಡುಗಡೆಯಾಗಬೇಕಿದೆ.

ತಾಂತ್ರಿಕ ಅಡ್ಡಿ
ಕಣ್ಣಗುಡ್ಡೆ, ಉಮಿಕಾನ ಮೈದಾನ ಪ್ರದೇಶದ ಜನತೆ ನಗರದ ಪ್ರದೇಶದಲ್ಲಿ ವಾಸಿಸುತ್ತಿದ್ದರೂ ಸುಸಜ್ಜಿತ ರಸ್ತೆ ಸಂಪರ್ಕವಿಲ್ಲದೆ 40 ವರ್ಷಗಳಿಂದ ಕಚ್ಚಾ ರಸ್ತೆ ಯಲ್ಲೇ ಸಾಗಬೇಕಾದ ಸ್ಥಿತಿ ಇತ್ತು. 

ಈ ಭಾಗದಲ್ಲಿ ರೈಲ್ವೇ ಹಳಿಯು ಹಾದು ಹೋಗುತ್ತಿರುವ ಪರಿಣಾಮ ರಸ್ತೆ ಸಾಗುವ ಜಾಗ ರೈಲ್ವೇ ಇಲಾಖೆಗೆ ಸೇರಿದ್ದು, ಈ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತ ಹಾಗೂ ಸರಕಾರ ರಸ್ತೆ ಅಭಿವೃದ್ಧಿಗೆ ಅನುದಾನ ನೀಡಿದರೂ ರೈಲ್ವೇ ಇಲಾಖೆಯ ತಾಂತ್ರಿಕ ಕಾರಣ ಕಾಮಗಾರಿಗೆ ಅಡ್ಡಿಯಾಗಿತ್ತು. ರಸ್ತೆ ಸಂಪರ್ಕ ಸರಿಯಿಲ್ಲದೆ ಈ ಪ್ರದೇಶ ದ್ವೀಪದಂತಾಗಿತ್ತು. ಸರಿಯಾದ ಬಸ್‌ನ ಸೌಲಭ್ಯವಿಲ್ಲದೆ, ಸ್ಥಳೀಯರು ದುಬಾರಿ ಬಾಡಿಗೆ ಕೊಟ್ಟು ಆಟೋಗಳಲ್ಲಿ ಸಾಗಬೇಕಾದ ಪರಿಸ್ಥಿತಿ ಇತ್ತು. ಅನ್ನಭಾಗ್ಯ ಯೋಜನೆಯಲ್ಲಿ ಸರಕಾರ ನೀಡಿದ ಉಚಿತ ಅಕ್ಕಿಯನ್ನು 100 ರೂ.ಬಾಡಿಗೆ ಕೊಟ್ಟು ಮನೆಗೆ ಕೊಂಡೊಯ್ಯಬೇಕಾಗಿತ್ತು.

1.32 ಕೋ.ರೂ. ಪಾವತಿ
ಈ ರಸ್ತೆಯು ಮನಪಾದ ವಾರ್ಡ್‌ ಸಂಖ್ಯೆ 36 ಹಾಗೂ 51ರಲ್ಲಿ ಹಾದು ಹೋಗುತ್ತಿದ್ದು, ರೈಲ್ವೇ ಇಲಾಖೆಯ ನಿವೇಶನದಲ್ಲಿ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕಿದ್ದರೆ ಇಲಾಖೆಯ ಪರವಾನಿಗೆ ಅತಿ ಅಗತ್ಯವಾಗಿದೆ. ಈಗ ರೈಲ್ವೇ ಬೋರ್ಡ್‌ ಚೇರ್‌ಮನ್‌ ಅವರಿಗೆ ಒತ್ತಡ ಹೇರಿ ಒಪ್ಪಿಗೆ ಪಡೆಯಲಾಗಿದೆ. ಪಾಲಿಕೆಯಿಂದ ಲೀಸ್‌ ಮಾದರಿಯಲ್ಲಿ 1.32 ಕೋ.ರೂ.ಗಳನ್ನು ರೈಲ್ವೇ ಇಲಾಖೆಗೆ ಪಾವತಿಸಲಾಗಿದೆ.

Advertisement

3 ತಿಂಗಳಲ್ಲಿ ಪೂರ್ಣ?
ಮಂಗಳೂರು-ಮೂಡಬಿದಿರೆ ರಸ್ತೆಯ ಕುಲಶೇಖರದಿಂದ ರಸ್ತೆ ಕಾಮಗಾರಿ ನಡೆಯ ಲಿದ್ದು, ಆರಂಭದ ಒಂದು ಕಿ.ಮೀ.ರಸ್ತೆಯ ಕಾಮಗಾರಿ ಫೆ. 5ಕ್ಕೆ ಆರಂಭಗೊಳ್ಳಲಿದ್ದು, ತಿಂಗಳೊಳಗೆ ಪೂರ್ಣಗೊಳ್ಳಲಿದೆ. ಬಳಿಕ ವಿಶೇಷ ಅನುದಾನ 10 ಕೋ. ರೂ.ಗಳ ರಸ್ತೆ ಕಾಮಗಾರಿ ನಡೆಯಲಿದ್ದು, 3 ತಿಂಗಳಲ್ಲಿ ಪೂರ್ಣಗೊಳ್ಳವ ನಿರೀಕ್ಷೆ ಇದೆ.

ಧೂಳಿನಿಂದ ಮುಕ್ತಿ?
ಎಷ್ಟೇ ಪ್ರಯತ್ನ ಮಾಡಿದರೂ ಅಭಿವೃದ್ಧಿ ಗಗನಕುಸುಮವಾಗಿತ್ತು. ಹೀಗಾಗಿ ಬೇಸಗೆಯಲ್ಲಿ ಧೂಳಿನಲ್ಲಿ ಹಾಗೂ ಮಳೆಗಾಲದಲ್ಲಿ ಕೆಸರಿನಲ್ಲಿ ಸಾಗಬೇಕಾದ ಸ್ಥಿತಿ ಇತ್ತು. ಆದರೆ ಈಗ ಯೋಜನೆಯಂತೆ ರಸ್ತೆ ಅಭಿವೃದ್ಧಿಗೊಂಡರೆ ಸ್ಥಳೀಯ ನಿವಾಸಿಗಳ ಧೂಳು- ಕೆಸರಿನ ಓಡಾಟಕ್ಕೆ ಮುಕ್ತಿ ದೊರೆಯಲಿದೆ.

ರಸ್ತೆ ಅಭಿವೃದ್ಧಿಯಿಂದಾಗಿ ಕಣ್ಣಗುಡ್ಡ, ಉಮಿಕಾನ ಮೈದಾನ, ಮೇಲ್ತೊಟ್ಟು, ಸೂರ್ಯನಗರ, ನೂಜಿ, ಸರಿಪಳ್ಳ, ಪುಳಿರೇ, ಕಲಾಯಿ, ಪ್ರಾದ್‌ ಸಾಬ್‌ ಕಾಲನಿ, ಕರ್ಪಿಮಾರ್‌, ದೆಕ್ಕಾಡಿ ಮೊದಲಾದ ಪ್ರದೇಶದ ಜನತೆಗೆ ಪ್ರಯೋಜನವಾಗಲಿದೆ. ಸಾವಿರಕ್ಕೂ ಅಧಿಕ ಕುಟುಂಬಗಳು ನೆಮ್ಮದಿಯ ನಿಟ್ಟುಸಿರು ಬಿಡಲಿವೆ.

10.70 ಕೋ.ರೂ.ಗಳಲ್ಲಿ ಅಭಿವೃದ್ಧಿ
ಈ ಭಾಗದ ಜನತೆಯ 40 ವರ್ಷಗಳ ಬೇಡಿಕೆ ಈಗ ಈಡೇರುತ್ತಿದೆ. ರೈಲ್ವೇ ಬೋರ್ಡ್‌ ಚೇರ್‌ಮನ್‌ ಅವರಿಗೆ ಒತ್ತಡ ಹೇರಿ ಪ್ರಸ್ತುತ ಕಾಮಗಾರಿಗೆ ಅನುಮತಿ ಪಡೆಯಲಾಗಿದೆ. ಆರಂಭದಲ್ಲಿ 70 ಲಕ್ಷ ರೂ.ವೆಚ್ಚದಲ್ಲಿ ಕಾಮಗಾರಿ ನಡೆಯಲಿದ್ದು, ಬಳಿಕ 10 ಕೋ.ರೂ.ಗಳಲ್ಲಿ 4 ಕಿ.ಮೀ.ರಸ್ತೆ ಅಭಿವೃದ್ಧಿಗೊಳ್ಳಲಿದೆ. ಕಣ್ಣೂರು ಸಂಪರ್ಕಿಸುವ ರಸ್ತೆಯಲ್ಲಿ ರೈಲ್ವೇ ಅಂಡರ್‌ ಪಾಸ್‌ ನಿರ್ಮಾಣವಾಗಲಿದ್ದು, ಅದಕ್ಕೆ ಶೀಘ್ರ ಅನುದಾನ ಮೀಸಲಿಡಲಾಗುವುದು.
– ಜೆ.ಆರ್‌. ಲೋಬೋ, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next