ಬೆಂಗಳೂರು: ಕ್ಯಾಬ್ ಉದ್ಯಮದ ದರ ಸಮರ, ಸರ್ಕಾರದ ನಿರ್ಲಕ್ಷ್ಯಕ್ಕೆ ಪ್ರತಾಪ್ ಜೀವ ಬಲಿಯಾಗಿದೆ. ಟ್ಯಾಕ್ಸಿ, ಕ್ಯಾಬ್‌ಗಳಿಗೆ ಸರ್ಕಾರ 1 ಕಿ.ಮೀಗೆ ₹24 ದರ ನಿಗದಿ ಮಾಡಿದೆ. ಕೆಎಸ್‌ಟಿಡಿಸಿ ಚಾಲಕರು ಇದನ್ನು ಪಾಲಿಸುತ್ತಿದ್ದರೆ, ಖಾಸಗಿ ಕಂಪನಿಗಳು ನಿಯಮ ಗಾಳಿಗೆ ತೂರಿ ಗ್ರಾಹಕರನ್ನು ಆಕರ್ಷಿಸುತ್ತಿವೆ. ಕೆಎಸ್‌ಟಿಡಿಸಿ ಚಾಲಕರು ಸೊರಗುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಡಿಗೆ ದೊರೆಯದೇ ಆರ್ಥಿಕ ಸಂಕಷ್ಟಕ್ಕೀಡಾಗಿದ್ದ ಕೆಎಸ್‌ಟಿಡಿಸಿ ಕ್ಯಾಬ್ ಚಾಲಕ ಪ್ರತಾಪ್ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಮಧ್ಯರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ. ಪ್ರತಾಪ್ ಅವರ ಸಾವಿನೊಂದಿಗೆ ಕೆಎಸ್‌ಟಿಡಿಸಿ ಚಾಲಕರ ಸಮಸ್ಯೆಗಳು ತೆರೆದುಕೊಂಡಿವೆ ಎಂದು ತಿಳಿಸಿದರು.
ಇದನ್ನೂ ಓದಿ: ಏ.1 ರಿಂದ 45 ವರ್ಷ ಮೇಲಿನ ಎಲ್ಲರಿಗೂ ಲಸಿಕೆ: 2000 ಹೆಚ್ಚುವರಿ ಲಸಿಕಾ ಕೇಂದ್ರ: ಸುಧಾಕರ್
ಕೆಎಸ್‌ಟಿಡಿಸಿ ಕ್ಯಾಬ್‌ಗಳು ದರ ನಿಯಮ ಪಾಲಿಸುತ್ತಿದ್ದರೆ, ಖಾಸಗಿ ಕ್ಯಾಬ್‌ಗಳು ₹9ಕ್ಕೆ ಗ್ರಾಹಕರನ್ನು ಸೆಳೆಯುತ್ತಿವೆ. ಹೀಗಾಗಿ ಕೆಎಸ್‌ಟಿಡಿಸಿ ಕ್ಯಾಬ್‌ಗಳಿಗೆ ಗ್ರಾಹಕರೇ ಇಲ್ಲದಂತಾಗಿದೆ. ಚಾಲಕರು ಸಮಸ್ಯೆಗೆ ಸಿಲುಕಿದ್ದಾರೆ. ಇದರ ಜೊತೆಗೆ ವಿಮಾನ ನಿಲ್ದಾಣದ ಪಾರ್ಕಿಂಗ್‌ನಲ್ಲೂ ನಡೆಯುತ್ತಿರುವ ರಾಜಕೀಯ ಚಾಲಕರ ಕೊರಳು ಹಿಂಡುತ್ತಿದೆ.
ಸರ್ಕಾರ ದರ ಸಮರದತ್ತ ಕೂಡಲೇ ಗಮನಹರಿಸಬೇಕು. ನಿಯಮ ಪಾಲಿಸದೇ ಮಾರುಕಟ್ಟೆಯಲ್ಲಿ ಅನಗತ್ಯ ಪೈಪೋಟಿ ಸೃಷ್ಟಿ ಮಾಡುತ್ತಿರುವ, ಆ ಮೂಲಕ ಅಮಾಯಕ ಚಾಲಕರ ಪ್ರಾಣ ಕಸಿಯುತ್ತಿರುವ ಖಾಸಗಿ ಕಂಪನಿಗಳಿಗೆ ಎಚ್ಚರಿಕೆ ನೀಡಬೇಕು. ಅದರ ಮೂಲಕ ಅಮಾಯಕ, ಶ್ರಮಜೀವಿ ಕ್ಯಾಬ್ ಚಾಲಕರ ರಕ್ಷಣೆಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ನಾನು ಆಗ್ರಹಿಸುತ್ತೇನೆ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಇದನ್ನೂ ಓದಿ: ಕೋವಿಡ್ ನಿಯಂತ್ರಣ : ಮಾರ್ಕೆಟ್ ಪ್ರವೇಶಿಸಲು ಇಲ್ಲಿ ಶುಲ್ಕ ಪಾವತಿಸಬೇಕು..!