ಬೆಂಗಳೂರು: ಕರ್ನಾಟಕ ಮತ್ತು ಕೇರಳ ನಡುವಿನ ಕೆಎಸ್‌ಆರ್‌ಟಿಸಿ ಟ್ರೇಡ್‌ಮಾರ್ಕ್ ಪ್ರಕರಣದಲ್ಲಿ ಕೇಂದ್ರ ಟ್ರೇಡ್‌ಮಾರ್ಕ್ ರಿಜಿಸ್ಟ್ರಿ ಅಥವಾ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿ ಯಾವುದೇ ಆದೇಶ ಹೊರಡಿಸಿಲ್ಲ. ಹಾಗಾಗಿ, ಎಂದಿನಂತೆ ಕರ್ನಾಟಕದ “ಕೆಎಸ್‌ಆರ್‌ಟಿಸಿ’ ಬ್ರ್ಯಾಂಡ್ ಬಳಕೆ ಅಬಾಧಿತವಾಗಿರಲಿದೆ.
ಕೇಂದ್ರ ಟ್ರೇಡ್‌ಮಾರ್ಕ್ ರಿಜಿಸ್ಟ್ರಿಯಿಂದ ಇಂತಹ ಯಾವುದೇ ಸೂಚನೆ ಅಥವಾ ಆದೇಶವನ್ನು ಇದುವರೆಗೆ ಹೊರಡಿಸಲಾಗಿಲ್ಲ. ಹೀಗಿರುವಾಗ, ಕೆಎಸ್‌ಆರ್‌ಟಿಸಿಯು ತನ್ನ ಟ್ರೇಡ್ ಮಾರ್ಕ್‌ಗಳನ್ನು ಬಳಸುವಂತಿಲ್ಲ ಎಂಬ ವದಂತಿ ಸತ್ಯಕ್ಕೆ ದೂರವಾಗಿದೆ ಮತ್ತು ಇದನ್ನು ಕಾನೂನಾತ್ಮಕವಾಗಿಯೂ ಒಪ್ಪಲಾಗದು ಎಂದು ಕೆಎಸ್ ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಸ್ಪಷ್ಟಪಡಿಸಿದ್ದಾರೆ.
“ಕೇರಳ ಎಸ್‌ಆರ್‌ಟಿಸಿಯು, ಕೆಎಸ್‌ಆರ್‌ಟಿಸಿ ಅಥವಾ ಕರ್ನಾಟಕ ಸರಕಾರಕ್ಕೆ ನೋಟಿಸ್ ನೀಡಲು ಉದ್ದೇಶಿಸಿದೆ ಎಂಬ ಸುದ್ದಿ ಸಿಕ್ಕಿದೆ. ಅಂತಹ ನೋಟಿಸ್ ಬಂದರೆ ಉತ್ತರ ನೀಡಲಾಗುವುದು. ನಮ್ಮ ಹಕ್ಕುಗಳನ್ನು ರಕ್ಷಿಸಲು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ:ರವಿವಾರವೂ ಬ್ಯಾಂಕ್ ಖಾತೆಗೆ ಹಣ ಜಮೆ : ಆ. 1ರಿಂದ ಹಣಕಾಸು ವರ್ಗಾವಣೆಯಲ್ಲಿ ಹೊಸ ವ್ಯವಸ್ಥೆ
ಸಾಮಾನ್ಯವಾಗಿ ಟ್ರೇಡ್‌ಮಾರ್ಕ್ ಅನ್ನು ಏಜೆನ್ಸಿಯೊಂದರ ಮೂಲಕ ಅರ್ಜಿ ಹಾಕಿ ಪಡೆಯಬೇಕಾಗುತ್ತದೆ. ಕೆಎಸ್‌ಆರ್‌ಟಿಸಿ 2010ರಲ್ಲೇ ಸಲ್ಲಿಸಿ, 2013ರಲ್ಲಿ ಪಡೆದುಕೊಂಡಿದೆ. ಇದರ ಅವಧಿ 2023ರವರೆಗೂ ಇದೆ. ಇದೇ ರೀತಿ, ಕೇರಳ ಎಸ್ ಆರ್‌ಟಿಸಿ 2019ರಲ್ಲಿ ಟ್ರೇಡ್‌ಮಾರ್ಕ್‌ಗೆ ಏಜೆನ್ಸಿ ಮೂಲಕ ಅರ್ಜಿ ಸಲ್ಲಿಸಿತ್ತು. ಅನುಮೋದನೆಗೊಂಡರೂ ಪ್ರಮಾಣಪತ್ರ ಈಚೆಗೆ ಲಭ್ಯವಾಗಿರುವ ಸಾಧ್ಯತೆ ಇದೆ. ಆ ಪ್ರಮಾಣಪತ್ರವನ್ನೇ ಕೇರಳವು ತಪ್ಪಾಗಿ ಗ್ರಹಿಸಿದ್ದರಿಂದ ಈ ಗೊಂದಲ ಉಂಟಾಗಿರಬಹುದು ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.
ಕೆಎಸ್‌ಆರ್‌ಟಿಸಿ ಬ್ರ್ಯಾಂಡ್ ಬಳಕೆ ಎಂದಿನಂತೆ ಮುಂದುವರಿಯಲಿದೆ. ಈ ವಿಚಾರದಲ್ಲಿ ಕೇರಳ ಸರಕಾರ ಯಾವುದೇ ಹೇಳಿಕೆ ನೀಡಿದರೂ ಆತಂಕ ಪಡಬೇಕಾಗಿಲ್ಲ. ಅಗತ್ಯ ಬಿದ್ದರೆ ರಾಜ್ಯ ಸರಕಾರ ಕಾನೂನಾತ್ಮಕ ಹೋರಾಟ ನಡೆಸಲಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.