ಸುಬ್ರಹ್ಮಣ್ಯ: ಪ್ರಸಿದ್ಧ ನಾಗಾರಾಧನೆಯ ಪುಣ್ಯಕ್ಷೇತ್ರ ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದಲ್ಲಿ ಶುಕ್ರವಾರ ಹೊಸ್ತಾರೋಹಣ ಮತ್ತು ಕದಿರು ಕಟ್ಟುವ ಕಾರ್ಯವು ವಿವಿಧ ವೈದಿಕ ವಿಧಿ-ವಿಧಾನಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಪ್ರಾತಃಕಾಲ ಕುಕ್ಕೆಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರಿಗೆ ಪಂಚಾಮೃಮಹಾಭಿಷೇಕವನ್ನು ಶ್ರೀ ದೇಗುಲದ ಪ್ರಧಾನ ಅರ್ಚಕ ವೇ| ಮೂ| ಸೀತಾರಾಮ ಎಡಪಡಿತ್ತಾಯರು ನೆರವೇರಿಸಿದರು.
ಅಭಿಷೇಕದ ಬಳಿಕ ತೆನೆ ತರಲು ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯರು ದೇಗುಲದ ಗದ್ದೆಯಲ್ಲಿ ಬೆಳೆದ ಭತ್ತದ ತೆನೆಗೆ ದರ್ಪಣತೀರ್ಥ ನದಿಯ ತಟದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಭತ್ತದ ತೆನೆಯನ್ನು ದೀವಟಿಗೆ, ಬ್ಯಾಂಡ್, ವಾದ್ಯದ ನಿನಾದ ದೊಂದಿಗೆ, ಆನೆ, ಬಿರುದಾವಳಿಗಳ ಮೂಲಕ ಮಂತ್ರಘೋಷಗಳೊಂದಿಗೆ ಮೆರವಣಿಗೆಯಲ್ಲಿ ದೇಗುಲಕ್ಕೆ ತರಲಾಯಿತು. ಪ್ರದಕ್ಷಿಣೆ ಬಳಿಕ ಅರ್ಚಕರು ತೆನೆಯನ್ನು ಗರ್ಭಗುಡಿಗೆ ಕೊಂಡೊಯ್ದರು. ಬಳಿಕ ಶ್ರೀ ದೇವರ ಸನ್ನಿಧಿಯಲ್ಲಿ ಪ್ರಧಾನ ಅರ್ಚಕರು ಕದಿರು ಪೂಜೆ ನೆರವೇರಿಸಿದರು. ದೇವಸ್ಥಾನದ ಗರ್ಭಗುಡಿಗೆ ಕದಿರು ಕಟ್ಟಿದರು.
ಶ್ರೀ ದೇವಸ್ಥಾನದ ಪರಿವಾರ ಗುಡಿಗಳಿಗೆ, ದೇವಸ್ಥಾನದ ವಿವಿಧ ಭಾಗಗಳಿಗೆ ಕಟ್ಟಲು, ರಥಗಳಿಗೆ ಕಟ್ಟಲು ಗುರಿಕಾರರಿಗೆ, ಕಚೇರಿಗೆ ಕದಿರನ್ನು ಕಟ್ಟುವುದಕ್ಕೆ ತೆನೆ ವಿತರಿಸಿದ ಬಳಿಕ ದೇವಸ್ಥಾನದ ಆಡಳಿತ ಅಧಿಕಾರಿ ಹಾಗೂ ಸಿಬಂದಿ ವರ್ಗಕ್ಕೆ ತೆನೆ ವಿತರಿಸಲಾಯಿತು. ಸಹಸ್ರಾರು ಭಕ್ತರಿಗೆ ಕದಿರನ್ನು ಅರ್ಚಕ ಸತ್ಯ ನಾರಾಯಣ ನೂರಿತ್ತಾಯ ವಿತರಿಸಿದರು.
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್., ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲ್, ಆಡಳಿತ ಮಂಡಳಿ ಸದಸ್ಯರಾದ ಕೃಷ್ಣಮೂರ್ತಿ ಭಟ್, ಬಾಲಕೃಷ್ಣ ಗೌಡ ಬಳ್ಳೇರಿ, ಮಾಧವ ಡಿ., ದೇಗುಲದ ಹೆಬ್ಟಾರ್ ಷಣ್ಮುಖ ಉಪಾರ್ಣ, ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯರಾದ ಶಿವರಾಮ ರೈ, ಲೋಲಾಕ್ಷ ಕೈಕಂಬ, ಸುಧೀರ್ ಕುಮಾರ್ ಶೆಟ್ಟಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ವಿಮಲಾ ರಂಗಯ್ಯ ಉಪಸ್ಥಿತರಿದ್ದರು.
ವಿಶೇಷ ಪ್ರಸಾದ ಭೋಜನ
ಕುಕ್ಕೆ ಕ್ಷೇತ್ರದಲ್ಲಿ ಹೊಸ ಅಕ್ಕಿ ಊಟ (ನವಾನ್ನ ಭೋಜನ) ವಿಶೇಷ. ಬಗೆ ಬಗೆಯ ಖಾದ್ಯಗಳನ್ನು ಒಳಗೊಂಡ ವಿಶೇಷ ಭೋಜನ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಯಿತು. ಈ ಪ್ರಯುಕ್ತ ಭೋಜನ ಶಾಲೆಯನ್ನು ಸುಂದರವಾಗಿ ಅಲಂಕರಿಸಲಾಗಿತ್ತು.
ಗದ್ದೆಯಿಂದ ಕದಿರು
ಹಿಂದೆಲ್ಲ ಗದ್ದೆಗಳಿಂದ ಕದಿರನ್ನು ತಂದು ಹೊಸ್ತಾರೋಹಣ ದಿನ ವಿತರಿಸಲಾಗುತ್ತಿತ್ತು. ಈ ಬಾರಿ ದೇಗುಲದ ವತಿಯಿಂದ ದೇವರಗದ್ದೆಯಲ್ಲೇ ಬೆಳೆದ ತೆನೆಯನ್ನು ಭಕ್ತರಿಗೆ ವಿತರಿಸಲಾಯಿತು. ಹೀಗಾಗಿ, ಕದಿರಿನ ಕೊರತೆಯೂ ಉಂಟಾಗಲಿಲ್ಲ. ದೂರದೂರಿನ ಭಕ್ತರೂ ತೆನೆಗಳನ್ನು ಸ್ವೀಕರಿಸಿದರು.