Advertisement
ಹೋಳಿ ಹಬ್ಬದ ಆಚರಣೆಗೆ ಹಲವಾರು ವರ್ಷಗಳ ಇತಿಹಾಸವಿದೆ. ಫಾಲ್ಗುಣ ಮಾಸದ ಏಕಾದಶಿಯಿಂದ ಹುಣ್ಣಿಮೆ ಯವರೆಗೆ (ಅಂದರೆ ಈ ವರ್ಷ ಮಾ. 17 ರಿಂದ ಮಾ. 22ರವರೆಗೆ) ಕುಡುಬಿ ಜನಾಂಗದವರು ಹೋಳಿ ಹಬ್ಬವನ್ನು ಆಚರಿಸುತ್ತಾರೆ.
ಮುನ್ನ ದಿನವೇ ಹಬ್ಬದ ಸಿದ್ಧತೆಗಳು ಆರಂಭಗೊಂಡಿದ್ದು, ಏಕಾದಶಿಯ ದಿನ ಬೆಳಗಿನ ಜಾವಕ್ಕೂ ಮುನ್ನವೇ ಎಲ್ಲ ಕೂಡು ಕಟ್ಟುಗಳ ಸದಸ್ಯರೆಲ್ಲ ಆಯಾಯ ಭಾಗದ ಗುರಿಕಾರರ ಮನೆಗೆ ಬಂದು ಸೇರಬೇಕು. ಅಲ್ಲಿ ದೇವರ ಪ್ರತಿಷ್ಠಾಪನೆ, ಹಾಡುಗಳ ಮೂಲಕವೇ ವಿಧಿ- ವಿಧಾನ ಪೂರೈಸಿ, ಕೋಲಾಟ, ಗುಮ್ಮಟೆ ನೃತ್ಯ ಮಾಡಿ, ಬಳಿಕ ಗ್ರಾಮ ದೇವಸ್ಥಾನದಲ್ಲಿ ಕೋಲಾಟ, ಗುಮ್ಮಟೆ ನೃತ್ಯ ಮಾಡಲಾಗುತ್ತದೆ. ಬಳಿಕ ಮೊದಲೆರಡು ದಿನಗಳ ಕಾಲ ಹೊರ ಗ್ರಾಮಗಳ ಕುಡುಬಿ ಸಮುದಾಯದವರ ಮನೆಗೆ ಹೋಗಿ, 3 ನೇ ದಿನ ಅವರದೇ ಗ್ರಾಮಕ್ಕೆ ಬಂದು ಅಲ್ಲಿನ ಎಲ್ಲರ ಮನೆಗೂ ಹೋಗುತ್ತಾರೆ. 5 ನೇ ದಿನ ಮತ್ತೆ ಗುರಿಕಾರರ ಮನೆಯಲ್ಲಿ ಸೇರುತ್ತಾರೆ. 46 ಕೂಡು ಕಟ್ಟುಗಳು
ಉಡುಪಿ ಜಿಲ್ಲೆಯಲ್ಲಿ ಒಟ್ಟು 46 ಕೂಡು ಕಟ್ಟುಗಳಿವೆ. ಮಂದಾರ್ತಿ, ಕೊಕ್ಕರ್ಣೆ, ಹಾಲಾಡಿ, ಬೆಳ್ವೆ, ಬಾಕೂìರು, ಮುದ್ದೂರು, ಯಳಂತೂರು, ಶೇಡಿಮನೆ, ಹಿಲಿಯಾಣ, ಕಕ್ಕುಂಜೆ ಕಡೆಗಳೆಲ್ಲ ಕುಡುಬಿ ಮನೆತನಗಳಿವೆ. ಕುಡುಬಿಯವರ ಪ್ರಕಾರ ಕೂಡು ಕಟ್ಟು ಅಂದರೆ 1 ಗ್ರಾಮ ಅಂತ ಅರ್ಥ. ಗ್ರಾಮಕ್ಕೊಬ್ಬರು ಗುರಿಕಾರರಿರುತ್ತಾರೆ. 46 ಕೂಡು ಕಟ್ಟುಗಳು ಸಂಖ್ಯೆಗೆ ಅನುಗುಣವಾಗಿ 2 ಅಥವಾ ಅದಕ್ಕಿಂತ ಹೆಚ್ಚು ಪಂಗಡಗಳಾಗಿ ವಿಂಗಡಿಸಿ ಮನೆ – ಮನೆಗೆ ತೆರಳಿ ಗುಮ್ಮಟೆ ಹಾಗೂ ಕೋಲಾಟ ನೃತ್ಯ ಪ್ರದರ್ಶಿಸುತ್ತಾರೆ.
ಹಬ್ಬದ ಮುಕ್ತಾಯ
5ನೇ ದಿನ ಎಲ್ಲರೂ ಗುರಿಕಾರರ ಮನೆಯಲ್ಲಿ ಸೇರಿ ಅಲ್ಲಿಗೆ ಹಬ್ಬ ಮುಕ್ತಾಯ. ಗೆಜ್ಜೆ, ವೇಷ ಭೂಷಣ ಕಳಚಿ, ಎಲ್ಲರೂ ಸಾಮೂಹಿಕವಾಗಿ ಸ್ನಾನ ಮಾಡುತ್ತಾರೆ. ಆ ಬಳಿಕ ಪರಿಕರಗಳಿಗೆಲ್ಲ ಗುರಿಕಾರರು ಪೂಜೆ ಮಾಡಿದ ಅನಂತರ ಬೆಂಕಿ (ಕಾಮದಹನ ಮಾಡುವುದು) ಹಾಯುತ್ತಾರೆ. ಬಳಿಕ ಸಾಮೂಹಿಕವಾಗಿ ಊಟ ಮಾಡಿದ ಬಳಿಕ ಯುವಕರು, ಮಕ್ಕಳೆಲ್ಲ ಸೇರಿ ಗ್ರಾಮದಲ್ಲಿರುವ ಮನೆ- ಮನೆಗೆ ಹೋಗಿ ಬಣ್ಣ ಹಚ್ಚುವ ಮೂಲಕ ಹೋಳಿ ಹಬ್ಬ ಮುಗಿಯಿತು ಎನ್ನುವ ಸಂದೇಶ ರವಾನಿಸುತ್ತಾರೆ.
Related Articles
ವ್ರತಾಚರಣೆಯಲ್ಲಿರುವ ಶಿವನು ಮನ್ಮಥನಿಂದಾಗಿ ವ್ರತಭಂಗವಾಗಿ ಕೋಪಗೊಂಡಿರುತ್ತಾನೆ. ಅವನ ಕೋಪ ತಣಿಸುವ ಕಾರಣಕ್ಕಾಗಿ ಬುಡಕಟ್ಟು ಸಮುದಾಯದ ಕುಡುಬಿ ಜನರೆಲ್ಲ ಸೇರಿ ಹೋಳಿ ಹಬ್ಬವನ್ನು ಆಚರಿಸುತ್ತಾರೆ ಎನ್ನುವ ಹಿನ್ನೆಲೆಯಿದೆ. ಇದರಿಂದ ಶಿವನ ಕೋಪವು ಶಾಂತವಾಗಿ ಒಳಿತಾಗುತ್ತದೆ ಎನ್ನುವ ಪ್ರತೀತಿಯಿದೆ.
Advertisement
ವ್ರತಾಚರಣೆ ಮಹತ್ವಹೋಳಿ ಹಬ್ಬಕ್ಕೆ ನಮ್ಮಲ್ಲಿ ವಿಶೇಷ ಅರ್ಥವಿದೆ. ಹಬ್ಬಕ್ಕೆ 5 ಅಥವಾ 3 ದಿನಕ್ಕೆ ಮುಂಚೆ ಕೋಲು ಹಿಡಿಯುವುದು ಅಂದರೆ ವ್ರತಾಚರಣೆ ಆರಂಭಗೊಳ್ಳುತ್ತದೆ. ಕೋಲು ಹಿಡಿದವರು ಚಪ್ಪಲಿ ಹಾಕಬಾರದು, ಭಾರ ಹೊರಬಾರದು, ಬೇರೆಯವರ ಮನೆಯಲ್ಲಿ ಊಟ ಮಾಡಬಾರದು, ಮದಿರೆ – ಮಾನಿನಿ – ಮಾಂಸ ಸೇವನೆ ಮಾಡಬಾರದು.
ನಾರಾಯಣ ನಾಯ್ಕ, ಗೋಳಿಯಂಗಡಿ